Asianet Suvarna News Asianet Suvarna News

ಜೆಡಿಎಸ್‌ ಅಭ್ಯರ್ಥಿ ಮೇಲೆ ಕೈ-ಕಮಲ ಅಭ್ಯರ್ಥಿ ಹಣೆಬರಹ ನಿರ್ಧಾರ?

ಜೆಡಿಎಸ್‌ ವರಿಷ್ಠರ ದುಂಬಾಲು ಬಿದ್ದಿರುವ ಹಲವಾರು ನಾಯಕರು, ಗೆಲವು ಸಾಧಿಸದಿದ್ದರೂ ನಿರ್ಣಾಯಕ ಪಾತ್ರದಲ್ಲಿದೆ ಜೆಡಿಎಸ್‌

BJP Congress Candidate Fate Decision on JDS Candidate in Vijayapura grg
Author
First Published Sep 28, 2022, 9:45 PM IST

ನಾರಾಯಣ ಮಾಯಾಚಾರಿ

ಮುದ್ದೇಬಿಹಾಳ(ಸೆ.28): ಇದು ಚುನಾವಣೆ ವರ್ಷ. ಪ್ರತಿಯೊಂದು ಪಕ್ಷದಲ್ಲಿ ತೆರೆಮರೆಯ ಕಸರತ್ತು ಕೂಡ ಆರಂಭಗೊಂಡಿದೆ. ಅಖಾಡಕ್ಕೆ ಇಳಿಯಲು ತಮ್ಮ ಶಕ್ತಿ ಪ್ರದರ್ಶನಕ್ಕೂ ಮುಂದಾಗುತ್ತಿದ್ದಾರೆ ಹಲವಾರು ಆಕಾಂಕ್ಷಿಗಳು. ಅದರಂತೆ ಕ್ಷೇತ್ರದಲ್ಲಿ ಹೆಚ್ಚು ಬಲವಿಲ್ಲದಿದ್ದರೂ ಜೆಡಿಎಸ್‌ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಯ ಸೋಲು ಗೆಲುವಿನ ಲೆಕ್ಕಾಚಾರ ತೀರ್ಮಾನವಾಗಲಿದೆ. ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂಬುವುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಸ್ಥಿತ್ಯಂತರದಿಂದಾಗಿ ಕಳೆದ ಬಾರಿ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್‌ ಈಗ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಅದರಂತೆ ಜೆಡಿಎಸ್‌ ವರ್ಚಸ್ಸು ಇಲ್ಲಿ ಇಲ್ಲದಿದ್ದರೂ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರ ನಿಧನದ ನಂತರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಬಲವರ್ಧನೆ ಹಾಗೂ ವರ್ಚಸ್ಸು ಕ್ರಮೇಣ ಕುಂಠಿತಗೊಂಡಿತ್ತು. ಆಗ ಜೆಡಿಎಸ್‌ ತನ್ನ ಶಕ್ತಿ ಅಡಗಿಸಿಕೊಂಡಿತು ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ, ಬಿಜೆಪಿ ತನಗೆ ಯಾವುದೇ ಸ್ಥಾನಮಾನ ನೀಡದೇ ಇರುವುದನ್ನು ಮನಗಂಡ ಮಹಿಳಾ ನಾಯಕಿ ಮಂಗಳಾದೇವಿ ಬಿರಾದಾರ ಅವರು 2018ರಲ್ಲಿ ಜೆಡಿಎಸ್‌ನಿಂದಲೇ ಚುನಾವಣೆಯಲ್ಲಿ ಸ್ಪರ್ಧೆಗಿಳಿದರು. ಆದರೆ, ದುರಾದೃಷ್ಟಅವರು ಜಯ ಫಲಿಸಲಿಲ್ಲ. ಆದರೆ, ಅವರ ಹೋರಾಟ ಮಾತ್ರ ವ್ಯರ್ಥವಾಗಲಿಲ್ಲ. ಒಂದು ಕಾಲದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಜೆಡಿಎಸ್‌ನಲ್ಲಿ ತಮ್ಮ ಶಕ್ತಿಯನ್ನೂ ಗುರುತಿಸುವಂತೆ ಮಾಡಿದವರು. ಪ್ರಸ್ತುತ ಅವರು ಕೂಡ ಮುಂದೆ ಸ್ಪರ್ಧೆ ಮಾಡುತ್ತಾರೆಯೇ ಎಂಬ ಪ್ರಶ್ನೆ ಕೂಡ ಎದುರಾಗಿದೆ.

