ಜೆಡಿಎಸ್‌ಗೆ ಮಂಡ್ಯ ಬಿಟ್ಟು ಕೊಡಲು ಬಿಜೆಪಿ ಒಪ್ಪಿಗೆ, ಸುಮಲತಾ ಕಥೆಯೇನು?
ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಮಂಡ್ಯ ಕೋಲಾರ ಹಾಸನವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು (ಸೆ.8): ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಮಂಡ್ಯ ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದೆ ಎಂದು ಸುವರ್ಣ ನ್ಯೂಸ್ ಗೆ ಉನ್ನತ ಮೂಲಗಳ ಮಾಹಿತಿ ನೀಡಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗುತ್ತಿದೆ. ಇದರ ಜೊತೆಗೆ ಕೋಲಾರ, ತುಮಕೂರು, ಹಾಸನ , ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಆದರೆ ದಳಪತಿ ಗಳ ಬೇಡಿಕೆ ಇಟ್ಟಿದ್ದ ಕ್ಷೇತ್ರದಲ್ಲಿ ಪ್ರಾಥಮಿಕ ಹಂತವಾಗಿ ಮಂಡ್ಯ ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ಒಪ್ಪಿದೆ ಎಂದು ತಿಳಿದುಬಂದಿದೆ. ಈ ಮೂಲಕ ಲೋಕಸಭಾ ಚುನಾವಣೆ 2024ಕ್ಕೆ ಬಿಜೆಪಿ ಜೊತೆಗೆ ಜೆಡಿಎಸ್ ಮಹಾ ಮೈತ್ರಿ ಮಾಡಿಕೊಳ್ಳುವುದಂತೂ ಪಕ್ಕಾ ಆಗಿದೆ.
ಕಳೆದ ಎರಡು ತಿಂಗಳ ಹಿಂದೆಯೇ ಅಮಿತ್ ಶಾ ಅವರನ್ನು ಹೆಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದರು. ಜೆಡಿಎಸ್ ನ ಪ್ರಮುಖ ಟಾರ್ಗೆಟ್ ಮಂಡ್ಯವೇ ಆಗಿದೆ. ಶತಾಯಗತಾಯ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ಹಾಕಿಕೊಳ್ಳಲು ಮಾಜಿ ಪ್ರಧಾನಿ ದೇವೇಗೌಡರು ಶತ ಪ್ರಯತ್ನ ನಡೆಸಿದ್ದರು. ಹಾಗಾಗಿ ಮಂಡ್ಯ ಕ್ಷೇತ್ರ ಬಿಟ್ಟುಕೊಡಲು ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆ ನಂತರ ಹೀಗಾಗಿ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಪಕ್ಕಾ ಆಗಿದೆ. ಹಾಗಾದರೆ ಬಿಜೆಪಿಗೆ ಬೆಂಬಲ ಸೂಚಿಸಿರುವ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರ ರಾಜಕೀಯ ಭವಿಷ್ಯ ಏನು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
ಮಂಡ್ಯವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಮೂಲಕ ಉಭಯ ಪಕ್ಷಗಳು ಮಹಾಮೈತ್ರಿಗೆ ಮುಂದಾಗಿದೆ. ಸುಮಲತಾ ಪಕ್ಷೇತರರಾಗಿ ನಿಂತು ಗೆದ್ದು ಬಂದವರು. ಆದರೆ ಬಿಜೆಪಿಗೆ ತನ್ನ ಬೆಂಬಲವಿದೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಮುಂಬರುವ ಲೋಕಾ ಚುನಾವಣೆಯಲ್ಲಿ ಸುಮಲತಾ ಅವರು ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೆಂದೇ ಹೇಳಲಾಗಿತ್ತು. ಆದರೆ ಈಗ ಸುಮಲತಾ ತನ್ನ ಕ್ಷೇತ್ರವಾದ ಮಂಡ್ಯದಿಂದ ಪಕ್ಷೇತರರಾಗಿಯೇ ಕಣಕ್ಕಿಳಿಯುತ್ತಾರಾ? ಅಥವಾ ಬೇರೆ ಕ್ಷೇತ್ರದಿಂದ ಬಿಜೆಪಿ ಸುಮಲತಾ ಅವರನ್ನು ಕಣಕ್ಕಿಳಿಸಲಿದೆಯೇ ಎಂಬುದನ್ನು ಕಾದುಯ ನೋಡಬೇಕಿದೆ. ಸೆ.10ರ ಜೆಡಿಎಸ್-ಬಿಜೆಪಿ ಮತ್ತೊಂದು ಸಭೆಯ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಲಾಗಿದೆ.