Asianet Suvarna News

ಚುನಾವಣೆಗೆ ಬಿಜೆಪಿ, ಜೆ​ಡಿ​ಎ​ಸ್‌ ಭರದ ಸಿದ್ಧತೆ

264 ಬೂತ್‌ ಕಮಿಟಿ, ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲು ಬಿಜೆಪಿ ನಿರ್ಧಾರ| ಕ್ಷೇತ್ರ ಉಳಿಸಿ​ಕೊ​ಳ್ಳಲು ಜೆಡಿ​ಎಸ್‌ ರಣತಂತ್ರ| ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ|  ಕ್ಷೇತ್ರದ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಸಭೆ: ಎಚ್‌ಡಿಕೆ|

BJP JDS to be Ready for Sira Byelection
Author
Bengaluru, First Published Sep 12, 2020, 11:50 AM IST
  • Facebook
  • Twitter
  • Whatsapp

ಬೆಂಗಳೂರುಸ(ಸೆ.12): ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುವ ಮೊದಲೇ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್‌ ತೆರೆಮರೆಯಲ್ಲಿ ಭರದ ಸಿದ್ಧತೆ ಆರಂಭಿಸಿವೆ.

ಕ್ಷೇತ್ರದ 264 ಬೂತ್‌ಗಳಲ್ಲಿ ಬೂತ್‌ ಕಮಿಟಿ, ಪೇಜ್‌ ಪ್ರಮುಖ್‌, ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಲು ಮುಂದಾಗಿದ್ದು, ಇದೇ ತಿಂಗಳ ಅಂತ್ಯದ ವೇಳೆಗೆ ಎಲ್ಲವನ್ನೂ ಪೂರ್ಣಗೊಳಿಸಲು ಉದ್ದೇಶಿಸಿದೆ. ಈಗಾಗಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಸ್ಥಳೀಯ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ತಳಮಟ್ಟದ ಸಿದ್ಧತೆಗೆ ಚಾಲನೆ ನೀಡಿದ್ದಾರೆ. ಅಭ್ಯರ್ಥಿ ಯಾರೇ ಆಗಲಿ. ಆದರೆ, ಪಕ್ಷದ ಸಂಘಟನೆ ಗಟ್ಟಿಯಾಗಿರಬೇಕು ಎಂಬ ಉದ್ದೇಶದಿಂದ ಸಿದ್ಧತೆ ಆರಂಭಿಸಲಾಗಿದೆ.

ಹಾಗೆ ನೋಡಿದರೆ ಈ ಕ್ಷೇತ್ರದಲ್ಲಿ ಬಿಜೆಪಿಯ ಸಂಘಟನೆ ಹೇಳಿಕೊಳ್ಳುವ ಮಟ್ಟಿಗೆ ಇಲ್ಲ. ಆದರೆ, ಈ ಬಾರಿ ಪಕ್ಷ ಅಧಿಕಾರದಲ್ಲಿರುವುದರಿಂದ ಸ್ವಲ್ಪ ಗಂಭೀರ ಪ್ರಯತ್ನ ನಡೆಸಿದರೆ ಕ್ಷೇತ್ರದಲ್ಲಿ ಬಿಜೆಪಿ ಕಮಲ ಅರಳಿಸಬಹುದು ಎಂಬ ಲೆಕ್ಕಾಚಾರವನ್ನು ನಾಯಕರು ಹಾಕಿದ್ದಾರೆ. ಹೀಗಾಗಿಯೇ ಇತರ ಪಕ್ಷಗಳಿಗಿಂತ ಮುಂಚಿತವಾಗಿ ಸಿದ್ಧತೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿರಾ ರಾಜ​ಕೀಯ ಜಟಾ​ಪ​ಟಿ: ಜಯ​ಚಂದ್ರಗಿಲ್ಲ ಆಹ್ವಾನ

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರವಿಕುಮಾರ್‌ ಅವರು, ಶಿರಾ ಕ್ಷೇತ್ರದಲ್ಲಿ ಒಟ್ಟು 264 ಬೂತ್‌ಗಳಿವೆ. ಈ ಪೈಕಿ ಈಗಾಗಲೇ 95 ಬೂತ್‌ಗಳಲ್ಲಿ ಬೂತ್‌ ಕಮಿಟಿ ಹಾಗೂ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಿದ್ದೇವೆ. ಪೇಜ್‌ ಪ್ರಮುಖ್‌ ನೇಮಕ ಪ್ರಕ್ರಿಯೆ ನಡೆದಿದೆ. ಇದೇ ತಿಂಗಳಾಂತ್ಯದಲ್ಲಿ ಎಲ್ಲವನ್ನೂ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಬಹುತೇಕ ಅಕ್ಟೋಬರ್‌ 2ರಂದು ಅಥವಾ ಹೆಚ್ಚೂ ಕಡಮೆ ಅದೇ ಸಮಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಶಿರಾ ಕ್ಷೇತ್ರದ ಬೂತ್‌ ಕಮಿಟಿಗಳ ಸಭೆ ನಡೆಸುವ ಚಿಂತನೆ ನಡೆಸುತ್ತಿದ್ದೇವೆ. ಶತಾಯಗತಾಯ ಈ ಬಾರಿ ಕ್ಷೇತ್ರವನ್ನು ಗೆಲ್ಲುವ ಪ್ರಯತ್ನ ನಡೆಸುತ್ತೇವೆ ಎಂದು ತಿಳಿಸಿದರು.

