ಪ್ರಧಾನಿ ಮೋದಿ ‘ಮಹಾ ಸಂವಾದ’ ಫೆ.28ಕ್ಕೆ| 9 ಲಕ್ಷ ಮತಗಟ್ಟೆಕೇಂದ್ರಗಳ ಬಿಜೆಪಿ ಕಾರ‍್ಯಕರ್ತರ ಜೊತೆ ಮಾತುಕತೆ| ಇದು ಮೋದಿಯ ಇಲ್ಲಿಯವರೆಗಿನ ಅತಿದೊಡ್ಡ ಆ್ಯಪ್‌ ಸಂವಾದ

ನವದೆಹಲಿ[ಫೆ.12]: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಕಾರ್ಯಕರ್ತರನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಮಹಾ ಸಂವಾದವೊಂದನ್ನು ನಡೆಸಲಿದ್ದಾರೆ. ಫೆ.28ರಂದು ನಮೋ ಆ್ಯಪ್‌ನಲ್ಲಿ ಈ ಸಂವಾದ ನಡೆಯಲಿದ್ದು, ದೇಶದೆಲ್ಲೆಡೆಯ 9 ಲಕ್ಷ ಮತಗಟ್ಟೆಕೇಂದ್ರಗಳ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಇದು ಮೋದಿ ಅವರ ಇಲ್ಲಿಯವರೆಗಿನ ಅತಿದೊಡ್ಡ ಸಂವಾದವಾಗಿದೆ.

ಫೆ.28ರ ಸಂವಾದಕ್ಕೆ ಫೆ.15ರೊಳಗೆ ಪಕ್ಷದ ಕಾರ್ಯಕರ್ತರು ಪ್ರಶ್ನೆಗಳನ್ನು ಕಳುಹಿಸಬಹುದು. ಆಯ್ದ ಪ್ರಶ್ನೆಗಳಿಗೆ ಮೋದಿ ಉತ್ತರಿಸಲಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಮೂರು ಪ್ರಮುಖ ಹಿಂದಿ ರಾಜ್ಯಗಳಲ್ಲಿ ಸೋತ ನಂತರ ಲೋಕಸಭೆ ಚುನಾವಣೆಯ ಪ್ರಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಮೋದಿ ಈಗಾಗಲೇ ‘90 ದಿನಗಳಲ್ಲಿ 100 ರಾರ‍ಯಲಿ’ ಪ್ರಚಾರಾಂದೋಲನ ಆರಂಭಿಸಿದ್ದಾರೆ.

ಇಂದಿನಿಂದ 5 ಕೋಟಿ ಮನೆಗಳ ಮೇಲೆ ಬಿಜೆಪಿ ಧ್ವಜ!

Scroll to load tweet…

ಫೆ.12ರಿಂದ ಮಾ.2ರ ನಡುವೆ ‘ಮೇರಾ ಪರಿವಾರ್‌ ಭಾಜಪಾ ಪರಿವಾರ್‌’ (ನನ್ನ ಕುಟುಂಬ ಬಿಜೆಪಿ ಕುಟುಂಬ) ಎಂಬ ಹೊಸ ಪ್ರಚಾರಾಂದೋಲನವನ್ನು ಬಿಜೆಪಿ ಹಮ್ಮಿಕೊಂಡಿದೆ. ಅದರಡಿ, ದೇಶಾದ್ಯಂತ 5 ಕೋಟಿ ಮನೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜ ಹಾರಿಸಲಿದ್ದಾರೆ.

Scroll to load tweet…

ಮಾರ್ಚ್‌ ಮೊದಲ ವಾರದಲ್ಲಿ ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟಿಸುವ ಸಾಧ್ಯತೆಯಿದ್ದು, ಅದಕ್ಕೂ ಮುನ್ನವೇ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಬಿಜೆಪಿ ಈ ಬೃಹತ್‌ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.