ಸುಧಾಕರ್ ಪರಿಶ್ರಮಕ್ಕೆ ಯಶಸ್ಸು: 2 ಸಲ ಮುಂದೂಡಿಕೆ ಆದರೂ ಛಲ ಬಿಡದೆ ಸಮಾವೇಶ ಆಯೋಜನೆ
ಬಿಜೆಪಿ ಸಂಘಟನೆ ದುರ್ಬಲವಾಗಿರುವ ಈ ಪ್ರದೇಶದಲ್ಲಿ ಸಮಾವೇಶಕ್ಕೆ ಲಕ್ಷಾಂತರ ಜನರು ಹರಿದು ಬಂದಿದ್ದು ಮತ್ತು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದನ್ನು ನೋಡಿದ ರಾಜ್ಯ ಬಿಜೆಪಿ ನಾಯಕರು ಸುಧಾಕರ್ ಅವರ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಬೆಂಗಳೂರು(ಸೆ.11): ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ತಿಳಿಸುವುದರ ಜತೆಗೆ ಜನರ ಭಾವನೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಆಡಳಿತಾರೂಢ ಬಿಜೆಪಿಯ ‘ಜನಸ್ಪಂದನ’ ಕಾರ್ಯಕ್ರಮ ಭರ್ಜರಿ ಯಶಸ್ವಿಯಾಗಿದ್ದು, ಅದರ ರೂವಾರಿಯಾಗಿರುವ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಬಗ್ಗೆ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.
ರಾಜ್ಯಾದ್ಯಂತ ಜನಸ್ಪಂದನ ಕಾರ್ಯಕ್ರಮವನ್ನು (ಮೊದಲಿನ ಜನೋತ್ಸವ) ಆಯೋಜಿಸಬೇಕು ಎಂಬ ನಿರ್ಧಾರ ಕೈಗೊಂಡ ಸಮಯದಲ್ಲಿ ಮೊದಲ ಕಾರ್ಯಕ್ರಮವನ್ನು ಹಳೆ ಮೈಸೂರು ಭಾಗದಲ್ಲಿ ಹಮ್ಮಿಕೊಳ್ಳುವ ವಿಚಾರ ಬಂದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣ ಸುಧಾಕರ್. ನಾನು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವೆ ಎಂಬ ಭರವಸೆ ನೀಡಿದ ಸುಧಾಕರ್ ಅದನ್ನು ಅಂತಿಮವಾಗಿ ಸಾಕಾರಗೊಳಿಸಿದ್ದಾರೆ.
ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು
ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವರಾಗಿರುವ ಸುಧಾಕರ್ ಅವರು ಅಕ್ಕಪಕ್ಕ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಎಂ.ಟಿ.ಬಿ.ನಾಗರಾಜ್ ಹಾಗೂ ಮುನಿರತ್ನ ಅವರನ್ನು ಜತೆಯಾಗಿಸಿಕೊಂಡು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿದರು. ಜತೆಗೆ ಮೂರು ಜಿಲ್ಲೆಗಳ ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಮುಖಂಡರ ಸಮನ್ವಯ ಸಾಧಿಸಿ ಸತತ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ತಲುಪಿದರು.
ಮೂರೂ ಜಿಲ್ಲೆಗಳ ಎಲ್ಲ ಮುಖಂಡರಿಗೂ ಜವಾಬ್ದಾರಿ ಹಂಚಿದ ಸಚಿವ ಸುಧಾಕರ್ ಅವರು ದೊಡ್ಡಬಳ್ಳಾಪುರದ ಸಮಾವೇಶ ನಡೆಯುವ ಸ್ಥಳದ ವೇದಿಕೆ, ಆಸನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ಮತ್ತಿತರ ಮೂಲಸೌಕರ್ಯ, ಊಟೋಪಚಾರ ಸೇರಿದಂತೆ ಎಲ್ಲ ಬೇಕು ಬೇಡಗಳನ್ನು ಅಂತಿಮಗೊಳಿಸಿದರು. ಆರಂಭದಿಂದ ಕೊನೆ ಕ್ಷಣದವರೆಗೂ ಸೌಕರ್ಯಗಳ ಬಗ್ಗೆ ಗಮನಹರಿಸಿದ್ದ ಅವರು ಜನರು ಬರುವುದಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದರು.
ಹೀಗಾಗಿ, ಬಿಜೆಪಿ ಸಂಘಟನೆ ದುರ್ಬಲವಾಗಿರುವ ಈ ಪ್ರದೇಶದಲ್ಲಿ ಸಮಾವೇಶಕ್ಕೆ ಲಕ್ಷಾಂತರ ಜನರು ಹರಿದು ಬಂದಿದ್ದು ಮತ್ತು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದನ್ನು ನೋಡಿದ ರಾಜ್ಯ ಬಿಜೆಪಿ ನಾಯಕರು ಸುಧಾಕರ್ ಅವರ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕೊನೆಯಲ್ಲಿ ಸಮಾವೇಶ ಮುಗಿದು ಜನರು ಮನೆಗೆ ತೆರಳುವಾಗ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಹೇಳಿದ ಸಚಿವ ಸುಧಾಕರ್, ವಾಪಸ್ ಹೋಗುವಾಗ ಯಾವುದೇ ಅವಘಡ ಸಂಭವಿಸದಂತೆ ಮನೆಗೆ ತಲುಪಿ ಎಂಬ ಮನವಿ ಮಾಡಿದರು. ಅಲ್ಲದೆ, ವಾಹನ ವೇಗವಾಗಿ ಚಲಾಯಿಸದಂತೆಯೂ ಕೋರಿದರು.