ಶಿರಾ ಉಪಚುನಾವಣೆ ಜೆಡಿಎಸ್‌ಗೆ ಸತ್ವಪರೀಕ್ಷೆ: 

ಶಾಸಕ ಸತ್ಯನಾರಾಯಣ ನಿಧನದಿಂದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವುದರಿಂದ ಜೆಡಿಎಸ್‌ಗೆ ಸತ್ವ ಪರೀಕ್ಷೆಯಾಗಿದ್ದು, ಪಕ್ಷದ ಭದ್ರಕೋಟೆಯನ್ನು ಕಾಪಾಡಿಕೊಳ್ಳಲು ಕಾರ್ಯಕರ್ತರ ವಿಶ್ವಾಸ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಶುಕ್ರವಾರ ಶಿರಾ ಕ್ಷೇತ್ರದ ಮುಖಂಡರೊಂದಿಗೆ ಸಭೆ ನಡೆಸಿದರು. ಈ ವೇಳೆ ಶಿರಾ ಕ್ಷೇತ್ರದಲ್ಲಿ ಪಕ್ಷದ ಶಾಸಕರಾಗಿದ್ದ ಸತ್ಯನಾರಾಯಣ ಅವರ ನಿಧನದಿಂದ ಉಪಚುನಾವಣೆ ಎದುರಾಗುತ್ತಿದೆ. ನಮ್ಮ ಪಕ್ಷದ ಹಿಡಿತದಲ್ಲಿದ್ದ ಕ್ಷೇತ್ರದವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಸೋಮವಾರದಿಂದ ಕ್ಷೇತ್ರದಲ್ಲಿ ಪಕ್ಷದ ಕಾರ್ಯಗಳನ್ನು ಮತ್ತು ಮೈತ್ರಿ ಸರ್ಕಾರದ ವೇಳೆ ಜಾರಿಗೊಳಿಸಲಾದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸ್ಥಳೀಯ ನಾಯಕರೆಲ್ಲಾ ಒಗ್ಗೂಡಿ ಶ್ರಮಿಸಬೇಕು ಎಂದು ಸೂಚನೆ ನೀಡಿದರು.

ಪಕ್ಷದ ಗೆಲುವಿಗೆ ಕಾರ್ಯಕರ್ತರ ವಿಶ್ವಾಸ ಬಹಳ ಮುಖ್ಯವಾಗಿರುತ್ತದೆ. ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡಬೇಕು. ರಾಷ್ಟ್ರೀಯ ಪಕ್ಷಗಳ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ. ಪ್ರಾದೇಶಿಕ ಪಕ್ಷದ ಶಕ್ತಿ ಉಳಿಸಿಕೊಳ್ಳುವ ಜವಾಬ್ದಾರಿ ನಾಯಕರ ಮತ್ತು ಕಾರ್ಯಕರ್ತರ ಮೇಲಿದೆ. ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಕೆಲಸ ಮಾಡಬೇಕು. ಅಭ್ಯರ್ಥಿಯ ಕೈ ಬಲಪಡಿಸುವಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು ಎನ್ನಲಾಗಿದೆ.

ನನಗೆ ಎರಡು ಬಾರಿ ಹೃದಯ ಚಿಕಿತ್ಸೆಯಾಗಿದ್ದು, ಹೊರಗೆ ಹೋಗಬಾರದು ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಎಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಲೇಬೇಕು. ತಾಯಿ-ಮಕ್ಕಳು ರೀತಿ ಒಂದೇ ಧ್ವನಿಯಾಗಿ ಕೆಲಸ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ನಮ್ಮ ಗೆಲುವು ಸಾಧ್ಯ. ಎರಡು ಬಾರಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದು, ಮುಂದಿನ ದಿನದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಆ ವಿಶ್ವಾಸ ನನಗೆ ಇದೆ. ಈಗಿನಿಂದಲೇ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದರಿಂದ ಅದಕ್ಕೆ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಆ ಕ್ಷೇತ್ರದ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಸೋಮವಾರದಿಂದ ಸ್ಥಳೀಯ ನಾಯಕರು ಪಕ್ಷದ ಕಾರ್ಯದ ಬಗ್ಗೆ ಮತ್ತು ಜೆಡಿಎಸ್‌ ಆಡಳಿತಾವಧಿಯಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುವಂತೆ ತಿಳಿಸಲಾಗಿದೆ. ಕಾಂಗ್ರೆಸ್‌-ಬಿಜೆಪಿ ಎರಡು ಪಕ್ಷಗಳು ಚುನಾವಣಾ ಸಿದ್ಧತೆ ನಡೆಸಿವೆ. ಶಿರಾ ಕ್ಷೇತ್ರದಲ್ಲಿ ಪ್ರತಿ ಚುನಾವಣೆ ವೇಳೆ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಹೋರಾಟ ನಡೆಯುತ್ತಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಇರುವ ಕಾರಣ ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಅದನ್ನೆಲ್ಲಾ ಮೆಟ್ಟಿಚುನಾವಣೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷವು ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಜನರನ್ನು ಸೆಳೆಯಲು ಮುಂದಾಗಿದೆ. ಅದಕ್ಕೆ ಪಕ್ಷವು ತಲೆಕೆಡಿಸಿಕೊಳ್ಳುವುದಿಲ್ಲ. ಶಿರಾ ಕ್ಷೇತ್ರವು ಮೊದಲಿನಿಂದಲೂ ಜೆಡಿಎಸ್‌ನ ಭದ್ರಕೋಟೆ. ಉಪಚುನಾವಣೆಯಲ್ಲಿಯೂ ಜಯಗಳಿಸುವ ವಿಶ್ವಾಸ ಇದೆ ಎಂದರು.
 

Follow Us:
Download App:
  • android
  • ios