ಲೋಕಸಭಾ ಚುನಾವಣೆ 2024: ಬೆಳಗಾವಿಯಿಂದ ಸ್ಪರ್ಧೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಿಷ್ಟು

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿಯೂ ಆಗಿಲ್ಲ. ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ 

BJP MLA Balachandra Jarkiholi React to Lok Sabha Elections 2024 grg

ಬೆಳಗಾವಿ(ಆ.23):  ಮುಂಬರುವ ಬೆಳಗಾವಿ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಕೆಎಂಎಫ್‌ ಮಾಜಿ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿಯೂ ಆಗಿಲ್ಲ. ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಮೇಲೆಯೇ ನಡೆಯುತ್ತದೆ. ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರ ಪರವಾಗಿ ಎಲ್ಲರೂ ಕೆಲಸ ಮಾಡುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿನ ಬಣಗಳಿಂದಾಗಿ ಜನರು ನಮ್ಮ ವಿರುದ್ಧ ತೀರ್ಪು ನೀಡಿದ್ದಾರೆ. ಈಗ ಜಿಲ್ಲೆಯಲ್ಲಿ ಪಕ್ಷದಲ್ಲಿ ಯಾವುದೇ ಬಣಗಳು ಇಲ್ಲ. ನಾವೆಲ್ಲರೂ ಒಂದಾಗಿಯೇ ಚುನಾವಣೆ ಎದುರಿಸುತ್ತೇವೆ. ಪಕ್ಷದ ಹೈಕಮಾಂಡ್‌ ಯಾರಿಗೆ ನಾಯಕತ್ವದ ಜವಾಬ್ದಾರಿ ವಹಿಸುತ್ತದೆಯೋ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಶಾಸಕರನ್ನೇ ಹೆದರಿಸಲು ಕಾಂಗ್ರೆಸ್‌ ಆಪರೇಷನ್‌ ತಂತ್ರ: ಬಾಲಚಂದ್ರ ಜಾರಕಿಹೊಳಿ

ಪ್ರಸ್ತುತ ರಾಜ್ಯದಲ್ಲಿ ಸ್ಪಷ್ಟಬಹುಮತದೊಂದಿಗೆ ಕಾಂಗ್ರೆಸ್‌ ಆಡಳಿತದ ಚುಕ್ಕಾಣಿ ಹಿಡಿದಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಆಪರೇಷನ್‌ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾವ ಶಾಸಕರೂ ಹೋಗುವ ಪ್ರಶ್ನೆಯೇ ಇಲ್ಲ. ನೀವು ಸುಮ್ಮನಿರದಿದ್ದರೆ ಬಿಜೆಪಿ, ಜೆಡಿಎಸ್‌ ಶಾಸಕರನ್ನು ಕರೆತರುತ್ತೇವೆ ಎಂದು ಕಾಂಗ್ರೆಸ್‌ ಶಾಸಕರನ್ನೇ ಹೆದರಿಸಲಾಗುತ್ತಿದೆ. ಕಳೆದ ಬಾರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ತಿಂಗಳಲ್ಲೇ ಅಸಮಾಧಾನ ಆರಂಭವಾಗಿ ಒಂದು ವರ್ಷದ ನಂತರ ಸ್ಫೋಟವಾಗಿತ್ತು. ಹೀಗಾಗಿ, ಕಾಂಗ್ರೆಸ್‌ ಮುಖಂಡರು ಈಗಲೇ ಎಚ್ಚೆತ್ತು ತಮ್ಮ ಶಾಸಕರನ್ನು ಹೆದರಿಸುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಜನ ಸ್ಪಷ್ಟಬಹುಮತ ನೀಡಿದ್ದಾರೆ. ಅವರು ಒಳ್ಳೆಯ ರೀತಿ ಸರ್ಕಾರ ನಡೆಸಬೇಕು. ಅವರಿಗೆ ತೊಂದರೆ ಕೊಟ್ಟು ನಾವ್ಯಾಕೆ ಕೆಟ್ಟು ಹೆಸರು ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾ ವಿಭಜನೆಗೆ ಸಹಮತ:

ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕಿದೆ. ಗೋಕಾಕ ಹಾಗೂ ಚಿಕ್ಕೋಡಿಯನ್ನು ನೂತನ ಜಿಲ್ಲೆಯನ್ನಾಗಿಸಬೇಕು. ಈ ಮೊದಲು ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದೆಂದು ದೊಡ್ಡ ದೊಡ್ಡ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಆದರೆ, ಈಗ ಮತ್ತೆ ಜಿಲ್ಲಾ ವಿಭಜನೆ ಕೂಗು ಕೇಳಿಬರುತ್ತಿದೆ. ಬೇರೆ ತಾಲೂಕಿನವರು ಜಿಲ್ಲೆ ಘೋಷಣೆಗೆ ಬೇಡಿಕೆ ಇಟ್ಟಿದ್ದಾರೆ. ಅದು ಅವರವರಿಗೆ ಬಿಟ್ಟದ್ದು ಎಂದು ಇದೇ ಸಂದರ್ಭದಲ್ಲಿ ಬಾಲಚಂದ್ರ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios