MP Renukacharya ಒಂದ್ ಕೆಟ್ಟ ಕೆಲಸ ಮಾಡಿ ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಶಾಸಕ
* ಒಂದ್ ಕೆಟ್ಟ ಕೆಲಸ ಮಾಡಿ ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ
* ಈ ಒಂದು ಕೆಟ್ಟ ಕೆಲಸದಿಂದ ಸಾರ್ವಜನಿಕ ಟೀಕೆಗೆ ಗುರಿ
* ಕೊರೋನಾ1 ಹಾಗೂ 2ನೇ ಅಲೆ ವೇಳೆ ಕ್ಷೇತ್ರದಲ್ಲಿ ಸಾಕಷ್ಟು ಶ್ರಮಿಸಿದ್ದ ರೇಣುಕಾಚಾರ್ಯ
ದಾವಣಗೆರೆ, (ಜ.10): ಕಳೆದ ಬಾರಿ ಕೋವಿಡ್ ಐಸೋಲೇಷನ್ ಕೇಂದ್ರಗಳಿಗೆ ತೆರಳಿ ಕೊರೋನಾ(Coronavirus) ಬಗ್ಗೆ ಜಾಗೃತಿ ಮೂಡಿಸಿ, ಸೋಂಕಿತರಿಗೆ ಧೈರ್ಯ ತುಂಬಿದ್ದ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಹೊನ್ನಾಳಿ(Honnali) ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಇದೀಗ ಕೋವಿಡ್ ರೂಲ್ಸ್ ಗಾಳಿಗೆ ತೂರಿ ಸುದ್ದಿಯಾಗಿದ್ದಾರೆ.
ಹೌದು...ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಬಹಳಷ್ಟು ಜನ ಸಂಖ್ಯೆಯಲ್ಲಿ ಸೇರಿದ್ದ ಜನಸಮೂಹದ ಮಧ್ಯೆ ಹೋರಿ ಸ್ಪರ್ಧೆಗೆ ಚಾಲನೆ ಕೊಟ್ಟಿದ್ದಾರೆ.
Honnali: ಮತ್ತೆ ಫೀಲ್ಡಿಗಿಳಿದ ರೇಣುಕಾಚಾರ್ಯ: ಕರ್ಫ್ಯೂ ವೇಳೆ ಕೋವಿಡ್ ಜಾಗೃತಿ
ಹೋರಿ ಸ್ಪರ್ಧೆ ಕಾರ್ಯಕ್ರಮದಲ್ಲೂ ಯಾವುದೇ ಸಾಮಾಜಿಕ ಅಂತರ ಇರಲಿಲ್ಲ, ಮಾಸ್ಕ್ ಧರಿಸಿದವರ ಸಂಖ್ಯೆಯೂ ವಿರಳವಾಗಿತ್ತು.ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಅವರನ್ನು ಜನರು ಹಾಗೂ ಅಭಿಮಾನಿಗಳು ಎತ್ತಿಕೊಂಡು ಮೆರವಣಿಗೆ ಮಾಡಿದ್ದಾರೆ.
ಈ ಮೂಲಕ ಕೊರೋನಾ ಮಾರ್ಗಸೂಚಿಗಳನ್ನ ಉಲ್ಲಂಘಟಿಸಿದ್ದಾರೆ.
ನಿನ್ನೆ (ಜನವರಿ 9) ವೀಕೆಂಡ್ ಕರ್ಫ್ಯೂ ವೇಳೆಯಲ್ಲಿಯೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ರೇಣುಕಾಚಾರ್ಯ ಭಾಗಿ ಆಗಿದ್ದರು. ತಮ್ಮ ಸರ್ಕಾರದ ನಿಯಮಗಳನ್ನೇ ಶಾಸಕರು ಉಲ್ಲಂಘಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಅಗತ್ಯ ಏನಿದೆ? ಇದರಿಂದ ಕೋವಿಡ್ ಹರಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಸಾಲದಕ್ಕೆ ಮನಬಂದಂತೆ ಟ್ರಾಲ್ ಸಹ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಕೋವಿಡ್ ನಿಯಮ ಉಲ್ಲಂಘನೆಯಾದಲ್ಲಿ ಎಂಪಿ ರೇಣುಕಾಚಾರ್ಯ ಮಾಡಿರುವುದು ಕಾನೂನು ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಇದಕ್ಕೆ ಸರ್ಕಾರ ಉತ್ತರಿಸಬೇಕಿದೆ.
