ದೇಶದ್ರೋಹ ಎಂದರೇನು? ಸಿದ್ದುಗೆ ಬಿಜೆಪಿ ಶಾಸಕ ಗುದ್ದು..!
* ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನ ವಿಚಾರಣೆ ನೆಪದಲ್ಲಿ ಪೊಲೀಸ ಹಲ್ಲೆ ಆರೋಪ
* ಕಾಂಗ್ರೆಸ್- ಬಿಜೆಪಿ ನಾಯಕರ ಆರೋಪ- ಪ್ರತ್ಯಾರೋಪ
* ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ತಿರುಗೇಟು
ಉಡುಪಿ, (ಜುಲೈ.09) ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನ ವಿಚಾರಣೆ ನೆಪದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ಇದೀಗ ರಾಜಕೀಯ ಬಣ್ಣ ಪಡೆಯುತ್ತಿದೆ.
ಹೌದು...ಈ ಪ್ರಕಟಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ನಡುವೆ ಟ್ವಿಟ್ಟರ್ ವಾರ್ ನಡೆದಿದೆ.
ಎಲ್ಲಾ ಹುದ್ದೆಗೂ ಡೀಲ್ ಮಾಡಿ ಹಣ ಮಾಡುತ್ತಿದ್ದಾರೆ : ಸಿದ್ದರಾಮಯ್ಯ
ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಆಗ್ರಹಿಸಿದ್ದಾರೆ.
ಸಿದ್ದುಗೆ ಶಾಸಕ ಸುನೀಲ್ ಕುಮಾರ್ ಗುದ್ದು
ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಟ್ವಿಟರ್ ಮೂಲಕವೇ ತಿರುಗೇಟು ನೀಡಿದ್ದು,ಕಾಂಗ್ರೆಸ್ ಕಾರ್ಯಕರ್ತ ಜಾಲತಾಣದಲ್ಲಿ ಈ ಹಿಂದೆ ಯಾವ ಪೋಸ್ಟ್ ಹಾಕಿದ್ದಾನೆ ಎಂಬ ಅರಿವಿಲ್ಲದೆ ಸಿದ್ದರಾಮಯ್ಯ ಸಮರ್ಥಿಸಿರುವುದು ಅವರ ಬದ್ಧತೆಯನ್ನು ಪ್ರಶ್ನಿಸುತ್ತದೆ. ಸಮರ್ಥಿಸುವ ಭರದಲ್ಲಿ ಸೈನಿಕರನ್ನು ಸಿದ್ದರಾಮಯ್ಯ ಅವಮಾನಿಸುತ್ತಿದ್ದಾರೆ. ದೇಶದ್ರೋಹಿ ವ್ಯಕ್ತಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ ಎಂದು ಎಂದಿದ್ದಾರೆ.
ದೇಶದ್ರೋಹ ಎಂದರೇನು ಎಂದು ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ. ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಈಗ ಕಾರ್ಕಳದಲ್ಲಿ ಪೊಲೀಸ್ ಬಂಧಿಸಿದೆ. ಇದು ನಮ್ಮ ಕಾಲ. ಅತ್ತಂತೆ ನಟಿಸುವವರ ಸಮರ್ಥನೆಗೆ ನೀವು ಬೇಗ ಬರುತ್ತಿರಿ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.
ಕೆಜೆ ಹಳ್ಳಿ ಗಲಭೆ - ನಿಮ್ಮ ಸಮರ್ಥನೆ, ಮಂಗಳೂರು ಗಲಭೆ- ನಿಮ್ಮ ಸಮರ್ಥನೆ, ಬೆಂಗಳೂರಿನ ಗೌರಿಪಾಳ್ಯದಲ್ಲಿ ವೈದ್ಯರ ಮೇಲೆ ಹಲ್ಲೆ - ನಿಮ್ಮ ಸಮರ್ಥನೆ, ಹಿಂದು ಕಾರ್ಯಕರ್ತರ ಕಗ್ಗೊಲೆ - ನಿಮ್ಮ ಸಮರ್ಥನೆ, ಕೊಲೆಗಡುಕ ಎಸ್ ಡಿ ಪಿಐ, ಪಿಎಫ್ ಐ ಸಂಘಟನೆ - ನಿಮ್ಮ ಸಮರ್ಥನೆ ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.