ಬೆಂಗಳೂರು, (ಜ.24):  ಜಮೀರ್​​ಗೆ ಬುದ್ಧಿ ಸ್ಥಿಮಿತವಾಗಿದೆ, ಅವರದ್ದು ಎಲುಬಿಲ್ಲದ ನಾಲಿಗೆ  ಎಂದು ಮಾಜಿ ಸಚಿವ ಜಮೀರ್​ ಅಹ್ಮದ್ ಖಾನ್​​ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಇಂದು (ಶುಕ್ರವಾರ) ವಿಧಾನಸೌಧದಲ್ಲಿ ಮಾತನಾಡಿದ ರೇಣುಕಾಚಾರ್ಯ, ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಜಮೀರ್ ಮಾತನಾಡಿದ್ರೆ ನಾನೂ ಕೂಡ ಅದೇ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಜಮೀರ್ ಆಹ್ಮದ್ ಖಾನ್‌ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. 

'ಮುಸ್ಲಿಮರ ಕೇರಿಗೆ ಬಂದ ಹಣ ಹಿಂದುಗಳ ಕೇರಿಗೆ ನೀಡುವೆ'

ಚಾಮರಾಜಪೇಟೆಯಲ್ಲಿ ದಂಧೆ ಮಾಡಿಕೊಂಡು ಪುಟ್‌ಪಾತ್ ನಲ್ಲಿದ್ದ ಚಿಲ್ಲರೆ ಗಿರಾಕಿ ಜಮೀರ್ ಅಹ್ಮದ್ ಖಾನ್‌ ಅವರನ್ನು ಕರೆದುಕೊಂಡು ಬಂದು ಮಂತ್ರಿ ಮಾಡಿದ್ದ ದೇವೇಗೌಡರಿಗೆ ಹಾಗೂ ಅಣ್ಣ ಕುಮಾರಣ್ಣ ಎನ್ನುತ್ತಲೆ ಕುಮಾರಸ್ವಾಮಿ ಅವರಿಗೆ ಜಮೀರ್ ಅಹ್ಮದ್ ಏನೂ ಮಾಡಿದರು ಎಂಬುದು ನನಗೆ ಗೊತ್ತಿದೆ ಎಂದು ಕಿಡಿಕಾರಿದರು.

 ಮುಸ್ಲಿಂ ಸಮುದಾಯದ ಬಗ್ಗೆ ನಾನು ಹೇಳಿಕೆ ನೀಡಿರುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಇದೇ ಸಂದರ್ಭದಲ್ಲಿ ರೇಣುಕಾಚಾರ್ಯ ಸ್ಪಷ್ಟನೆ ನೀಡಿದರು.

ಪೌರತ್ವ ಕಾಯ್ದೆ ಅರಿವು ಕಾರ್ಯಕ್ರಮಗಳಿಗೆ ಮುಸ್ಲಿಂ ಸಮುದಾಯದ ಯುವಕರು ಹೋಗದಂತೆ ಫತ್ವಾ ಹೊರಡಿಸಿ ತಡೆಯಲಾಗಿತ್ತು. ಇದರಿಂದ ನನಗೆ ನೋವಾಗಿತ್ತು, ಅದರಿಂದಾಗಿ ಹಾಗೆ ಹೇಳಿದ್ದೆ ಎಂದು ಅಂದು ಹೇಳಿದ್ದ ತಮ್ಮ ಮಾತಿಗೆ ಸ್ಪಷ್ಟಪಡಿಸಿದರು.

ಮತ್ತೊಂದು ವಿವಾದ ಮೈಮೇಲೆಳೆದುಕೊಂಡ ರೇಣುಕಾಚಾರ್ಯ ವಿರುದ್ಧ ಸಿಡಿದೆದ್ದ ಮುಸ್ಲಿಮರು

ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹಾಗೂ ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಶೇಖರಣೆ ಮಾಡಿರುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಜಮೀರ್ ಕೂಡು ಕಿಡಿಕಾರಿದ್ದರು.

 ರೇಣುಕಾಚಾರ್ಯ ಒಬ್ಬ ಮಾನಸಿಕ ಅಸ್ವಸ್ಥ. ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುವ ರೇಣುಕಾಚಾರ್ಯ‌ನನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿರುವ ಉದ್ದೇಶವಾದರು ಏನು?  ಸಚಿವ ಸಂಪುಟದಲ್ಲಿ ಸ್ಥಾನ ಸಿಗದ‌ ಕಾರಣ ರೇಣುಕಾಚಾರ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ತಮ್ಮ ಮರುಕವಿದೆ ಎಂದು ಲೇವಡಿ ಮಾಡಿದ್ದರು.