‘ಪಸ್ಮಾಂದಾ’ ಮುಸ್ಲಿಮರಿಗೆ ಬಿಜೆಪಿ ಗಾಳ ಮುಸ್ಲಿಂರಲ್ಲೇ ದಲಿತ ವರ್ಗ ಇದು ಮೋದಿ ಹೇಳಿಕೆಯಿಂದ ಈಗ ಸಂಚಲನ

ನವದೆಹಲಿ (ಜು.10): 2024ರ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಜಯಭೇರಿ ಬಾರಿಸಲು ಬಿಜೆಪಿ ಇದೀಗ ಮುಸ್ಲಿಂ ವರ್ಗದ ಮತಗಳ ಮೇಲೆ ಕಣ್ಣಿಟ್ಟಿರುವಂತಿದೆ. ಬಿಜೆಪಿಯು ಮುಸ್ಲಿಂ ವಿರೋಧಿ ಪಕ್ಷ, ಆ ಪಕ್ಷದಲ್ಲಿ ಒಬ್ಬರೂ ಮುಸ್ಲಿಂ ಸಂಸದರೂ ಇಲ್ಲ ಎಂಬ ಆರೋಪ-ಟೀಕೆಗಳ ನಡುವೆಯೇ, ಮುಸ್ಲಿಮರಲ್ಲೇ ತುಳಿತಕ್ಕೊಳಗಾಗಿರುವ ಪಸ್ಮಾಂದಾ ಸಮುದಾಯವನ್ನು ಓಲೈಸಲು ಬಿಜೆಪಿ ತಯಾರಿ ನಡೆಸುತ್ತಿರುವಂತಿದೆ.

ಇದಕ್ಕೆ ಇಂಬು ನೀಡುವಂತೆ, ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತುಗಳು ಸಂಚಲನ ಮೂಡಿಸಿವೆ. ‘ಮುಸ್ಲಿಮರಲ್ಲೇ ದಲಿತರಾಗಿರುವ ಪಸ್ಮಾಂದಾದಂತಹ ಸಮುದಾಯಗಳ ಬಗ್ಗೆ ವಿಶ್ಲೇಷಣೆ ಮಾಡಿ, ಸರ್ಕಾರದ ಯೋಜನೆಗಳು ಯಾವ ರೀತಿ ಆ ಸಮುದಾಯಕ್ಕೆ ತಲುಪಿವೆ, ಅವರನ್ನು ಮೇಲೆತ್ತಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ಲೇಷಣೆ ನಡೆಸಿ’ ಎಂದು ಉತ್ತರಪ್ರದೇಶ ಬಿಜೆಪಿ ಘಟಕಕ್ಕೆ ಮೋದಿ ಸೂಚನೆ ನೀಡಿದ್ದಾರೆ. ಪಸ್ಮಾಂದಾರ ಜತೆ ಸಂಪರ್ಕ ಸಾಧಿಸುವಂತೆಯೂ ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ಬಿಜೆಪಿಗೆ 150 ಸೀಟು ಸಿಗುತ್ತೆ ಅಂತ ಸಮೀಕ್ಷೆ ಬಂದಿವೆ: ಕಟೀಲ್‌

ಪಸ್ಮಾಂದಾ ಮೇಲೇಕೆ ಕಣ್ಣು?: ಉತ್ತರಪ್ರದೇಶದ ಆಜಂಗಢ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಯಾದವ- ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ರೀತಿ ಗೆದ್ದಿರುವುದಕ್ಕೆ ಪಸ್ಮಾಂದಾ ಸಮುದಾಯ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಆ ಸಮುದಾಯದ ಮೇಲೆ ಬಿಜೆಪಿ ಗಮನಹರಿಸುತ್ತಿದೆ ಎನ್ನಲಾಗಿದೆ.

