ಧಾರವಾಡ[ನ.19]: ಉಪ ಚುನಾವಣೆಯಲ್ಲಿ ಬಿಜೆಪಿ 8ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಅಷ್ಟೇ ರಾಜ್ಯ ಸರ್ಕಾರ ಮುನ್ನಡೆಯತ್ತದೆ. ಇಲ್ಲವಾದರೆ ಜೆಡಿಎಸ್‌ ಜತೆ ಮೈತ್ರಿ ಆಗಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದವರೆಲ್ಲ ಮಂತ್ರಿ ಆಗುತ್ತಾರೆ. ಒಂದು ವೇಳೆ ಬಿಜೆಪಿಗೆ 8ಕ್ಕಿಂತ ಕಡಿಮೆ ಸ್ಥಾನ ಲಭಿಸಿದಾಗ ಜೆಡಿಎಸ್‌ ಹಾಗೂ ಬಿಜೆಪಿ ಸರ್ಕಾರ ರಚಿಸಿದರೂ ಅಚ್ಚರಿಪಡಬೇಕಾಗಿಲ್ಲ ಎಂದರು.

ಸೇಬು ಹಾರ ನಿಷೇಧಿಸಿ:

ಬೃಹತ್‌ ಗಾತ್ರದ ಸೇಬು ಹಣ್ಣಿನ ಹಾರವನ್ನು ಸರ್ಕಾರ ನಿಷೇಧಿಸಲೇಬೇಕು. 2-3 ಕ್ವಿಂಟಲ್‌ ಸೇಬು ಬಡವರಿಗೆ ಕೊಟ್ಟರೆ ಒಳ್ಳೆಯದು ಆಗುತ್ತದೆ. ಅದು ಬಿಟ್ಟು ಈ ರೀತಿ ಹಾರ ಮಾಡಿಸಿಕೊಂಡು ಅದ್ಧೂರಿಯಾಗಿ ನಾಮಪತ್ರ ಸಲ್ಲಿಕೆ ತೋರಿಸುವುದು ಒಳಿತಲ್ಲ ಎಂದರು ತಿಳಿಸಿದರು.

ನಿಖಿಲ್‌ ಒಳ್ಳೆ ಹುಡುಗ:

ನಿಖಿಲ್‌ ಕುಮಾರಸ್ವಾಮಿ ಒಳ್ಳೆಯ ಹುಡುಗ. ರಾಜಕೀಯವಾಗಿ ಬೆಳೆಯಲಿ. ಆದರೆ ಅತಿಯಾದ ರಂಜಿತವಾದ ಕೆಲಸಗಳನ್ನು ಯಾರು ಮಾಡಬಾರದು. ಉಪಚುನಾವಣೆಯಲ್ಲಿ ಜೆಡಿಎಸ್‌ ಎಷ್ಟುಸ್ಥಾನ ಗೆಲ್ಲುತ್ತೇವೆ ಎಂಬ ಬಗ್ಗೆ ನಾನು ಭವಿಷ್ಯ ಹೇಳುವುದಿಲ್ಲ. ಗೆದ್ದಾಗ ಎಷ್ಟುಸ್ಥಾನ ಗೆದ್ದಿದ್ದೇವೆ ಅನ್ನುವುದು ಮಾತ್ರ ಹೇಳುತ್ತೇವೆ ಎಂದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.