ಕಾಗವಾಡ [ನ.11]: ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಪೂಜಾರಿ ಅವರು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಕೆರಳಿಸಿದೆ.

ನಾಲ್ಕು ಬಾರಿ ಬಿಜೆಪಿಯ ಶಾಸಕರಾಗಿದ್ದ ರಾಜು ಕಾಗೆ 2018ರ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಅನರ್ಹ  ಶಾಸಕರಾಗಿರುವ ಶ್ರೀಮಂತ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗುವ ಲಕ್ಷಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜು ಕಾಗೆ ಕಾಗವಾಡದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. 

ಒಂದು ವೇಳೆ ಶ್ರೀಮಂತ್ ಪಾಟೀಲ್ ಅನರ್ಹರಾಗದಿದ್ದರೆ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಬಗ್ಗೆಯೂ ರಾಜು ಕಾಗೆ ಆಸಕ್ತಿ ಹೊಂದಿದ್ದಾರೆ. ಹೀಗಾಗಿಯೇ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಭ್ಯರ್ಥಿಗಳ ಘೋಷಣೆ : ಕಾದು ನೋಡುವ ತಂತ್ರದ ಮೊರೆ ಹೋದ ಕೈ...

ಈ ಬಗ್ಗೆ ಜತೆ ಮಾತನಾಡಿರುವ ರಾಜು ಕಾಗೆ, ಭಾನುವಾರ ಬೆಳಗ್ಗೆ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಸೋಮವಾರ ಬೆಳಗ್ಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಅವರನ್ನೂ ಭೇಟಿ ಮಾಡಿ ಉಪ ಚುನಾವಣೆ ಸಂಬಂಧ ಚರ್ಚಿಸಲಾಗುವುದು ಎಂದಿದ್ದಾರೆ.