Asianet Suvarna News Asianet Suvarna News

Karnataka Politics: ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಸಿಟಿ ರವಿ

* ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಎನ್ನುವ ಸಿದ್ದು ಹೇಳಿಕೆ
* ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಬಿಜೆಪಿ ನಾಯಕ ಸಿಟಿ ರವಿ
* ಸಿದ್ಧರಾಮಯ್ಯ ಅವರಿಗೆ ಇರುವ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಸಿಟಿ ರವಿ

BJP Leader CT Ravi Hits out at Congress Siddaramaiah Over Dalit Statement rbj
Author
Bengaluru, First Published Nov 6, 2021, 5:47 PM IST
  • Facebook
  • Twitter
  • Whatsapp

ಬೆಂಗಳೂರು, (ನ.06): ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರುತ್ತಿದ್ದಾರೆ ಎನ್ನಲಾದ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಪ್ರತಿಕ್ರಿಯಿಸಿದ್ದಾರೆ. 

 ದಲಿತರ ಬಗ್ಗೆ ಸಿದ್ಧರಾಮಯ್ಯ ಅವರಿಗೆ ಇರುವ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಸಿಟಿ ರವಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. 

'ಸ್ವಾರ್ಥಕ್ಕೆ ಬಿಜೆಪಿ ಸೇರಿದರೆಂದಿದ್ದ ಸಿದ್ದರಾಮಯ್ಯ : ಬಿಜೆಪಿಯಿಂದ ದಿಕ್ಕು ತಪ್ಪಿಸುವ ಹುನ್ನಾರ'

ಸಿದ್ದರಾಮಯ್ಯನವರೇ ನಿಮ್ಮ ಸಮಕಾಲೀನ ದಲಿತ ನಾಯಕರ ಬಗ್ಗೆ ಇಷ್ಟೊಂದು ಹಗುರವಾಗಿ ಮಾತಾಡುತ್ತೀರಿ ಎಂದು ಭಾವಿಸಿರಲಿಲ್ಲ. ನೀವು ಹೇಳಿದಂತೆ ನಿಮ್ಮ ಸಮಕಾಲೀನರು ಸಿದ್ಧಾಂತ ಬಿಟ್ಟಿಲ್ಲ. ಅವರು ಬಿಜೆಪಿಗೆ ಬಂದಿದ್ದು ಜನತಾ ಪರಿವಾರದ ಸಿದ್ಧಾಂತ ಮತ್ತು ನಂಬಿಕೆಯಿಂದ. ಅವರೇನು ಅಧಿಕಾರದ ಲಾಲಸೆಗೆ ಪಕ್ಷ ತೊರೆದವರಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದಾಗ ಬಿಜೆಪಿ ಸೇರಿದ್ದರು ಎಂದು ಹೇಳಿದ್ದಾರೆ.

ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಸೇರಿದಂತೆ ಹಲವು ಪ್ರಮುಖ ನಾಯಕರು ಆದರ್ಶ ಮೈಗೂಡಿಸಿಕೊಂಡು ದಲಿತೋದ್ಧಾರದಲ್ಲಿ ತೊಡಗಿದ್ದಾರೆ. ಅವರು ಎಲ್ಲರ ವಿಶ್ವಾಸಗಳಿಸಿ ರಾಜಕಾರಣ ಮಾಡುತ್ತಿರುವುದು ಗೊತ್ತಿದೆ. ಅವರ ಬಗ್ಗೆ ಹಗುರವಾಗಿ ಮಾತಾಡ್ತೀರಲ್ಲ ಇದೇನಾ ನಿಮ್ಮ ಕಾಳಜಿ. ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ ಪಕ್ಷ ಒದ್ದು ಹೊರಬಂದು ಹೀನಾಮಾನವಾಗಿ ಆ ಪಕ್ಷದ ನಾಯಕರನ್ನು ಟೀಕಿಸಿದಿರಿ. ನೀವು ಆ ಸಿದ್ಧಾಂತ ಬಿಟ್ಟು ಕಾಂಗ್ರೆಸ್‌ ಸೇರಿದ್ದು, ದಲಿತ ನಾಯಕರನ್ನು ಬಳಸಿಕೊಂಡು ಬಿಸಾಡಿದ್ದು ಯಾಕಾಗಿ? ಭ್ರಷ್ಟಾಚಾರ, ಹೊಟ್ಟೆಪಾಡಿಗಾಗಿ ಎಂದು ನಾವೂ ಆರೋಪಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಪಕ್ಷದ ದಲಿತ ನಾಯಕರ ಬಗ್ಗೆ ಮಾತನಾಡುವ ಮೊದಲು, ನೀವು ಮುಖ್ಯಮಂತ್ರಿ ಆಗಿದ್ದಾಗ ಎಚ್‌.ಸಿ.ಮಹಾದೇವಪ್ಪ ಅವರನ್ನು ನೀವು ಎಟಿಎಂ ಕಾರ್ಡ್‌ ಮಾಡಿಕೊಂಡಿದ್ದೀರಿ, ದಲಿತ ಸಚಿವರೊಬ್ಬರ ಮನೆಯಲ್ಲಿ ‘ವಿಜಯ ಖಾತೆ’ ತೆರೆದಿದ್ದಿರಿ ಎಂದು ವಿಧಾನಸೌಧದ ಕಂಬಗಳೂ ಮಾತನಾಡುತ್ತಿದ್ದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದು ನೆನಪಿದೆಯಾ ಸಿದ್ದರಾಮಯ್ಯನವರೇ? ಸಮಾಜ ಕಲ್ಯಾಣ ಇಲಾಖೆಯ ವ್ಯವಹಾರಗಳು ಅಂತಃಪುರದಲ್ಲಿ ನಡೆಯುತ್ತಿತ್ತು ಎಂಬುದು ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು ನೆನಪಿಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ರಾಜಕೀಯ ಹಿತಾಸಕ್ತಿಗೆ, ಆಕಾಂಕ್ಷೆಗಳಿಗೆ ನೀವು ಹೇಗೆ ದಲಿತ ನಾಯಕರನ್ನು ಬಳಿಸಿಕೊಂಡಿರಿ ಎಂದು ರಾಜ್ಯದ ದಲಿತ ಸಮುದಾಯಕ್ಕೂ ಮತ್ತು ಕರ್ನಾಟಕದ ಜನತೆಗೂ ಗೊತ್ತಿದೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹೇಳಿದ ಮಾತು ‘ಸರ್ಕಾರದ ಯೋಜನೆಗಳು ಕಟ್ಟಕಡೆಯ ಜನರಿಗೆ ತಲುಪುವುದು ಶೇ 15 ಮಾತ್ರ’ ಎಂಬ ಹೇಳಿಕೆ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ನಿಜವಾಯಿತು. ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುವ ಅವರು ಲೋಕಾಯುಕ್ತ ಸಂಸ್ಥೆಯನ್ನು ಹಲ್ಲಿಲ್ಲದ ಹಾವಿನಂತೆ ಮಾಡಿದವರು ಯಾರು ಎಂಬುದು ಸರ್ವವೇದ್ಯ ಎಂದು ಹೇಳಿದ್ದಾರೆ.

