ಮಧ್ಯಪ್ರದೇಶ ಗೆಲ್ಲಲು ಬಿಜೆಪಿ ‘ಕ್ಲಸ್ಟರ್ ಬಾಂಬಿಂಗ್’ ತಂತ್ರ..!
230 ಕ್ಷೇತ್ರಗಳ ಅಧ್ಯಯನಕ್ಕೆ ಅನ್ಯರಾಜ್ಯದ 230 ಶಾಸಕರ ನೇಮಕ, ಎಲ್ಲ ಕ್ಷೇತ್ರ ಸುತ್ತಿ ಜನರ ನಾಡಿಮಿಡಿತ ಅರಿಯಲಿರುವ ಈ ಶಾಸಕರು, ಇವರ ವರದಿ ಆಧರಿಸಿ ಅಂತಿಮ ಅಭ್ಯರ್ಥಿ ಆಯ್ಕೆ, ಜಯದ ಕಾರ್ಯತಂತ್ರ.

ಭೋಪಾಲ್(ಆ.21): ಮಧ್ಯಪ್ರದೇಶ ಚುನಾವಣೆ ವರ್ಷಾಂತ್ಯದಲ್ಲಿ ನಡೆಯಲಿದ್ದು, ಈ ಚುನಾವಣೆಯಲ್ಲಿ ಗೆದ್ದು ಶತಾಯ ಗತಾಯ ಪುನಃ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿ ‘ಕ್ಲಸ್ಟರ್ ಬಾಂಬಿಂಗ್’ ರಣನೀತಿ ಮೊರೆ ಹೋಗಿದೆ. ‘ಕ್ಲಸ್ಟರ್’ ಅಂದರೆ ಸ್ಥಳೀಯ ಮಟ್ಟದಲ್ಲಿ ಇರುವ ಜನಾಶಯವನ್ನು ಆಧರಿಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡಲು ಹಾಗೂ ಗೆಲುವಿಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 109 ಹಾಗೂ ಕಾಂಗ್ರೆಸ್ 114 ಸ್ಥಾನ ಗೆದ್ದಿದ್ದವು. ಆದರೆ ನಂತರ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿ ತಮ್ಮೊಂದಿಗೆ ಹಲವು ಶಾಸಕರನ್ನು ಬಿಜೆಪಿಗೆ ಕರೆತಂದಿದ್ದರು. ಹೀಗಾಗಿ ಕಾಂಗ್ರೆಸ್ ಸರ್ಕಾರ ಪತನವಾಗಿ ಶಿವರಾಜ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ಶಿವರಾಜ್ ಜನಪ್ರಿಯತೆ ಕುಸಿತವಾಗಿದೆ ಹಾಗೂ ಬಿಜೆಪಿ ಸ್ಥಿತಿ ಕಷ್ಟಮಯವಾಗಿದೆ ಎನ್ನಲಾಗಿದೆ. ಹೀಗಾಗಿ ‘ಕ್ಲಸ್ಟರ್ ಬಾಂಬಿಂಗ್ ತಂತ್ರ’ಕ್ಕೆ ಬಿಜೆಪಿ ಮುಂದಾಗಿದೆ ಎಂದು ಮೂಲಗಳು ವಿವರಿಸಿವೆ.
ಕಾಂಗ್ರೆಸ್ ಸಮುದ್ರವಿದ್ದಂತೆ ಯಾರು ಬರ್ತಾರೆ, ಹೋಗ್ತಾರೆ ಗೊತ್ತಾಗಲ್ಲ: ಸಚಿವ ಮಂಕಾಳ ವೈದ್ಯ
ಏನಿದು ಕ್ಲಸ್ಟರ್ ಬಾಂಬಿಂಗ್ ರಣನೀತಿ
ರಾಜ್ಯದಲ್ಲಿ 230 ವಿಧಾನಸಭೆ ಕ್ಷೇತ್ರಗಳಿವೆ. ಈಗಾಗಲೇ ಈ ಪೈಕಿ 39 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿ ಆಗಿದೆ. ಈ ನಡುವೆ ಚುನಾವಣಾ ಸಿದ್ಧತೆಗಾಗಿ ಮಧ್ಯಪ್ರದೇಶದ ಅಕ್ಕಪಕ್ಕದ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದ 230 ಶಾಸಕರನ್ನು ಪ್ರತಿಯೊಂದು ಕ್ಷೇತ್ರಕ್ಕೂ ತಲಾ ಒಬ್ಬೊಬ್ಬರಂತೆ ನಿಯೋಜಿಸಲಾಗುತ್ತದೆ. ಇಲ್ಲಿ ಅವರು ಆಯಾ ಕ್ಷೇತ್ರಗಳ ಗಣ್ಯರು, ತಜ್ಞರು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಹಾಗೂ ಜನಸಾಮಾನ್ಯರನ್ನು ಭೇಟಿ ಮಾಡಿ ಕ್ಷೇತ್ರದ ಜನರ ನಾಡಿ ಮಿಡಿತವನ್ನು ಅರಿಯಲಿದ್ದಾರೆ.
ಬಳಿಕ ಒಂದು ವರದಿ ಸಿದ್ಧಪಡಿಸಿ, ‘ಅಲ್ಲಿನ ಹಾಲಿ ಬಿಜೆಪಿ ಶಾಸಕ ಅಥವಾ ಅಭ್ಯರ್ಥಿಯಾಗಲು ಯತ್ನಿಸುತ್ತಿರುವವರ ಬಗ್ಗೆ ಜನರು ಏನು ಹೇಳಿದ್ದಾರೆ? ಆ ಕ್ಷೇತ್ರದ ಜನರ ಬೇಕು-ಬೇಡಗಳು ಏನು? ಪಕ್ಷ ಗೆಲ್ಲಲು ರೂಪಿಸಬೇಕಾದ ತಂತ್ರಗಳೇನು?’ ಎಂಬುದನ್ನು ಹೈಕಮಾಂಡ್‌ಗೆ ಸಲ್ಲಿಸಲಿದ್ದಾರೆ. ಈ ವರದಿ ಆಧರಿಸಿ, ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧರಿಸಲಿದೆ ಹಾಗೂ ಈಗಾಗಲೇ ಅಭ್ಯರ್ಥಿಗಳು ಆಯ್ಕೆಯಾಗಿರುವ ಕ್ಷೇತ್ರಗಳಲ್ಲಿ ಗೆಲುವಿಗೆ ಯಾವ ರಣನೀತಿ ರೂಪಿಸಬೇಕು ಎಂಬುದನ್ನುನಿರ್ಧರಿಸಲಿದೆ ಎಂದು ಮೂಲಗಳು ಹೇಳಿವೆ.