ಕ್ಷಮೆಯಾಚಿಸಿದ ರೇಣುಕಾಚಾರ್ಯ
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರೇಣುಕಾಚಾರ್ಯ, ಈ ಘಟನೆ ಬಗ್ಗೆ ಕ್ಷೆಮೆಯಾಚಿಸಿದ್ದಾರೆ.
ನನ್ನಿಂದ ತಪ್ಪಾಗಿದೆ. ಈ ಘಟನೆ ಬಗ್ಗೆ ನಾನು ಬಹಿರಂಗವಾಗಿ ಕ್ಷಮೆ ಯಾಚಿಸುವೆ. ಕೋವಿಡ್ ವೇಳೆ ಚೆನ್ನಾಗಿ ಕೆಲಸ ಮಾಡಿದ್ದೆ. ಆದ್ರೆ ಇಂದಿನ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಹಿನ್ನೆಲೆ ನಾನು ರಾಜ್ಯದ ಜನತೆಗೆ ವಿಲನ್ ರೀತಿ ಕಾಣುತ್ತಿರುವೆ. ಕಾಂಗ್ರೆಸ್ ಪಾದಯಾತ್ರೆ ಖಂಡಿಸಿದ್ದೆ. ಈ ಘಟನೆಯಿಂದ ಪಾದಯಾತ್ರೆ ಖಂಡಿಸುವ ನೈತಿಕತೆ ಕಳೆದು ಕೊಂಡಿದ್ದೇನೆ. ದಯಮಾಡಿ ಕ್ಷಮಿಸಿ ಎಂದು ರಾಜ್ಯದ ಜನತೆಗೆ ಶಾಸಕ ರೇಣುಕಾಚಾರ್ಯ ಬಹಿರಂಗ ಕ್ಷಮೆ ಕೇಳಿದ್ದಾರೆ.
ಟೀಕೆಗೆ ಗುರಿಯಾದ ರೇಣುಕಾಚಾರ್ಯ
ನೂರು ಒಳ್ಳೆಯ ಕೆಲಸ ಮಾಡಿ ಒಂದೇ ಒಂದು ಕೆಟ್ಟ ಕೆಲಸ ಮಾಡಿದರೆ, ಕೊನೆಗೆ ಮನಃಪಟಲದಲ್ಲಿ ನೆನಪಲ್ಲುಳಿಯುವುದು ಕೆಟ್ಟ ಕೆಲಸವೇ ಹೊರತು ಒಳ್ಳೆಯ ಕೆಲಸವಲ್ಲ. ಇದೀಗ ಇದು ರೇಣುಕಾಚಾರ್ಯಗೆ ಅನ್ವಯಿಸುತ್ತದೆ. ಮೊದಲನೇ ಅಲೆ, ಎರಡನೇ ಅಲೇ ವೇಳೆ ಹಗಲಿರುಳು ಕ್ಷೇತ್ರದಲ್ಲಿ ಶ್ರಮಿಸಿದ್ದರು.
ಫುಡ್ ಕಿಟ್, ಬೆಡ್, ಆಕ್ಸಿಜನ್ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ಸೌಕರ್ಯಗಳನ್ನ ಕ್ಷೇತ್ರದ ಜನರಿಗೆ ಒದಗಿಸಿಕೊಟ್ಟಿದ್ದರು. ಅಲ್ಲದೇ ಕೋವಿಡ್ ರೋಗಿಗಳಿಗೆ ಧೈರ್ಯ ತುಂಬಲು ಸ್ವತಃ ರೇಣುಕಾಚಾರ್ಯ ಅವರೇ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು, ಅಲ್ಲದೇ ಅವರ ಪತ್ನಿ ಸಮೇತ ಕ್ಷೇತ್ರದ ಜನರ ಆರೋಗ್ಯವನ್ನ ಕಾಡುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಆದ್ರೆ, ಇದೀಗ ಮೂರಲೇ ಅಲೆಯಲ್ಲಿ ತಾವೇ ಖುದ್ದು ಮಾರ್ಗಸೂಚಿ ಉಲ್ಲಂಘಿಸಿ ಅಪಹಾಸ್ಯಕ್ಕೀಡಾಗಿದ್ದಾರೆ.ಕಾಂಗ್ರೆಸ್ ಪಾದಯಾತ್ರೆಯನ್ನು ಟೀಕಿಸಿದ್ದ ರೇಣುಕಾಚಾರ್ಯ ಮಾಡಿದ್ದೇನು.? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.