ರಾಮಕೃಷ್ಣ ದಾಸರಿ

ರಾಯಚೂರು(ನ.16): ಎಲ್ಲೆಡೆ ಬೆಳಕಿನ ಹಬ್ಬ ಸಂಭ್ರಮವು ಮನೆ ಮಾಡಿದ್ದರೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಮಾತ್ರ ಹಬ್ಬದ ಸಡಗರಕ್ಕೆ ರಾಜಕೀಯ ರಂಗು ಅಂಟಿಕೊಂಡು ದೀಪಾವಳಿಯ ಮೆರಗನ್ನು ಹೆಚ್ಚಿಸುವಂತೆ ಮಾಡಿದೆ.

ಇಷ್ಟರಲ್ಲಿಯೇ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯು ಘೋಷಣೆಯಾಗುವ ಸಾಧ್ಯತೆಗಳಿರುವುದರಿಂದ ರಾಜಕೀಯ ಪಕ್ಷಿಗಳಿಗೆ, ಸ್ಪರ್ಧಾಳುಗಳಿಗೆ ಹಾಗೂ ಮುಖಂಡರಿಗೆ ದೀಪಾವಳಿ ಹಬ್ಬವು ರಾಜಕೀಯ ಚದುರಂಗದ ಕಾವನ್ನು ಇಮ್ಮಡಿಗೊಳಿಸುತ್ತಿದ್ದು, ಇದನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹಾಗೂ ಆರ್‌.ಬಸನಗೌಡ ತುರವಿಹಾಳ ಅವರು ಲಾಭ ಪಡೆದುಕೊಳ್ಳುವ ಪ್ರಯತ್ನವನ್ನು ಜೋರಾಗಿಸಿದ್ದಾರೆ.

ಬಿಜೆಪಿ ಟಾರ್ಗೆಟ್‌ ಮಸ್ಕಿಗೆ ಶಿಫ್ಟ್‌:

ರಾಜ್ಯದ ಉಪಚುನಾವಣೆ ನಡೆಸಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕು ಎನ್ನುವ ಗುರಿಯನ್ನಿಟ್ಟುಕೊಂಡಿದ್ದ ಬಿಜೆಪಿ ಈಗಾಗಲೇ ಬಹುತೇಕ ಎಲ್ಲ ಕಡೆ ಮೇಲುಗೈ ಸಾಧಿಸಿದೆ. ಇತ್ತೀಚೆಗೆ ಪ್ರಕಟಗೊಂಡ ಶಿರಾ, ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಗೆಲುವಿನ ಯಾತ್ರೆಯನ್ನು ಮುಂದುವರೆಸಿದ್ದ ಬಿಜೆಪಿಯ ಟಾರ್ಗೇಟ್‌ ಇದೀಗ ಮಸ್ಕಿಗೆ ಶಿಫ್ಟಾಗಿದೆ. ದಶಕದ ಹಿಂದೆ ಬಿಜೆಪಿ ತೆಕ್ಕೆಯಲ್ಲಿದ್ದ ಮಸ್ಕಿ ಕ್ಷೇತ್ರವನ್ನು ಕೈಯಿಂದ ಕಸಿದುಕೊಳ್ಳುವುದರ ಮೂಲಕ ಮತ್ತೆ ಕಮಲ ಅರಳಿಸುವ ಶಪಥವನ್ನು ಮಾಡಿ ಉಪಕದನದಲ್ಲಿ ದುಮುಕಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಘೊಷಣೆಗೂ ಮುನ್ನವೇ ಮಸ್ಕಿ ಉಪಕದನ ಕಾವು: ಕಾಂಗ್ರೆಸ್‌-ಬಿಜೆಪಿಯಿಂದ ಭರ್ಜರಿ ತಯಾರಿ..!

20ಕ್ಕೆ ಸಿಂಧನೂರಿನಲ್ಲಿ ಬಿಜೆಪಿ ಸಭೆ:

ಮಸ್ಕಿ ಉಪಕದನ ಹಿನ್ನೆಲೆಯಲ್ಲಿ ಯಾವ ರೀತಿ ರಣತಂತ್ರ ರೂಪಿಸಬೇಕು ಎನ್ನುವ ವಿಷಯಗಳ ಕುರಿತು ಚರ್ಚಿಸಲು ಇದೇ ನ.20 ಕ್ಕೆ ಸಿಂಧನೂರಿನ ಸತ್ಯಾಗಾರ್ಡನ್‌ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಏರ್ಪಡಿಸಲಾಗಿದೆ. ಸಭೆಗೆ ಪಕ್ಷದ ರಾಜಾಧ್ಯಕ್ಷ ನಳಿನ ಕುಮಾರ ಕಟೀಲ್‌, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ರಾಜ್ಯ ಸಮಿತಿಯ ಪ್ರಮುಖಂರು, ವಿವಿಧ ಮೋರ್ಚಾಗಳ ಮುಖಂಡರು ಭಾಗವಹಿಸಲಿದ್ದಾರೆ. ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಬೀಡುಬಿಡಲು ಬಿಜೆಪಿ ಎಲ್ಲ ರೀತಿಯ ತಯಾರಿ ನಡೆಸಿದ್ದು, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ಅವರು ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಮುಂದಿನ ವಾರ ವಸತಿ ಸಚಿವ ವಿ.ಸೋಮಣ್ಣ ಸಹ ಬರಲಿದ್ದು ತದನಂತರ ಕಾರ್ಯಕಾರಣಿ ಸಭೆಯು ಜರುಗಲಿದೆ.

22ಕ್ಕೆ ಕಾಂಗ್ರೆಸ್‌ ಬೃಹತ್‌ ಸಮಾವೇಶ:

ಬಿಜೆಪಿ ಬಲಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿ ನ.22 ಕ್ಕೆ ಮಸ್ಕಿಯಲ್ಲಿ ಕಾಂಗ್ರೆಸ್‌ ಬೃಹತ್‌ ಸಮಾವೇಶವನ್ನು ಹಮ್ಮಿಕೊಂಡಿದೆ. ಇತ್ತೀಚೆಗೆ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ ಸೇರಿರುವ ಆರ್‌.ಬಸನಗೌಡ ತುರವಿಹಾಳ ಅವರನ್ನು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕೈ ಪಕ್ಷಕ್ಕೆ ಸಾಂಕೇತಿಕವಾಗಿ ಬರಮಾಡಿಕೊಂಡಿದ್ದಾರೆ. 22 ರ ಸಮಾವೇಶದಲ್ಲಿ ತುರವಿಹಾಳ ಅವರು ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿದ್ದು ಅವರ ಜೊತೆಗೆ ನೂರಾರು ಜನ ಅಭಿಮಾನಿಗಳು, ಕಾರ್ಯಕರ್ತರು ಕೈ ಪಕ್ಷಕ್ಕೆ ಹೋಗುತ್ತಿದ್ದಾರೆ.

ಸಿಂಧನೂರಿನ ಸತ್ಯಾಗಾರ್ಡನ್‌ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯನ್ನು ಇದೇ ನ.20 ಕ್ಕೆ ಆಯೋಜಿಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್‌ ಸೇರಿ ಪಕ್ಷದ ಮುಖಂಡರು, ಸದಸ್ಯರು ಭಾಗವಹಿಸಲಿದ್ದಾರೆ. ಮಸ್ಕಿ ಉಪಚುನಾವಣೆ ಜೊತೆಗೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಸಮಾಲೋಚಿಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್‌ ತಿಳಿಸಿದ್ದಾರೆ.