ಕಲಬುರಗಿ, [ನ,11]:  ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಇಂದು [ಸೋಮವಾರ] ಬರೋಬ್ಬರಿ 50 ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತನ ಸನ್ನಿಧಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ನಾವಿಬ್ರು (ಕಾಂಗ್ರೆಸ್- ಜೆಡಿಎಸ್ ಮೈತ್ರಿ) ಒಂದಾಗಲ್ಲ ಅಂದ್ಮೇಲೆ ಯಡಿಯೂರಪ್ಪ ಯಾಕೆ ಚಿಂತೆ ಮಾಡ್ತಾರೆ? ಸಿದ್ದರಾಮಯ್ಯ- ಕುಮಾರಸ್ವಾಮಿ ಒಂದಾಗಲ್ಲ ಅಂದ್ಮೇಲೆ ಯಡಿಯೂರಪ್ಪ ಸರಕಾರ ಸೇಫ್ ಅಲ್ವೇನ್ರಿ, ಹೇಳ್ರಿ? ಎಂದು ಹೇಳಿ ನಸುನಕ್ಕರು.

50 ವರ್ಷದ ಬಳಿಕ ತೆರಳಿ ದತ್ತನ ಆಶೀರ್ವಾದ ಪಡೆದ ದೇವೇಗೌಡರು

ನಾನು ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಟ್ಟುಕೊಂಡು ಮಾತನಾಡೋಲ್ಲ, ರಾಜ್ಯದ ಜನತೆಯೇ ಎಲ್ಲವನ್ನು ನೋಡುತ್ತಿದೆ. ನಾವಿಬ್ರೂ (ಕಾಂಗ್ರೆಸ್- ಜೆಡಿಎಸ್) ಒಂದಾಗಲ್ಲ ಅಂದ್ಮೇಲೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಏನೂ ಆಗಲ್ಲ, ಅಲ್ವೇನ್ರಿ? ಹೀಗಾದಾಗ ಬಿಎಸ್‍ವೈ ಯಾಕೆ ಚಿಂತೆ ಮಾಡಬೇಕು ಹೇಳ್ರಿ? ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು.

ಬೆಳಗಾವಿ 2 ಕಡೆ ಹಾಗೂ ಉಳಿದಂತೆ 4 ರಿಂದ 5 ಕಡೆ ಪ್ರಬಲ ಪೈಪೋಟಿಯಂತೂ ನೀಡುತ್ತೇವೆ. ಕೆಆರ್ ಪೇಟೆ, ಹುಣಸೂರು ಪಕ್ಷದ ಅಭ್ಯರ್ಥಿಗಳ್ಯಾರೆಂಬುದನ್ನು ಶೀಘ್ರ ಅಂತಿಮಗೊಳಿಸಲಾಗುತ್ತದೆ. ಉಳಿದಂತೆ ನಾವು ಗೆಲ್ಲಲು ನಮ್ಮ ಶ್ರಮ ಹಾಕೇ ಹಾಕುತ್ತೇವೆ. ಪಕ್ಷ ಕಟ್ಟಬೇಕು, ಅದಕ್ಕಾಗಿಯೇ ಇಂತಹ ಹೋರಾಟ, ಖಡಕ್ ನಿರ್ಣಯ ತಮ್ಮದಾಗಿದೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ
ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ನಾವು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಮಾತ್ರಕ್ಕೆ ಎಲ್ಲಾಕಡೆ ಗೆಲ್ಲುತ್ತೇವೆ ಎಂದು ಹೇಳಲಾಗದು, ಸೋಲು- ಗೆಲವು ಮತದಾರರಿಗೆ ಬಿಟ್ಟ ವಿಚಾರ. ಹಾಗಂತ ನಾವು ಚುನಾವಣೆಯಿಂದ ದೂರ ಸರಿಯೋದಿಲ್ಲ, ಕಾರ್ಯಕರ್ತರನ್ನು ನಮ್ಮ ಪಕ್ಷಕ್ಕೆ ಹಿಡಿದಿಟ್ಟುಕೊಳ್ಳಲಾದರೂ ನಾವು ಈ ಬಾರಿ ಎಲ್ಲಾಕಡೆ ಕಣದಲ್ಲಿರುತ್ತೇವೆ. ಆದರೆ 5ರಿಂದ 6 ಕ್ಷೇತ್ರಗಳಲ್ಲಿ ತುಂಬ ಪ್ರಬಲ ಪೈಪೋಟಿ ನೀಡುವುದು ನಿಶ್ಚಿತ ಎಂದು ಹೇಳಿದರು.

