ನುಡಿದಂತೆ ನಡೆಯದ ಸಿದ್ದರಾಮಯ್ಯ ಸರ್ಕಾರ: ಕಾಸುಗೌಡ ಬಿರಾದಾರ

ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ, ಗೋಶಾಲೆ, ವಿಧ್ಯಾನಿಧಿ, ಭೂಸಿರಿ, ಕಿಸಾನ್‌ ಸಮ್ಮಾನ್‌ ಯೋಜನೆ, ರೈತಶಕ್ತಿ ಯೋಜನೆ ರದ್ದುಗೊಳಿಸಿದೆ. ಇಂಥ ದ್ವೇಷದ ರಾಜಕಾರಣ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದ ಕಾಸುಗೌಡ ಬಿರಾದಾರ 

BJP Leader Kasugouda Biradar Slams Siddaramaiah Government grg

ಇಂಡಿ(ಜು.13): ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ನಡೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ, ಗೋಶಾಲೆ, ವಿಧ್ಯಾನಿಧಿ, ಭೂಸಿರಿ, ಕಿಸಾನ್‌ ಸಮ್ಮಾನ್‌ ಯೋಜನೆ, ರೈತಶಕ್ತಿ ಯೋಜನೆ ರದ್ದುಗೊಳಿಸಿದೆ. ಇಂಥ ದ್ವೇಷದ ರಾಜಕಾರಣ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಪರ ಕಾರ್ಯಕರ್ತರ ಹತ್ಯೆ ಮತ್ತೆ ಮರುಕಳಿಸುತ್ತಿದೆ. ಜೈನಮುನಿಗಳ ಬರ್ಬರ ಹತ್ಯೆ ನಡೆದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್‌ ಸರ್ಕಾರ ಒಪ್ಪುತ್ತಿಲ್ಲ. ಕೂಡಲೇ ಪಾರದರ್ಶಕ ತನಿಖೆ ನಡೆಸಿ, ಹಿಂದೂಪರ ಹೋರಾಟಗಾರನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ವಿಪಕ್ಷ ನಾಯಕನ ಸ್ಥಾನ ಮಾರಾಟಕ್ಕಿದೆಯೇ: ಸಚಿವ ಎಂ.ಬಿ.ಪಾಟೀಲ್‌ ಲೇವಡಿ

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮಾತನಾಡಿ, ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಮಾಡಿವೆ. ಆದರೆ, ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕೇಂದ್ರದ ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಂಬಿಸಿಕೊಳ್ಳುತ್ತಿದೆ. ಈ ಗ್ಯಾರಂಟಿ ಇಲ್ಲದ ಸರ್ಕಾರ ಲೋಕಸಭಾ ಚುನಾವಣೆ ನಂತರ ಪತನಗೊಳ್ಳಲಿದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುಡುಗಿದರು.

ಸಿದ್ಧಲಿಂಗ ಹಂಜಗಿ, ಅನಿಲ ಜಮಾದಾರ, ಸೋಮು ನಿಂಬರಗಿಮಠ, ಸೈಫಾನ್‌ ಪವಾರ, ಅಣ್ಣು ಮದರಿ, ಶಾಂತು ಕುಂಬಾರ, ಬುದ್ದುಗೌಡ ಪಾಟೀಲ, ಅನಿಲಗೌಡ ಬಿರಾದಾರ ಉಪಸ್ಥಿತರಿದ್ದರು.

ಇಂಡಿ ತಾಲೂಕಿನಾದ್ಯಂತ ಮುಂಗಾರು ಮಳೆ ಬಾರದೇ ರೈತರು ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ ಬರಪಿಡಿತ ಪ್ರದೇಶವೆಂದು ಘೋಷಣೆ ಮಾಡಿ, ಬರ ಕಾಮಗಾರಿ ಪ್ರಾರಂಭಿಸಬೇಕು ಎಂದು ಬಿರಾದಾರ ಆಗ್ರಹಿಸಿದ್ದಾರೆ. ಇಂಡಿ ತಾಲೂಕಿನಾದ್ಯಂತ ಮುಂಗಾರು ಮಳೆ ಆಧಾರಿತ ಒಟ್ಟು 1.60 ಲಕ್ಷ ಹೆಕ್ಟರ್‌ ಜಮೀನು ಇದೆ. ಜೂನ್‌ ಮೊದಲ ವಾರದಲ್ಲಿ ಮಳೆಯಾಗಿ ಮುಂಗಾರು ಬಿತ್ತನೆ ಪ್ರಾರಂಭವಾಗಬೇಕಿತ್ತು. ಸದ್ಯ ಜುಲೈ ತಿಂಗಳು ಅರ್ಧ ಕಳೆದರೂ ಮಳೆಯಾಗಿಲ್ಲ. ರೈತರು ಮಳೆಯನ್ನು ನಂಬಿ ಬಿತ್ತನೆ ಮಾಡಿ, ಮತ್ತಷ್ಟುಹಾನಿಗೆ ಒಳಗಾಗಿದ್ದಾರೆ. ಈ ಕೂಡಲೇ ಸರ್ಕಾರ ಇತ್ತ ಗಮನಹರಿಸಿ ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಕಳೆದ ಬಜೆಟ್‌ನಲ್ಲಿ ಈ ಭಾಗಕ್ಕೆ ವರದಾನವಾಗಬಲ್ಲ ಶ್ರೀ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿತ್ತು. ಆದರೆ, ಕಾಂಗ್ರೆಸ್‌ ಈ ಬಜೆಟ್‌ನಲ್ಲಿ ನೈಯಾ ಪೈಸಾ ಅನುದಾನವನ್ನೂ ಇಟ್ಟಿಲ್ಲ. ನಂಜುಂಡಪ್ಪ ವರದಿಯ ಪ್ರಕಾರ ಶಾಶ್ವತ ಬರಗಾಲ ಪ್ರದೇಶ ಕುಡಿಯಲು ನೀರು ಸಿಗುತ್ತಿಲ್ಲ. ರೈತರು ಬೆಳೆದ ಲಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಗಳು ನೀರಿಲ್ಲದೇ ಒಣಗಿವೆ. ರೈತರು ಟ್ಯಾಂಕರ್‌ ಮೂಲಕ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಸರ್ಕಾರ ರೈತರ ತೋಟಗಾರಿಕೆ ಬೆಳೆಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios