Asianet Suvarna News Asianet Suvarna News

ಪ್ರತಿಪಕ್ಷದ ‘ಕಮಿಷನ್‌ ಬಾಂಬ್‌’ಗೆ ಪ್ರತ್ಯಸ್ತ್ರ: ಕಾಂಗ್ರೆಸ್‌ನ ಹಗರಣಗಳ ತನಿಖೆಗೆ ಬಿಜೆಪಿ ನಿರ್ಧಾರ

 • ಪ್ರತಿಪಕ್ಷದ ‘ಕಮಿಷನ್‌ ಬಾಂಬ್‌’ಗೆ ಪ್ರತ್ಯಸ್ತ್ರ; ಕಾಂಗ್ರೆಸ್‌ನ ಹಗರಣಗಳ ತನಿಖೆಗೆ ಬಿಜೆಪಿ ನಿರ್ಧಾರ
 • -ವಿಧಾನಮಂಡಲದಲ್ಲಿ ಕಾಂಗ್ರೆಸ್‌ ವಾಗ್ದಾಳಿ ಎದುರಿಸಲು ಮೆಗಾಪ್ಲಾನ್‌
 •  ಕೈ ನಾಯಕರ ಹಗರಣ ಪ್ರಸ್ತಾಪ, ತನಿಖೆ ನಡೆಸಲು ಬಿಜೆಪಿ ತೀರ್ಮಾನ
BJP govt decision to investigate Congress scams bengaluru bsy politics
Author
First Published Sep 5, 2022, 7:24 AM IST

ಹುಬ್ಬಳ್ಳಿ (ಸೆ.5) :  ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ನಡೆಸಬಹುದಾದ ವಾಗ್ದಾಳಿ ಎದುರಿಸಲು ಆಡಳಿತಾರೂಢ ಬಿಜೆಪಿ ತಯಾರಿ ಆರಂಭಿಸಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ(Congress)ದ ಅವಧಿಯ ಹಗರಣಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವುದು ಹಾಗೂ ಅಗತ್ಯವಾದರೆ ತನಿಖೆಗೆ ವಹಿಸುವ ಬಗ್ಗೆ ಭಾನುವಾರ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai), ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌(Nalin Kumar Kateel) ನೇತೃತ್ವದಲ್ಲಿ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಭಾರತ್‌ ಜೋಡೋ’ ಮಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ: ಸಿ.ಟಿ.ರವಿ

ಇದೇ ತಿಂಗಳ 12ರಿಂದ ಹತ್ತು ದಿನಗಳ ಕಾಲ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದೆ. ಕಳೆದ ಹಲವು ದಿನಗಳಿಂದ 40 ಪರ್ಸೆಂಟ್‌ ಕಮೀಷನ್‌ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ, ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವ ಸಂಭವ ಹೆಚ್ಚಾಗಿದೆ. ಹೀಗಾಗಿ ಕಳವಳಗೊಂಡಿರುವ ಬಿಜೆಪಿ ನಾಯಕರು ಇದನ್ನು ಎದುರಿಸುವ ಕುರಿತು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(C.T.Ravi), ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar), ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ(K.S.Eshwarappa), ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi), ರಾಜ್ಯದ ಸಚಿವರಾದ ಗೋವಿಂದ ಕಾರಜೋಳ(Govind Karjol), ಆರ್‌.ಅಶೋಕ್‌(R.Ashok) ಮೊದಲಾದವರು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಸತತ ಆರೋಪಗಳಿಂದ ಬಿಜೆಪಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುವುದು ಅತ್ಯಗತ್ಯ. ಇಲ್ಲದಿದ್ದರೆ ಆ ಪಕ್ಷದ ನಾಯಕರು ಹೇಳುತ್ತಿರುವುದೇ ಸತ್ಯ ಎಂಬುದಾಗಿ ಜನರು ನಂಬುವ ಅಪಾಯವಿದೆ. ಮುಂಬರುವ ಅಧಿವೇಶನದಲ್ಲಿ ಕಾಂಗ್ರೆಸ್‌ ನಾಯಕರು ಸರ್ಕಾರದ ವಿರುದ್ಧ ಆರೋಪಗಳನ್ನು ಪ್ರಸ್ತಾಪಿಸಿದಲ್ಲಿ ಹಿಂದಿನ ಆ ಪಕ್ಷದ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣ, ಅಕ್ರಮಗಳನ್ನು ಪ್ರಸ್ತಾಪಿಸುವ ಮೂಲಕ ಎದಿರೇಟು ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.

ಏನಿದು ಕಾಂಗ್ರೆಸ್ ಕಾರ್ಯತಂತ್ರ?