ದೇವೇಗೌಡರ ಅಚ್ಚರಿ ಹೇಳಿಕೆ : ಬಿಜೆಪಿ-ಜೆಡಿಎಸ್ ಹತ್ತಿರ?

ನಗರಸಭೆ ಪುರಸಭೆ ಚುನಾವಣೆಗಳಲ್ಲಿ ನಮಗೆಲ್ಲಿ ಶಕ್ತಿ ಇದೆಯೋ ಅಂತಹ ವಾರ್ಡಗಳಲ್ಲೇ ಅಭ್ಯರ್ಥಿ ನಿಲ್ಲಿಸಿದ್ದೇವೆ. ಆದರೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಮಾತ್ರ ನಾವು ಎಲ್ಲಾಕಡೆ ಸ್ಪರ್ಧಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.

ಮಧ್ಯಂತರ ಚುನಾವಣೆ ಸಾಧ್ಯತೆ ಕ್ಷೀಣ
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಂಭವಗಳಿಲ್ಲ ಎಂದು ಹೇಳಿದ ದೇವೇಗೌಡರು ಅದ್ಯಾಕೆ ಮಧ್ಯಂತರ ಚುನಾವಣೆ ಆಗಬೇಕು ಹೇಳಿ? ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಉಲ್ಬಣಗೊಂಡರೆ ಮಾತ್ರ ಅಂತಹ ಸಾಧ್ಯತೆಗಳ ಬಗ್ಗೆ ಹೇಳಬಹುದೇ ವಿನಹಃ ಉಳಿದಂತೆ ಅಂತಹ ಯಾವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ ಎಂದು ಭವಿಷ್ಯ ನುಡಿದರು.

ಲಾಭ- ನಷ್ಟ ಯಾರಿಗೆ ಆಗಬೇಕು ಎಂದು ಲೆಕ್ಕ ಹಾಕಿ ನಾನು ಅಭ್ಯರ್ಥಿಗಳನ್ನ ನಿಲ್ಲಿಸುತ್ತಿಲ್ಲ, ನಮ್ಮ ಪಕ್ಷದ ಅಸ್ತಿತ್ವ ಇರಲಿ ಎಂಬುದು ನಮ್ಮ ಉದ್ದೇಶ. ಆದ್ದರಿಂದ ಯಾರಿಗೆ ಏನಾದರೂ ನಾನೇಕೆ ಚಿಂತಿಸಲಿ. ನಮ್ಮ ಪಕ್ಷದ ಬಾವುಟ ಹಿಡಿಯುವ ಕಾರ್ಯಕರ್ತರು ಇರಬೇಕಲ್ರಿ, ಅದಕ್ಕೇ ನಮಗೆ ಎಲ್ಲಾಕಡೆ ಸ್ಪರ್ಧೆ ಜರೂರಾಗಿದೆ. ಯಾರಿಗೇನಾಗುತ್ತದೆ ಎಂಬುದಕ್ಕೆ ನಾನ್ಯಾಕೆ ಚಿಂತಿಸಲಿ. ಈ ದೇವೇಗೌಡ ಯಾರಿಗೋ ಲಾಭ ಮಾಡಲು ರಾಜಕೀಯ ಮಾಡೋನಲ್ಲ, ಕಾಯಕರ್ತರಿಗಾಗಿ ರಾಜಕೀಯ ಮಾಡೋನು, ಕಳೆದ 59 ವರ್ಷದ ರಾಜಕೀಯದಲ್ಲಿ ಕಾರ್ಯಕರ್ತರು ಹಾಗೂ ಪಕ್ಷ ಸಂಘಟನೆಗೇ ದುಡಿದವನು ಎಂದು ತಿಳಿಸಿದರು.