ಅಂದಹಾಗೆ, ದೇಶದಲ್ಲಿರುವ ಒಟ್ಟಾರೆ ಮುಸ್ಲಿಮರಲ್ಲಿ ಶೇ.15ರಷ್ಟುಮಾತ್ರವೇ ಮೇಲ್ವರ್ಗ. ಉಳಿದ ಶೇ.85ರಷ್ಟುಮುಸ್ಲಿಮರು ಹಿಂದುಳಿದ, ದಲಿತ ಹಾಗೂ ಬುಡಕಟ್ಟು ಮುಸ್ಲಿಮರಾಗಿದ್ದಾರೆ. ಆ ಪೈಕಿ ಪಸ್ಮಾಂದಾರ ಸಂಖ್ಯೆ ದೊಡ್ಡದಿದೆ. ಈ ಸಮುದಾಯ ತುಳಿತಕ್ಕೊಳಗಾಗಿದೆ. ಪಸ್ಮಾಂದಾ ಎಂಬುದು ಪರ್ಷಿಯಾದ ಪದವಾಗಿದ್ದು, ಕಡೆಗಣಿತರು ಎಂಬ ಅರ್ಥವಿದೆ. ಈ ಸಮುದಾಯ ಉತ್ತರಪ್ರದೇಶ, ಬಿಹಾರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನೆಲೆಯೂರಿದೆ.

ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ, ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ರಚನೆ

ಯಾವುದೇ ಸರ್ಕಾರಗಳೂ ತನ್ನತ್ತ ಗಮನಹರಿಸಿಲ್ಲ ಎಂಬ ಸಿಟ್ಟು ಸಮುದಾಯಕ್ಕಿದೆ. ಸಮುದಾಯದ ಬೆಂಬಲಕ್ಕೆ ನಿಂತರೆ ನೆರವಾಗುವುದಾಗಿ ಹೇಳಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ ಆ ಸಮುದಾಯಕ್ಕೆ ಗಾಳ ಹಾಕಿದೆ ಎಂದು ಹೇಳಲಾಗಿದೆ.

ಸಂವಿಧಾನದ 341ನೇ ವಿಧಿಯಡಿ ದಲಿತ ಮುಸ್ಲಿಮರಿಗೆ 1936ರಿಂದ 1950ರವರೆಗೆ ಮೀಸಲಾತಿ ಇತ್ತು. ಆದರೆ 1950ರಲ್ಲಿ ಕಾಂಗ್ರೆಸ್‌ ಸರ್ಕಾರ ಅದನ್ನು ವಾಪಸ್‌ ತೆಗೆದುಕೊಂಡಿತು. ಸಿಖ್ಖರು, ಬೌದ್ಧರಿಗೆ ಮೀಸಲಾತಿ ಮರಳಿಸಿದಂತೆ ಪಸ್ಮಾಂದಾಗಳಿಗೂ ವಾಪಸ್‌ ಕೊಡಬೇಕು ಎಂಬುದು ಈ ಸಮುದಾಯದ ಬೇಡಿಕೆಯಾಗಿದೆ.

Karnataka Assembly Election 2023; ಬೊಮ್ಮಾಯಿಗೆ ಬ್ರಾಂಡ್ ಸೆಟ್ ಮಾಡಲು ರಾಜ್ಯ ಬಿಜೆಪಿ ತಂತ್ರ!

ಮುಸ್ಲಿಮರ ವರ್ಗಗಳು: ಮುಸ್ಲಿಮರಲ್ಲಿ ಅಶ್ರಫ್‌, ಅಲ್ಜಾಫ್‌ ಹಾಗೂ ಅರ್ಜಲ್‌ ಎಂಬ ಮೂರು ವರ್ಗಗಳಿವೆ. ಅರೇಬಿಯಾ, ಪರ್ಷಿಯಾ, ಟರ್ಕಿ, ಅಷ್ಘಾನಿಸ್ತಾನದಂತಹ ವಿದೇಶಿ ಮೂಲದ, ಸೈಯದ್‌, ಶೇಖ್‌, ಮುಘಲ್‌, ಪಠಾಣ್‌ ಎಂದು ಕರೆಸಿಕೊಳ್ಳುವವರೇ ಅಶ್ರಫ್‌. ಇದು ಮೇಲ್ವರ್ಗವಾಗಿದೆ. ರಜಪೂತ, ಗೌರ್‌, ತ್ಯಾಗಿ ಮುಸ್ಲಿಂನಂತಹ ಹಿಂದು ಸಮುದಾಯದಿಂದ ಮತಾಂತರಗೊಂಡವರೂ ಇದೇ ಮೇಲ್ವರ್ಗದಲ್ಲಿ ಬರುತ್ತಾರೆ. ಅಲ್ಜಾಫ್‌ಗಳು ಹಿಂದು ಸಮುದಾಯದ ಒಬಿಸಿಗೆ, ಅರ್ಜಲ್‌ಗಳು ಹಿಂದು ಸಮುದಾಯದ ದಲಿತರಿಗೆ ಸಮನಾಗಿದ್ದಾರೆ.