 •  ಸೆ.12ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ
 •  40 ಪರ್ಸೆಂಟ್‌ ಕಮಿಷನ್‌ ಆರೋಪ ಪ್ರಸ್ತಾಪಕ್ಕೆ ವಿಪಕ್ಷ ತಯಾರಿ
 •  ಈ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕರಿಂದ ಮಹತ್ವದ ಸಭೆ
 •  ಕಾಂಗ್ರೆಸ್‌ ಆರೋಪಗಳಿಂದ ಸರ್ಕಾರ, ಪಕ್ಷದ ವರ್ಚಸ್ಸಿಗೆ ಧಕ್ಕೆ
 •  ತಕ್ಕ ಉತ್ತರ ನೀಡದಿದ್ದರೆ ಕಾಂಗ್ರೆಸ್‌ ಹೇಳುವುದನ್ನು ಜನ ನಂಬುವ ಭೀತಿ
 •  ಹೀಗಾಗಿ ಕಾಂಗ್ರೆಸ್ಸಿಗರು ಆರೋಪ ಮಾಡಿದರೆ ಪ್ರತಿದಾಳಿಗೆ ಒಮ್ಮತ
 •  ಕಾಂಗ್ರೆಸ್‌ ಸರ್ಕಾರ ಹಗರಣ, ಅಕ್ರಮ ಪ್ರಸ್ತಾಪಿಸಿ ಎದಿರೇಟಿಗೆ ನಿರ್ಧಾರ
 • ಅಗತ್ಯ ಬಿದ್ದರೆ ತನಿಖೆಯನ್ನೂ ನಡೆಸುವ ಕುರಿತು ನಾಯಕರ ತೀರ್ಮಾನ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್‌ ಕಾಲದಲ್ಲಿ ನಡೆದ ಹಗರಣ ಬಯಲಿಗೆ ಎಳೆಯುವ ಮತ್ತು ತನಿಖೆ ನಡೆಸುವ ಬಗ್ಗೆ ಸಹ ಚರ್ಚೆ ಆಗಿದೆ. ಕಾಂಗ್ರೆಸ್‌ ಕಾಲದ ಭ್ರಷ್ಟಾಚಾರ ಜನರ ಮುಂದೆ ಇಡುತ್ತೇವೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈಗಲೇ ಕ್ಲೈಮ್ಯಾಕ್ಸ್‌ ಹೋದರೆ ಹೇಗೆ? ಇದು ಸಿನಿಮಾಗೂ ಮುನ್ನ ಕೇವಲ ಟ್ರೈಲರ್‌ ಅಷ್ಟೇ. ಪಿಕ್ಚರ್‌ ಅಭಿ ಬಾಕೀ ಹೈ ಎಂದು ಮಾರ್ಮಿಕವಾಗಿ ಹೇಳಿದರು.
ಕಮಿಷನ್‌ ಆರೋಪ ಕಾಂಗ್ರೆಸ್‌ ಟೂಲ್‌ಕಿಟ್‌ ಭಾಗ: ಸಿ.ಟಿ.ರವಿ

ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ:

ರಾಜ್ಯದಲ್ಲಿ ಆರು ಹೊಸ ನಗರಗಳನ್ನು ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai), ಇನ್ನು ಕೆಲ ನಗರಗಳ ವಿಸ್ತರಣೆ ಮಾಡಿ ಮಾಸ್ಟರ್‌ ಪ್ಲ್ಯಾನ್‌(Master Plan) ಕೂಡ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ನಗರಾಭಿವೃದ್ಧಿ ಇಲಾಖೆ(Urban Development Department)ಯಿಂದ ಎರಡು ಹೊಸ ತೀರ್ಮಾನಗಳನ್ನು ಮಾಡಲಾಗಿದೆ. ಅದರಲ್ಲಿ ಮೊದಲನೆಯದು, ಆರುM ಹೊಸ ನಗರಗಳನ್ನು ನಿರ್ಮಾಣ ಮಾಡುವುದು. ಈ ಬಗ್ಗೆ ಬಜೆಟ್‌ನಲ್ಲಿ ಕೂಡ ಪ್ರಸ್ತಾಪಿಸಲಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮೈಸೂರು, ಮಂಗಳೂರು, ವಿಜಯಪುರ ಈ ನಗರಗಳನ್ನು ಮೆಗಾ ಸಿಟಿಗಳಂತೆ ಅಭಿವೃದ್ಧಿ ಪಡಿಸಲಾಗುವುದು. ಇವುಗಳ ಮಾಸ್ಟರ್‌ ಪ್ಲ್ಯಾನ್‌ಗಳನ್ನು ವಿಸ್ತರಿಸಲಾಗುತ್ತದೆ. ಇದು ಎರಡನೆಯ ತೀರ್ಮಾನ ಎಂದು ಹೇಳಿದರು.

ಕಾಂಗ್ರೆಸ್‌ ಕಾಲದಲ್ಲಿ ನಡೆದ ಹಗರಣ ಬಯಲಿಗೆ ಎಳೆಯುವ ಮತ್ತು ತನಿಖೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಕಾಂಗ್ರೆಸ್‌ ಕಾಲದ ಭ್ರಷ್ಟಾಚಾರವನ್ನು ಜನರ ಮುಂದೆ ಇಡುತ್ತೇವೆ. ಇದು ಸಿನಿಮಾಗೂ ಮುಂಚಿನ ಟ್ರೇಲರ್‌ ಅಷ್ಟೆ. ಪಿಕ್ಚರ್‌ ಮುಂದಿದೆ.

- ಸಿ.ಟಿ. ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Follow Us:
Download App:
 • android
 • ios