ಆಡಳಿತ ಪಕ್ಷ ಬಿಜೆಪಿ ಬರೋಬ್ಬರಿ ಒಂದು ಸಾವಿರ ಕೋಟಿ ರು.ನಷ್ಟುಕಪ್ಪು ಹಣ ಬಳಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು [ಡಿ.04]: ಅನರ್ಹ ಶಾಸಕರನ್ನು ಗೆಲ್ಲಿಸಿಕೊಂಡು ಬರಲು 15 ಕ್ಷೇತ್ರಗಳ ಉಪಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ ಬರೋಬ್ಬರಿ ಒಂದು ಸಾವಿರ ಕೋಟಿ ರು.ನಷ್ಟುಕಪ್ಪು ಹಣ ಬಳಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಮೈತ್ರಿ ಸರ್ಕಾರ ಕೆಡವಲು 17 ಶಾಸಕರ ರಾಜೀನಾಮೆ ಕೊಡಿಸುವಾಗಲೇ ತಲಾ 20ರಿಂದ 30 ಕೋಟಿ ರು. ಮಾತುಕತೆ ನಡೆಸಿದ್ದ ಬಿಜೆಪಿ, ಈಗ ರಾಜೀನಾಮೆ ಕೊಟ್ಟು ತಮ್ಮ ಸರ್ಕಾರ ರಚನೆಗೆ ಕಾರಣರಾದ ಅಹರ್ನ ಶಾಸಕರ ಋುಣ ತೀರಿಸಲು ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವುದಕ್ಕಾಗಿ ಒಂದು ಸಾವಿರ ಕೋಟಿ ರು.ನಷ್ಟುಕಪ್ಪು ಹಣ ಬಳಕೆ ಮಾಡಿದೆ ದೂರಿದರು.

ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಬಿಜೆಪಿಯವರಿಗೆ ಉಪಚುನಾವಣೆ ಬಳಿಕ ಬಹುಮತ ಕಳೆದುಕೊಳ್ಳುವ ನಡುಕ ಶುರುವಾಗಿದೆ. ಹಾಗಾಗಿ ಮತಗಳನ್ನು ಸೆಳೆಯಲು ಹಣ ಬಳಕೆ ಮಾಡುತ್ತಿದ್ದಾರೆ. ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್‌ ತಮ್ಮ ಬೆಂಬಲಿಗರ ಮೂಲಕ ಪ್ರತಿ ಓಟಿಗೆ 2 ಸಾವಿರ ರು. ನೋಟು ಹಂಚುತ್ತಿರುವುದನ್ನು ವಿಡಿಯೋ ಮಾಡಿ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಂಟಿಬಿ ನಾಗರಾಜ್‌, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತಿತರ ಬಿಜೆಪಿ ಅಭ್ಯರ್ಥಿಗಳು, ನಾಯಕರು ಬಹಿರಂಗವಾಗಿಯೇ ಹಣ, ಬೆಲೆಬಾಳುವ ಉಡುಗೊರೆಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ. ಸೋಲಿನ ಭಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜಾತಿ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗಾಯತರು ಬಿಜೆಪಿಗೆ ಮತ ಹಾಕದಿದ್ದರೆ ಯಡಿಯೂರಪ್ಪ ಅವರಿಗೆ ಕಪಾಳ ಮೋಕ್ಷ ಮಾಡಿದಂತೆ ಎಂದು ಹೇಳಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಬಗ್ಗೆಯೂ ಆಯೋಗಕ್ಕೆ ದೂರು ನೀಡಲಾಗುತ್ತಿದ್ದು, ಆಯೋಗ ಸೂಕ್ರ ಕ್ರಮ ಕೈಗೊಳ್ಳಬೇಕು. ಆಯೋಗ ನಮ್ಮ ದೂರನ್ನು ಪರಿಗಣಿಸದಿದ್ದರೆ ನ್ಯಾಯಾಂಗದ ಮೊರೆ ಹೋಗುತ್ತೇವೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜಕ್ಕೆ ಸ್ವಾಭಿಮಾನವಿದೆ. ಕಾಂಗ್ರೆಸ್‌ನಲ್ಲೂ ಆ ಸಮುದಾಯದ ಹಲವು ನಾಯಕರಿದ್ದಾರೆ. ಲಿಂಗಾಯತರು ಬಿಜೆಪಿಗೆ ಮಾತ್ರ ಮತ ಹಾಕಬೇಕಾ? ಇದು ದಬ್ಬಾಳಿಕೆ ಅಲ್ಲವಾ? ಈ ರೀತಿ ಜಾತಿ ಆಧಾರದಲ್ಲಿ ಮತ ಯಾಚಿಸಿ ನೀತಿ ಸಂಹಿತೆ ಉಲ್ಲಂಘಿಸುವ ಜತೆಗೆ ಲಿಂಗಾಯತರ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಮಾಧುಸ್ವಾಮಿ ಕೂಡಲೇ ವೀರಶೈವ ಲಿಂಗಾಯತ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.