ಮೈಸೂರು, (ಜೂನ್.13): ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡುವ ಭರವಸೆ ನೀಡಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ನೀಡಿದ ಹೇಳಿಕೆಗೆ ಮಾಜಿ ಸಚಿವ ಹೆಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು (ಶನಿವಾರ) ಮಾತನಾಡಿದ ವಿಶ್ವನಾಥ್, 'ಡಾ.ಅಶ್ವತ್ಥ ನಾರಾಯಣ ಅವರು ಉಪಮುಖ್ಯಮಂತ್ರಿ ಆಗಿದ್ದು ಯಾರಿಂದ? ನಮ್ಮ ಹಾಗೂ ಮುಖ್ಯಮಂತ್ರಿ ನಡುವೆ ನಡುವೆ ಏನು ಮಾತುಕತೆ, ಒಪ್ಪಂದ ನಡೆದಿದೆ ಎಂಬುದು ಅವರಿಗೇನು ಗೊತ್ತು? ಅವರು ಏನೂ ಮಾತನಾಡದೆ ಸುಮ್ಮನಿದ್ದರೇ ಒಳ್ಳೆಯದು' ಎಂದು ವಿಶ್ವನಾಥ್‌ ಗರಂ ಆಗಿ ತಿರುಗೇಟು ನೀಡಿದರು.

ಮಾತು ತಪ್ಪಿದ ಮಗ ಎನಿಸಿಕೊಳ್ಳಲ್ಲ, ಎಂಟಿಬಿಗೆ MLC ಟಿಕೆಟ್ ಕೊಡಿಸ್ತೇನೆ ಎಂದ ಬಿಜೆಪಿ ನಾಯಕ

'ಚುನಾವಣೆಯಲ್ಲಿ ಸ್ಪರ್ಧಿಸುವುದು ಅಪರಾಧವೇ? ಹುಣಸೂರು ಕ್ಷೇತ್ರದಲ್ಲಿ ಹಿಂದೆ ನಾನು ಗೆದ್ದಿದ್ದೆ. ಹೀಗಾಗಿ, ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದೆ.  ಸೋಲು ಎದುರಾಯಿತು. ಇಂದಿರಾ ಗಾಂಧಿ, ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೋತಿಲ್ಲವೇ? ಅಷ್ಟಕ್ಕೂ ಬಿಜೆಪಿಯಲ್ಲಿ ಸೋತವರನ್ನೇ ಉಪಮುಖ್ಯಮಂತ್ರಿಯನ್ನಾಗಿ ಮಾಡಿಲ್ಲವೇ' ಎಂದು ಖಾರವಾಗಿ ಹೇಳಿದರು.

ಎಚ್‌. ವಿಶ್ವನಾಥ್ ಅವರು ಜೆಡಿಎಸ್ ತೊರೆದುಬಂದು ಉಪಚುನಾವಣೆಗೆ ಹುಣಸೂರಿನಿಂದ ಸ್ಪರ್ಧಿಸಿ ಸೋಲುಕಂಡಿದ್ದು, ಇದೀಗ ಪರಿಷತ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.