ಕಿಂಗ್‌ಮೇಕರ್ ಎಂದುಕೊಂಡಿದ್ದ ಕುಮಾರಸ್ವಾಮಿ: ಯೋಗೇಶ್ವರ್
ವಿಧಾನಸಭೆ ಚುನಾವಣೆ ವೇಳೆ ಯಾರಿಗೂ ಬಹುಮತ ಬರುವುದಿಲ್ಲ ನಾನು ಕಿಂಗ್ ಮೇಕರ್ ಆಗುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಂದುಕೊಂಡಿದ್ದರು. ಅವರು ಚನ್ನಪಟ್ಟಣದಲ್ಲಿ ಗೆದ್ದರು, ಆದರೆ ಅವರ ಪಕ್ಷ ರಾಮನಗರ, ಮಂಡ್ಯ ಸೇರಿದಂತೆ ಬಹುತೇಕ ಕಡೆ ಸೋಲುಭವಿಸಿತು. ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳವೇ ಕಾರಣ: ಸಿ.ಪಿ.ಯೋಗೇಶ್ವರ್
ಚನ್ನಪಟ್ಟಣ(ಅ.09): ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಜಗಳದ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಯಿತು. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಪಕ್ಷದ ವರಿಷ್ಠರು ನಿರ್ಧರಿಸಿದ್ದು, ಇದಕ್ಕೆ ಎಲ್ಲಾ ಕಾರ್ಯಕರ್ತರು ಬೆಂಬಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಪಕ್ಷಗಳ ಕಾರ್ಯಕರ್ತರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ವಿರೋಧಿಸಿಕೊಂಡು ಕೆಲಸ ಮಾಡಿದ್ದಾರೆ. ಆದರೀಗ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ವೈಯಕ್ತಿಕ ದ್ವೇಷ, ಭಿನ್ನಾಭಿಪ್ರಾಯ ಮರೆತು ಅಣ್ಣತಮ್ಮಂದಿರಂತೆ ಜೆಡಿಎಸ್ ಜತೆ ಒಗ್ಗೂಡಿ ಕೆಲಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಯಾರೇ ಮೈತ್ರಿ ಅಭ್ಯರ್ಥಿಯಾದರೂ ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಉದ್ಯೋಗ ಸೃಷ್ಟಿ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ: ಡಿಕೆಶಿ
ಎರಡು ಬಾರಿ ಸೋಲು:
2018 ಹಾಗೂ 2023ರಲ್ಲಿ ಎರಡು ಬಾರಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದೇನೆ. ನಾನು ತಾಲೂಕಿನಲ್ಲಿ ಸೋತರೆ ಜೆಡಿಎಸ್ ರಾಜ್ಯದಲ್ಲಿ ಉತ್ತಮ ಫಲಿತಾಂಶ ದಾಖಲಿಸಲಿಲ್ಲ. ನಾನು ಸೋತ ಮಾತ್ರಕ್ಕೆ ಮೈತ್ರಿಗೆ ಮುಂದಾದೆ ಎಂದು ಕಾರ್ಯಕರ್ತರು ಭಾವಿಸಬಾರದು. ವರಿಷ್ಠರ ಮಟ್ಟದಲ್ಲಿ ಮೈತ್ರಿ ನಡೆದಿದ್ದರಿಂದ ನಾನು ಮೈತ್ರಿ ವಿಚಾರ ಪ್ರಸ್ತಾಪಿಸಿದೆ ಎಂದು ತಿಳಿಸಿದರು.
ನಾನು ಕಳೆದ 25 ವರ್ಷಗಳಿಂದ ಅವರ ಮುಖವನ್ನೇ ನೋಡದೇ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಬಿಜೆಪಿ-ಹಾಗೂ ಜೆಡಿಎಸ್ ಕಾರ್ಯಕರ್ತರು ಪರಸ್ಪರ ವಿರೋಧ ಮಾಡಿಕೊಂಡೇ ರಾಜಕಾರಣ ಮಾಡಿದ್ದಾರೆ. ಎರಡು ಪಕ್ಷದ ಕೆಲ ಕಾರ್ಯಕರ್ತರು ಆಗಾಗ ಪಕ್ಷ ಬದಲಿಸಿದ್ದಾರೆ. ಆದರೆ, ಎರಡು ಬಾರಿಯೂ ಆದ ಸೋಲಿನಿಂದ ಕಾರ್ಯಕರ್ತರು ಕಂಗೆಟ್ಟಿದ್ದಾರೆ. ನಮ್ಮಬ್ಬಿರ ಜಗಳದಲ್ಲಿ ಕಾಂಗ್ರೆಸ್ ಲಾಭ ಮಾಡಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಿಂಗ್‌ಮೇಕರ್ ಎಂದುಕೊಂಡಿದ್ದ ಎಚ್‌ಡಿಕೆ:
ವಿಧಾನಸಭೆ ಚುನಾವಣೆ ವೇಳೆ ಯಾರಿಗೂ ಬಹುಮತ ಬರುವುದಿಲ್ಲ ನಾನು ಕಿಂಗ್ ಮೇಕರ್ ಆಗುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಂದುಕೊಂಡಿದ್ದರು. ಅವರು ಚನ್ನಪಟ್ಟಣದಲ್ಲಿ ಗೆದ್ದರು, ಆದರೆ ಅವರ ಪಕ್ಷ ರಾಮನಗರ, ಮಂಡ್ಯ ಸೇರಿದಂತೆ ಬಹುತೇಕ ಕಡೆ ಸೋಲುಭವಿಸಿತು. ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳವೇ ಕಾರಣ. ಈ ವಿಚಾರವನ್ನು ನಾವು ಮೊದಲೇ ಆಲೋಚನೆ ಮಾಡಿದ್ದರೆ ಇಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಕ್ರಾಂತಿ ವೇಳೆಗೆ ಪತನ:
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸರ್ಕಾರ ಕಾರ್ಯವೈಖರಿ ಬಗ್ಗೆ ಶಾಮನೂರು ಶಿವಶಂಕರಪ್ಪ, ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ ಸೇರಿದಂತೆ ಸಾಕಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಣ್ಣ ನಾಲ್ಕು ಡಿಸಿಎಂ ಮಾಡಿ ಎಂದರೆ ಡಿ.ಕೆ.ಶಿವಕುಮಾರ್ ತಾವೊಬ್ಬರೇ ಉಪಮುಖ್ಯಮಂತ್ರಿ ಇರಬೇಕೆಂದು ಬಯಸಿದ್ದಾರೆ. ಕಾಂಗ್ರೆಸ್ ಸರ್ಕಾರ ಆಂತರಿಕ ಕಚ್ಚಾಟದಿಂದ ಸಂಕ್ರಾಂತಿ ಒಳಗೆ ಬಿದ್ದರೂ ಆಶ್ಚರ್ಯವಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಶಿವಕುಮಾರ್ ಬಿಡುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪರಸ್ಪರ ಕಾಲೆಳೆಯುತ್ತಿದ್ದಾರೆ. ನಾನು ಹುದ್ದೆಯಿಂದ ಕೆಳಗಿಳಿದರೆ ಶಿವಕುಮಾರ್ ಸಿಎಂ ಆಗಬಾರದು ಎಂಬುದು ಸಿದ್ದರಾಮಯ್ಯ ಇಂಗಿತ. ಇವರ ಈ ಕಚ್ಚಾಟದಿಂದಾಗಿ ಸರ್ಕಾರ ಆದಷ್ಟು ಬೇಗ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಡಿಸಿಎಂ ಕೊಡುಗೆ ಏನು:
ಉಪಮುಖ್ಯಮಂತ್ರಿ ಆದ ಬಳಿಕ ತಾಲೂಕಿನ ಅಭಿವೃದ್ಧಿಗೆ ಡಿ.ಕೆ.ಶಿವಕುಮಾರ್ ಯಾವುದೇ ಕೊಡುಗೆ ನೀಡಲಿಲ್ಲ. ಕೊಡುಗೆ ಇರಲಿ ಆನೆ ದಾಳಿಯಿಂದ ಕಂಗೆಟ್ಟಿರುವ ಜಿಲ್ಲೆಯ ಜನರಿಗೆ ಶಾಶ್ವತ ಪರಿಹಾರ ಕೊಡಿಸಲು ಮುಂದಾಗಿಲ್ಲ. ಕನಕಪುರದಲ್ಲಿ 8 ಕಿ.ಮಿ. ಬೇಲಿ ನಿರ್ಮಿಸಿದರೆ ಆನೆಗಳು ಜಿಲ್ಲೆಗೆ ನುಗ್ಗುವುದಿಲ್ಲ. ಆದರೆ, ಅವರದೇ ಸರ್ಕಾರವಿದ್ದರೂ ಸಮಸ್ಯೆ ಪರಿಹರಿಸಿ ಬೇಲಿ ನಿರ್ಮಿಸಲು ಅವರಿಗೆ ಆಗಿಲ್ಲ ಎಂದು ದೂರಿದರು.
ಫ್ರೀ ಗ್ಯಾರಂಟಿ ಕೊಟ್ಟು ಪಂಜಾಬ್ ಸರ್ಕಾರ ದಿವಾಳಿ: ಡಿಕೆಶಿ ನೋ ರಿಯಾಕ್ಷನ್..!
ಮೂರು ಬಾರಿ ಸಂಸದರಾದರೂ ಡಿ.ಕೆ.ಸುರೇಶ್ ಏನು ಮಾಡಲಿಲ್ಲ. ತಾಲೂಕಿನ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ಪಂಚಾಯಿತಿಗಳಿಗೆ ಹೋಗಿ ಬರೀ ಸಭೆ ನಡೆಸಿದರೆ ಸಮಸ್ಯೆ ಬಗೆಹರಿಯಲ್ಲ. ಅವರು ಸಂಸದರಾದ ನಂತರ ಅವರ ಅನುದಾನದಲ್ಲಿ ತಾಲೂಕಿನಲ್ಲಿ ಯಾವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಮುಖಂಡರಾದ ಮಲುವೇಗೌಡ, ಕೆ.ಟಿ.ಜಯರಾಮು, ಮುದ್ದುಕೃಷ್ಣ, ಆನಂದಸ್ವಾಮಿ, ಅರಳಾಳುಸಂದ್ರ ಶಿವಪ್ಪ ಇತರರಿದ್ದರು.