ಮತ್ತೆ ಸೋತು ಗೆಲ್ತೀನಿ
ಈ ದೇವೇಗೌಡ ಯಾವಾಗ್ಲೂ ಸೋತು ಗೆದ್ದವ, 59 ವರ್ಷದ ರಾಜಕೀಯದಲ್ಲಿ 3 ಬಾರಿ ಸೋಲುಂಡಿರುವೆ, ಒಂದೂವರೆ ವರ್ಷ ಸಿಎಂ, 10 ತಿಂಗಳು  ಪ್ರಧಾನಿಯಾಗಿ ಕೆಲಸ ಮಾಡಿದವ ನಾನು. ಈಗಲೂ ಸೋತು ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷವನ್ನು ಬೇರುಮಟ್ಟದಲ್ಲಿ ಕಟ್ಟಬೇಕು ಎಂಬ ಸಂಕಲ್ಪ ಇದ್ದು, ಬರುವ ದಿನಗಳಲ್ಲಿ ರಾಜ್ಯಾದ್ಯಂತ ಸಂಚಾರ ಮಾಡ್ತೀನಿ. ಯಾರ ಸಹವಾಸ ಬೇಡವೆಂಬಂತೆ ಪಕ್ಷಕ್ಕೆ ಜನಮತ ಪಡೆಯುವಂತಹ ವಾತಾವರಣ ನಿರ್ಮಿಸುವ ಕೆಲಸ ಮಾಡೋ ಹಂಬಲ ತಮ್ಮದಾಗಿದೆ ಎಂದರು.

ರಾಜ್ಯದ ಪ್ರಗತಿ ಮಾಡಿ ತೋರಿಸುವೆ
ತಮಿಳುನಾಡಿನ ಡಿಎಂಕೆ ಪಕ್ಷದ ಮಾದರಿಯಲ್ಲಿ ರಾಜ್ಯದಲ್ಲಿಯೂ ಜನ ಜೆಡಿಎಸ್ ಬೆಂಬಲಿಸಿದರೆ ರಾಜ್ಯದ ಪ್ರಗತಿ ಮಾಡಿತೋರಿಸುವೆ ಎಂದ ದೇವೇಗೌಡರು ತಾವು ಪ್ರದಾನಿಯಾಗಿದ್ದಾಗ ನೀರಾವರಿ ಯೋಜನೆಗಳ ತ್ವರಿತ ಕಾಮಗಾರಿಗಾಗಿ ಆರಂಭಿಸಿದ್ದ ಆಕ್ಸಿಲರೇಟೆಡ್ ಇರಿಗೇಷನ್ ಬೆನಿಫಿಟ್ ಪ್ರಜೆಕ್ಟ್ ಸ್ಮರಿಸಿದರು. 

ಯಾಕೆ ನಂತರ ಈ ದೇಶ ಆಳಿದ ಪ್ರಧಾನಿಗಳು ಈ ಸ್ಕೀಂ ಮುಂದುವರಸಿಲ್ಲ. ಡಾ. ಮನಮೋಹನ ಸಿಂಗ್, ನೇರಂದ್ರ ಮೋದಿ ಏಕೆ ಇಂತಹ ರೈತ ಪರ ಯೋಜನೆ ಮುಂದುವರಿಸಲಿಲ್ಲ? ಎಂದು ಪ್ರಶ್ನಿಸಿದರು.