ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಇದೀಗ ಎಲ್ಲೆಡೆ ಸಾಕಷ್ಟು ಚರ್ಚೆಯಾಗುತ್ತಿದ್ದು  ಬಿಜೆಪಿಯಲ್ಲೇ ಸಚಿವರ ರಾಜೀನಾಮೆಗೆ ಒತ್ತಡ ಹಾಕಲಾಗುತ್ತಿದೆ. 

ಬೆಂಗಳೂರು (ಮಾ.03): ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಜೆಪಿಯನ್ನು ತೀವ್ರ ಮುಜುಗರಕ್ಕೆ ತಳ್ಳಿದ್ದು, ಈ ಪ್ರಕರಣದ ಮಾಹಿತಿ ಹೈಕಮಾಂಡ್‌ಗೆ ತಲುಪಿದೆ. ಇದರ ಬೆನ್ನಲ್ಲೇ ಪಕ್ಷದೊಳಗೂ ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಿದೆ.

ಸಚಿವ ರಮೇಶ್‌ ಜಾರಕಿಹೊಳಿ ಅವರು ಹೈಕಮಾಂಡ್‌ನಲ್ಲೂ ಉತ್ತಮ ವರ್ಚಸ್ಸು ಹೊಂದಿದ್ದರು. ರಾಜ್ಯದ ಕೆಲಸಗಳನ್ನು ಮಾಡಿಸಿಕೊಳ್ಳಲು ದೆಹಲಿಗೆ ತೆರಳುತ್ತಿದ್ದ ಅವರು ರಾಷ್ಟ್ರ ನಾಯಕರನ್ನು ಭೇಟಿಯಾಗುತ್ತಿದ್ದರು. ಆದರೆ, ಪ್ರಕರಣವು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ಕಾರಣ ಪಕ್ಷಕ್ಕೆ ಇರುಸು-ಮುರುಸು ಉಂಟು ಮಾಡಿದೆ.

ರಮೇಶ್ ಜಾರಕಿಹೊಳಿ ಹಸಿಬಿಸಿ ವಿಡಿಯೋ ರಿಲೀಸ್: ​ಸಂದಿಗ್ಧತೆಗೆ ಸಿಲುಕಿದ ಸಿಎಂ ..

ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ನ ವರಿಷ್ಠರು ರಾಜ್ಯದ ಕೆಲ ನಾಯಕರಿಂದ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಪಕ್ಷದ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಿದೆ. ಇದು ಬಿಜೆಪಿ ನಾಯಕರಿಗೆ ತಲೆಬಿಸಿಯಾಗಿದ್ದು, ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಎಂಬುದು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಪಕ್ಷವು ಮುಂದಾಗಿದೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಮೇಶ್‌ ಜಾರಕಿಹೊಳಿ ಬಿಜೆಪಿಯಲ್ಲಿ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಲೆಂದೇ ಜಲಸಂಪನ್ಮೂಲ ಖಾತೆಯನ್ನು ಪಡೆದುಕೊಂಡಿದ್ದರು. ರಾಜ್ಯಕ್ಕೆ ಸಂಬಂಧಿಸಿದ ನೀರಾವರಿ ಯೋಜನೆ ಕುರಿತು ಕೇಂದ್ರದ ಸಚಿವರ ಜತೆ ಸಮಾಲೋಚನೆ ನಡೆಸಲು ದೆಹಲಿಗೆ ಹೋಗುತ್ತಿದ್ದರು. ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರಿಗೆ ಭಾರಿ ಹಿನ್ನಡೆಯುಂಟಾಗಿದೆ.