- ಸಂಪುಟ ವಿಸ್ತರಣೆ ವೇಳೆ ಖಾತೆ ಬದಲಾವಣೆ ಬಗ್ಗೆ ಗುಸುಗುಸು- ಗೃಹ ಸಚಿವರ ಕಾರ್ಯವೈಖರಿಗೆ ಬಿಜೆಪಿಯ ಯತ್ನಾಳ್, ರಾಜುಗೌಡ ಆಕ್ಷೇಪ- ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದಲೂ ಅಸಮಾಧಾನ
ಬೆಂಗಳೂರು(ಏ.20): ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರ್ಯನಿರ್ವಹಣೆ ಬಗ್ಗೆ ಸ್ವಪಕ್ಷೀಯರಿಂದ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗುತ್ತಿರುವ ಮಧ್ಯೆಯೇ ಶೀಘ್ರದಲ್ಲಿಯೇ ನಡೆಯಲಿದೆ ಎನ್ನಲಾದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆ ಅವರ ಖಾತೆ ಬದಲಾವಣೆ ಮಾಡುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಗುಸುಗುಸು ಕೇಳಿಬರುತ್ತಿದೆ.
ಪಕ್ಷದಲ್ಲಿ ಹಿರಿಯರಾಗಿದ್ದರೂ ಮೊದಲ ಬಾರಿಗೆ ಸಚಿವ ಸ್ಥಾನದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದಲೋ ಏನೋ ಎಂಬಂತೆ ಆರಗ ಜ್ಞಾನೇಂದ್ರ ಅವರು ತಮಗೆ ನೀಡಿದ ಗೃಹ ಖಾತೆ ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದರೂ ಪಕ್ಷದ ವರಿಷ್ಠರಿಗೆ ಸಮಾಧಾನ ಇದ್ದಂತಿಲ್ಲ. ಇದಕ್ಕೆ ಪೂರಕ ಎಂಬಂತೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕೇಂದ್ರದ ಗೃಹ ಸಚಿವ ಅಮಿತ್ ಶಾ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಹೋಲಿಕೆಯೊಂದಿಗೆ ಸೂಚ್ಯವಾಗಿ ಹೇಳಿದ್ದರು.
ಕೇವಲ ಕಥೆ ಹೇಳೋ ಕೆಲ್ಸ ಆಗ್ಬಾರದು: ಗೃಹ ಸಚಿವರ ವಿರುದ್ಧ ಯತ್ನಾಳ್ ಕಿಡಿ
ಅದರ ಬೆನ್ನಲ್ಲೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಾಜೂಗೌಡ ಅವರು ಬಹಿರಂಗವಾಗಿಯೇ ಆರಗ ಜ್ಞಾನೆಂದ್ರ ಅವರ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಯತ್ನಾಳ ಅವರಂತೂ ರಾಜ್ಯಕ್ಕೆ ಒಬ್ಬ ಸಮರ್ಥ ಗೃಹ ಸಚಿವರು ಬೇಕಾಗಿದ್ದಾರೆ ಎಂಬುದಾಗಿ ಜಾಹೀರಾತು ನೀಡಬೇಕಿದೆ ಎಂದು ತೀಕ್ಷ$್ಣವಾಗಿಯೇ ಹೇಳಿದ್ದಾರೆ.
ಇದೇ ವೇಳೆ ಅನೇಕ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಗೃಹಸಚಿವರ ಕಾರ್ಯವೈಖರಿ ವಿರುದ್ಧ ಹರಿಹಾಯುತ್ತಿದ್ದಾರೆ. ಇತ್ತೀಚಿನ ಹಲವು ಬೆಳವಣಿಗೆಗಳಲ್ಲಿ ಗೃಹ ಸಚಿವರು ತಮ್ಮ ಪಾತ್ರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಕಟುವಾಗಿ ಟೀಕೆ ಮಾಡುತ್ತಿರುವುದನ್ನು ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿ ನಾಯಕರು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಮೇಲಾಗಿ ಇದು ಚುನಾವಣಾ ವರ್ಷವಾದ್ದರಿಂದ ಸಮರ್ಥವಾದ ಗೃಹ ಸಚಿವರು ಇಲ್ಲದಿದ್ದರೆ ಅನಗತ್ಯ ತೊಂದರೆ ಎದುರಾಗಬಹುದು. ಈಗಲೇ ಸರಿಪಡಿಸಿಕೊಳ್ಳುವುದು ಸೂಕ್ತ ಎಂಬ ಭಾವನೆಯನ್ನೂ ಹಲವು ಬಿಜೆಪಿ ಮುಖಂಡರು ಹಿರಿಯ ನಾಯಕರಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರು ಯಾರು ಅಮಾಯಕರಲ್ಲ: ಇದು ಪ್ರೀ ಪ್ಲಾನ್ ಗಲಾಟೆ
ಹೀಗಾಗಿ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆ ಗೃಹ ಖಾತೆಯನ್ನು ಆರಗ ಜ್ಞಾನೇಂದ್ರ ಅವರಿಂದ ಕಿತ್ತು ಬೇರೊಬ್ಬ ಸಚಿವರಿಗೆ ನೀಡಬಹುದು. ಆರಗ ಜ್ಞಾನೇಂದ್ರ ಅವರಿಗೆ ಅವರ ಹಿರಿತನಕ್ಕೆ ಅನುಗುಣವಾಗಿ ಬೇರೊಂದು ಖಾತೆ ನೀಡಬಹುದು ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಗಂಭೀರವಾಗಿ ಕೇಳಿಬರುತ್ತಿದೆ.
ಗೃಹ ಸಚಿವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ: ಬಿಎಸ್‌ವೈ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗೃಹ ಸಚಿವ ಆರಗ ಜ್ಞಾನೇಂದ್ರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರÜನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಯಾವುದæೕ ಲೋಪವೂ ಆಗಿಲ್ಲ. ಹುಬ್ಬಳ್ಳಿಯಂತಹ ಘಟನೆಗಳು ನಡೆದಾಗ ತಕ್ಷಣ ಕ್ರಮ ಕೈಗೊಂಡ ಕಾರ್ಯ ಉತ್ತಮವಾಗಿದೆ. ಆದರೆ, ಕಾಂಗ್ರೆಸ್‌ನ ನಾಯಕರು ಅಮಾಯಕರನ್ನು ಬಂಧಿಸಬೇಡಿ ಎನ್ನುವ ಮೂಲಕ ಗಲಭೆ ಮಾಡಿದವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯನವರಿಗೆ ಶೋಭೆ ತರುವ ಕೆಲಸ ಅಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹುಬ್ಬಳ್ಳಿಯ ಘಟನಾ ಸ್ಥಳಕ್ಕೆ ಹೋಗಿ, ವಾಸ್ತವ ಸ್ಥಿತಿ ನೋಡಿ ಮಾತನಾಡಲಿ ಎಂದರು.