ದಲಿತೋದ್ಧಾರದ ಹೆಸರಿನಲ್ಲಿ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಕಾಂಗ್ರೆಸ್‌ ನಾಯಕರು ಹುಲ್ಲುಗಾವಲ್ಲನ್ನಾಗಿಸಿಕೊಂಡದ್ದು ಸುಳ್ಳೇ? ಅದಕ್ಕೆ ರಾಜೀವ್​ಗಾಂಧಿ ಆ ಮಾತು ಹೇಳಿರಬೇಕು, ಇಲ್ಲವಾದರೆ ಆ ಮಾತುಗಳನ್ನು ಯಾಕೆ ಹೇಳುತ್ತಿದ್ದರು? 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ನೀವು ಯಾವ ದಲಿತರನ್ನು ಉದ್ಧಾರ ಮಾಡಿದಿರಿ ಹೇಳಿ? ದಲಿತೋದ್ಧಾರ ಅನ್ನುವುದು 60 ವರ್ಷ ಆಳ್ವಿಕೆ ಮಾಡಿದ ನಿಮ್ಮ ಪಕ್ಷದ ಅಜೆಂಡಾ ಮಾತ್ರ. ವಾಸ್ತವವಾಗಿ ಅವರನ್ನು ಬಡತನದಲ್ಲೇ ಉಳಿಸಿ ಮತಬ್ಯಾಂಕ್ ಮಾಡಿಕೊಂಡವರು ನೀವು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನೂರಕ್ಕೂ ಅಧಿಕ ಯೋಜನೆಗಳ ಸಹಾಯಧನ ನೇರ ಬಡವರ ಬ್ಯಾಂಕ್‌ ಖಾತೆಗೆ ಹೋಗುತ್ತಿದೆ. ‘ನ ಖಾವುಂಗಾ, ನ ಖಾನೆ ದೂಂಗಾ’ ಎಂಬುದು ನಮ್ಮ ನೀತಿ ಎಂದು ತಿಳಿಸಿದ್ದಾರೆ.

ದಲಿತೋದ್ಧಾರ ಎಂಬ ಗುರಾಣಿ ಹಿಡಿದುಕೊಂಡು ನಿಮ್ಮ ಪಕ್ಷ ಪರ್ಸೆಂಟೇಜ್‌ ‘ಭಾಗ್ಯ’ ಎಂಬ ಬೆಣ್ಣೆ ತಿಂದು ದಲಿತರ ಮುಖಕ್ಕೆ ಒರೆಸಿದ ಕೋತಿಯ ಕಥೆ ನಿಮ್ಮದು. ಅಂದ ಹಾಗೆ, ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಖರ್ಗೆಯವರನ್ನು, ಪರಮೇಶ್ವರ್ ಅವರನ್ನು ನಿಮ್ಮ ದಾರಿಯಿಂದ ಹೇಗೆ ಬದಿಗೆ ಸರಿಸಿದಿರಿ ಅನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ನಿಮ್ಮ ಇಂಥ ಗುಣ ಗೊತ್ತಿದ್ದೇ ಶ್ರೀ ಚಲವಾದಿ ನಾರಾಯಣ ಸ್ವಾಮಿಯವರು ನಿಮ್ಮನ್ನು ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಎಂದಿದ್ದಾರೆ ಎಂದರು.

Follow Us:
Download App:
  • android
  • ios