ಬೊಮ್ಮಾಯಿ ಹಿಂಬಾಗಿಲಿನಿಂದ ಬಂದ ಸಿಎಂ: ಸಿದ್ದರಾಮಯ್ಯ

ಈ ಹಿನ್ನೆಲೆಯಲ್ಲಿ ತಮಗೆ ಜೆಡಿಎಸ್‌ ಟಿಕೆಟ್‌ ನೀಡುವಂತೆ ಹಲವಾರು ಆಕಾಂಕ್ಷಿಗಳು ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಆದರೆ, ಆಕಾಂಕ್ಷಿಗಳು ಬರುತ್ತಿರುವುದು ಕಂಡಿರುವ ವರಿಷ್ಠರು ಸಂಘಟನೆಯಲ್ಲಿ ತೊಡಗುವಂತೆ ಬೆನ್ನುತಟ್ಟಿಕಳುಹಿಸುತ್ತಿದ್ದಾರೆ. ಯಾರಿಗೂ ಖಚಿತವಾಗಿ ಟಿಕೆಟ್‌ ನೀಡುವ ಭರವಸೆ ನೀಡುತ್ತಿಲ್ಲ.

ಕಳೆದ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರಬಲ ರೆಡ್ಡಿ ಲಿಂಗಾಯತ ಸಮಾಜದ ಯುವ ಮುಖಂಡ ಸಮಾಜಸೇವಕ ಶಾಂತಗೌಡ ಪಾಟೀಲ(ನಡಹಳ್ಳಿ), 19 ಸಾವಿರಕ್ಕಿಂತ ಅಧಿಕ ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಈಗಲೂ ಅವರು ಜೆಡಿಎಸ್‌ನ ಪ್ರಬಲ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.

ವಿಪಕ್ಷಗಳ ನಾಯಕರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ಸಚಿವ ಗೋವಿಂದ ಕಾರಜೋಳ

ತಾಲೂಕಿನ ರೆಡ್ಡಿ ಲಿಂಗಾಯತ ಸಮಾಜಕ್ಕೆ ಸೇರಿರುವ ಅವರು ಹಲವು ವರ್ಷಗಳಿಂದ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದು, ನಾನಾ ಸಂಘ ಸಂಸ್ಥೆಗಳು, ಫೌಂಡೇಶನ್‌ಗಳ ಮೂಲಕವಾಗಿ ಅವರು ಆರೋಗ್ಯ ಶಿಬಿರ ಸೇರಿದಂತೆ ಹಲವು ರೀತಿಯ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಇನ್ನು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ ಮತ್ತು ವೈದ್ಯರಾಗಿ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡು ಜೆಡಿಎಸ್‌ನಲ್ಲಿರುವ ವಿಜಯಪುರದ ಡಾ.ಸಿ.ಎಸ್‌.ಸೋಲಾಪೂರ ಕೂಡ ಟಿಕೆಟ್‌ ಪೈಪೋಟಿಗೆ ಮುಂದಾಗಿದ್ದಾರೆ. ಜತೆಗೆ ಲಿಂಗಾಯತ ಪಂಚಮಸಾಲಿ ಸಮಾಜದ ನಾಲತವಾಡದ ಪ್ರತಿಷ್ಠಿತ ದೇಶಮುಖ ಮನೆತನದ ಗುರುಪ್ರಸಾದ ದೇಶಮುಖ ಸೇರಿದಂತೆ ಇನ್ನೂ ಹಲವರು ಈ ಬಾರಿ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಹಲವು ವರ್ಷಗಳಿಂದ ಜೆಡಿಎಸ್‌ನಲ್ಲೇ ಸಕ್ರಿಯ ಕಾರ್ಯಕರ್ತನಾಗಿ, ಸದ್ಯ ತಾಲೂಕು ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲೂ ಮತ್ತು ಮುದ್ದೇಬಿಹಾಳ ಮತಕ್ಷೇತ್ರದಲ್ಲೂ ಜೆಡಿಎಸ್‌ ಪಕ್ಷವೇ ನಿರ್ಣಾಯಕ ಪಾತ್ರವಹಿಸುತ್ತದೆ. ವರಿಷ್ಠರು ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಅಂತ ಮುದ್ದೇಬಿಹಾಳ ಜೆಡಿಎಸ್‌ ತಾಲೂಕು ಅಧ್ಯಕ್ಷ ಪ್ರಭುಗೌಡ ಪಾಟೀಲ ತಿಳಿಸಿದ್ದಾರೆ. 
 

Follow Us:
Download App:
  • android
  • ios