ಕ್ಲೀನ್ ಇಮೇಜ್‌ನ ಡಿಕೆಶಿ ಸೋದರರಿಗೆ ಬಿಜೆಪಿ ಕಿರುಕುಳ: ಸುರ್ಜೇವಾಲ
ಡಿಕೆಶಿ ಸೋದರರ ಮೇಲೆ ಇಲ್ಲ, ಸಲ್ಲದ ಆರೋಪ, ರಾಹುಲ್ ಯಾತ್ರೆ ವೇಳೆ 3 ಬಾರಿ ಸಮನ್ಸ್: ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ
ದಾವಣಗೆರೆ(ಅ.10): ಕ್ಲೀನ್ ಇಮೇಜ್ ಹೊಂದಿರುವ ಶುದ್ಧಹಸ್ತರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್‌ಗೆ ಜಾರಿ ನಿರ್ದೇಶನಾಲಯ(ಇ.ಡಿ.)ಮತ್ತು ಐಟಿ ಹಾಗೂ ಸಿಬಿಐ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಭಾರತ್ ಜೋಡೋ ಅಭಿಯಾನ ಆರಂಭವಾದ ನಂತರ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್‌ಗೆ ಮೂರು ಸಲ ಇ.ಡಿ. ಸಮನ್ಸ್ ಜಾರಿಗೊಳಿಸಿದೆ. ಬೇರೆ ಮುಖಂಡರನ್ನು ಬಿಟ್ಟು, ಈ ಸಹೋದರರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ, ಕಿರುಕುಳ ನೀಡಿ ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿದೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ತೊಂದರೆ ನೀಡಲೆಂದೇ ಐಟಿ ಮೂಲಕ ಕಿರುಕುಳ ನೀಡಲಾಗುತ್ತಿದೆ. ರಾಹುಲ್ ಗಾಂಧಿ ಯಾತ್ರೆಯಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆ. ಇಡಿ, ಐಟಿ, ಸಿಬಿಐ ಬಳಸಿ ಕಾಂಗ್ರೆಸ್ ಮುಖಂಡರನ್ನೇ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.
ಮೋದಿ ಸರ್ಕಾರದಿಂದ ಸರ್ಕಾರಿ ಉದ್ದಿಮೆಗಳ ಖಾಸಗೀಕರಣ: ಅಬ್ದುಲ್ ಜಬ್ಬಾರ್
ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಕನಿಷ್ಠ 3 ಕೋಟಿ ಜನ ಪ್ರತ್ಯಕ್ಷ, ಪರೋಕ್ಷವಾಗಿ ಪಾಲ್ಗೊಂಡಿದ್ದಾರೆ. ದೇಶದಲ್ಲಿ ಹೊಸ ಶಕ್ತಿಯ ಸಂಚಾರವಾಗುತ್ತಿದ್ದು, ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.
ಐಟಿ ಬಿಟಿ ಚೆನ್ನೈ, ಹೈದ್ರಾಬಾದ್ ಕಡೆಗೆ:
ಮುಂದಿನ ತಿಂಗಳಿನಿಂದಲೇ ಎಲ್ಲಾ ಪ್ರಾಂತ್ಯ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭಾರತ್ ಜೋಡೋ ಯಾತ್ರೆ ಸಾಗಲಿದೆ ಎಂದು ಸುರ್ಜೇವಾಲಾ ತಿಳಿಸಿದರು. ರಾಜ್ಯದಲ್ಲಿ ಕೋಮು ಗಲಭೆಯಿಂದಾಗಿ ಐಟಿ,ಬಿಟಿ ಸಂಸ್ಥೆಗಳು ಅನ್ಯ ರಾಜ್ಯಗಳ ಪಾಲಾಗುತ್ತಿದೆ. ಬೆಂಗಳೂರಿಗೆ ಬಂದ ಕಂಪನಿಗಳು ಈಗ ಚೆನ್ನೈ, ಹೈದರಾಬಾದ್ ಕಡೆ ಹೋಗುತ್ತಿವೆ. ಇದರಿಂದಾಗಿ ರಾಜ್ಯಕ್ಕೆ ಆರ್ಥಿಕ ಹೊಡೆತ ಬೀಳುತ್ತಿದೆ ಎಂದು ದೂರಿದರು.