ಬೆಂಗಳೂರು[ಜ.05]: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಜನರು ಪ್ರತಿಭಟನೆ ನಡೆಸುತ್ತಿದ್ದರೂ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಕಾಯ್ದೆ ಜಾರಿಗೊಳಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಅವನತಿ ಆರಂಭವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಾದಿತ ಪೌರತ್ವ ಕಾಯ್ದೆ ಜಾರಿ ಮಾಡಲು ಹೋಗಿ ಬಿಜೆಪಿ ಜಾರ್ಖಂಡ್‌ನಲ್ಲಿ ಈಗಾಗಲೇ ಅಧಿಕಾರ ಕಳೆದುಕೊಂಡಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲೂ ಅಧಿಕಾರ ಕಳೆದುಕೊಳ್ಳಲಿದೆ ಎಂದರು.

ಈ ಕಾಯ್ದೆಗೆ ದೇಶಾದ್ಯಂತ ತೀರ್ವ ವಿರೋಧ ವ್ಯಕ್ತವಾಗಿದ್ದು, ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ಧರ್ಮ ಅಥವಾ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಕಾಯ್ದೆ ರೂಪಿಸುವುದು ಸಂವಿಧಾನ ಬಾಹಿರ. ಫ್ರಾನ್ಸ್‌, ಜರ್ಮನಿ ಮತ್ತಿತರ ರಾಷ್ಟ್ರಗಳೂ ಕೂಡ ಈ ಕಾಯ್ದೆಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಇದನ್ನು ಇಡೀ ದೇಶದ ಜನರು ಪ್ರಶ್ನಿಸುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಬಿಜೆಪಿಯವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಬಾಂಗ್ಲಾ, ಪಾಕಿಸ್ತಾನ, ಅಷ್ಘಾನಿಸ್ತಾನದಿಂದ ಬಂದ ಮುಸ್ಲಿಮರಿಗೆ ಮಾತ್ರ ಪೌರತ್ವ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಎಲ್ಲರಿಗೂ ಒಂದೇ ಕಾನೂನು ಇರಬೇಕಲ್ಲವೇ ಎಂದು ಪ್ರಶ್ನಿಸಿದ ಗುಲಾಂ ನಬಿ ಆಜಾದ್‌, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಕಾಯ್ದೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಯಾವುದನ್ನು ನಂಬಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.