ಕೊಲ್ಹಾಪುರ/ಸಾಂಗ್ಲಿ [ಅ.25]:  ಕನ್ನಡಿಗರ ಪ್ರಭಾವ ಇರುವ ಹಾಗೂ ನೆರೆಪೀಡಿತವಾಗಿರುವ ಕರ್ನಾಟಕ ಗಡಿಯ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಗಳಲ್ಲಿ ಬಿಜೆಪಿಗೆ ಸೋಲಾಗಿದ್ದು, ಇಲ್ಲಿ ವ್ಯಾಪಕ ಪ್ರಚಾರ ಮಾಡಿದ್ದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮುಜುಗರ ಸೃಷ್ಟಿಯಾಗಿದೆ.

ಲಿಂಗಾಯತ ಪ್ರಭಾವಿತ ಪ್ರದೇಶಗಳೂ ಆಗಿರುವ ಕೊಲ್ಹಾಪುರ, ಸಾಂಗ್ಲಿ ಭಾಗದಲ್ಲಿ ಯಡಿಯೂರಪ್ಪ ಅವರು ಹಲವು ಊರುಗಳಲ್ಲಿ ಪ್ರಚಾರ ಮಾಡಿದ್ದರು. ಅಲ್ಲದೆ, ಈ ಎರಡೂ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ಹೊಣೆಯನ್ನು ಲಕ್ಷ್ಮಣ ಸವದಿ ಅವರಿಗೆ ವಹಿಸಲಾಗಿದ್ದ ಕಾರಣ, ಅವರನ್ನು ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿಗೂ ಸೇರಿಸಿತ್ತು.

ಬಿಜೆಪಿಗೂ ಅನರ್ಹರಿಗೂ ಸಂಬಂಧವಿಲ್ಲ: ಸವದಿ...

ಆದರೆ ಇವರ ಪ್ರಯತ್ನ ಇಲ್ಲಿ ಯಶ ಕಂಡಿಲ್ಲ. ಈ ಎರಡೂ ಜಿಲ್ಲೆಗಳ 18 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಕೂಟ ಕೇವಲ 4ರಲ್ಲಿ ಗೆದ್ದಿದೆ. ಕಾಂಗ್ರೆಸ್‌-ಎನ್‌ಸಿಪಿ 11 ಸ್ಥಾನಗಳಲ್ಲಿ ಜಯಗಳಿಸಿವೆ.

ಇದೇ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ. ಪಾಟೀಲ ಹಾಗೂ ಮುಂತಾದ ಕರ್ನಾಟಕ ಕಾಂಗ್ರೆಸ್‌ ನಾಯಕರು ಪ್ರಚಾರ ಮಾಡಿದ್ದರು. ಇವರ ಪ್ರಚಾರ ಫಲ ಕೊಟ್ಟಿದ್ದು, ಅವರು ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.