ಬೆಂಗಳೂರು, (ಡಿ.11): ಸೋಮನಹಳ್ಳಿ ಮುದುಕಿ ಹುಂಜ ಇಟ್ಕೊಂಡು ನನ್ನ‌ ಕೋಳಿಯಿಂದಲೇ ಬೆಳಗಾಗೋದು ಅಂದ್ಕೊಂಡ್ರೆ ಮೂರ್ಖತನ ಎಂದು ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಲೇವಡಿ ಮಾಡಿದ್ದಾರೆ. 

ಇಂದು (ಶುಕ್ರವಾರ) ಬೆಳಗ್ಗೆ ಅಷ್ಟೇ ಸಿದ್ದರಾಮಯ್ಯನವರ ಬೆಂಬಲಿಗರಾದ ಕುರುಬ ಸಮುದಾಯದ ಶಾಸಕರು, ರಾಘವೇಂದ್ರ ಹಿಟ್ನಾಳ್, ಬೈರತಿ ಸುರೇಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿ ಮಾಡಿ ಕೆಎಸ್ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದರು.

'ಸಿದ್ದರಾಮಯ್ಯ ನಾಯಕತ್ವ ಒಡೆಯಲು ಆರ್‌ಎಸ್‌ಎಸ್ ಹುನ್ನಾರ'

ಈ ಬಗ್ಗೆ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೋರಾಟ ಇಲ್ಲದೆ ಏನೂ ನಡೆಯೋದೇ ಇಲ್ಲ. ಹೋರಾಟದ ಬಗ್ಗೆ ಗೊತ್ತಿಲ್ಲದವರು ಹೀಗೆ ಮಾತನಾಡುತ್ತಾರೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಕುರುಬ ಸಮಾಜದವರು. ಅವರು ವಿಶ್ವಾಸದಿಂದ ಹೋರಾಟಕ್ಕೆ ಇಳಿದಿದ್ದಾರೆ. ಸರ್ಕಾರದ ವಿರುದ್ಧ ಈಶ್ವರಪ್ಪ ಅವರು ಹೋರಾಟ ಮಾಡುತ್ತಿಲ್ಲ ಎಂದು ವಿಶ್ವನಾಥ್ ಅವರು ಸಿದ್ದರಾಮಯ್ಯ ಟೀಂಗೆ ಟಾಂಗ್ ಕೊಟ್ಟರು. 

ಇದು ಜನರನ್ನು ದಿಕ್ಕು ತಪ್ಪಿಸಲು ಹೀಗೆ ಈಶ್ವರಪ್ಪ ಅವರ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ. ಯಾರ ಪ್ರಭಾವವನ್ನು ಯಾರೂ ತಗ್ಗಿಸಲು ಆಗುವುದಿಲ್ಲ. ಯಾರಾದರೂ ನಾನು ಇಲ್ಲದೆ ಈ ಸಮಾಜ ಇಲ್ಲ ಅಂದು ಕೊಂಡಿದ್ದರೆ ಅವರಂತಹ ಮೂರ್ಖರು ಬೇರೆ ಯಾರೂ ಇಲ್ಲ. ಪ್ರತಿ ವ್ಯಕ್ತಿಗೆ ಸಮಾಜ ಅನಿವಾರ್ಯವೇ ಹೊರತು ಸಮಾಜಕ್ಕೆ ಯಾರೋಬ್ಬರೂ ಅನಿವಾರ್ಯ ಅಲ್ಲ. ಸೋಮನಹಳ್ಳಿ ಮುದುಕಿ ಹುಂಜ ಇಟ್ಕೊಂಡು ನನ್ನ‌ ಕೋಳಿಯಿಂದಲೇ ಬೆಳಗಾಗೋದು ಅಂದ್ಕೊಂಡ್ರೆ ಮೂರ್ಖತನ ಎಂದು ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಲೇವಡಿ ಮಾಡಿದರು.

ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವ ಹೋರಾಟ ನಮ್ಮದು, ಇದು ಯಾರ ಪ್ರಭಾವನ್ನು ಕುಗ್ಗಿಸಲು ಅಲ್ಲ. ನಮ್ಮ ಹೋರಾಟಕ್ಕೆ ಆರ್‌ಎಸ್‌ಎಸ್‌ ಬೆಂಬಲ ಕೊಟ್ಟರೆ ತಪ್ಪೇನಿದೆ? ಆರ್‌ಎಸ್‌ಎಸ್ ಸಮಾಜ ಒಡೆಯುತ್ತದೆ ಅನ್ನೋ ಹೇಳಿಕೆ ದಿಕ್ಕಿತಪ್ಪಿಸುವ ಹೇಳಿಕೆ ಎಂದು ತಿರುಗೇಟು ನೀಡದರು.