ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ನಲ್ಲೂ ಉತ್ಸಾಹ ಇಮ್ಮಡಿಯಾಗಿದೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಮಾಡಿಕೊಂಡು,
ಬೆಂಗಳೂರು (ನ.15): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ನಲ್ಲೂ ಉತ್ಸಾಹ ಇಮ್ಮಡಿಯಾಗಿದೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಮಾಡಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಮಾದರಿಯಲ್ಲಿ ಕಮಾಲ್ ಮಾಡಲು ಚಿಂತನೆ ನಡೆದಿದೆ. ಬಿಹಾರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಪ್ರಾದೇಶಿಕ ಪಕ್ಷಗಳ ಬಲ ಹಾಗೂ ಬೆಂಬಲವೇ ಕಾರಣ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೈತ್ರಿ ಮತ್ತಷ್ಟು ಗಟ್ಟಿಯತ್ತ ನಾಯಕರ ಚಿತ್ತ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಜೆಡಿಎಸ್‌ಗೆ ಅಸ್ತಿತ್ವವೇ ಡೋಲಾಯಮಾನವಾಗಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಸುದೀರ್ಘ ರಾಜಕೀಯ ಅನುಭವ ಬಳಸಿ ಕಳೆದ ಲೋಕಸಭಾ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದ್ದರು. ಅದರಂತೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕಳಪೆ ಸಾಧನೆಯ ಬೇಸರದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗುವ ಅವಕಾಶ ಲಭಿಸಿತು. ರಾಜ್ಯದಲ್ಲಿ ಜೆಡಿಎಸ್ ಕಥೆ ಮುಗಿದೇ ಬಿಟ್ಟಿತು ಎನ್ನುವ ಸ್ಥಿತಿಯಲ್ಲಿ ಎನ್‌ಡಿಎ ಮೈತ್ರಿ ಕೂಟದಿಂದಾಗಿ ಅಸ್ತಿತ್ವ ಉಳಿಸಿಕೊಂಡಿದ್ದ ಜೆಡಿಎಸ್‌ಗೆ ಬಿಹಾರ ಚುನಾವಣೆ ಫಲಿತಾಂಶ ಮತ್ತಷ್ಟು ಹುರುಪು ತಂದಿದೆ. ಎನ್‌ಡಿಎ ಜತೆಗಿನ ಮೈತ್ರಿಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವತ್ತ ಪಕ್ಷದ ನಾಯಕರು ಚಿತ್ತ ಹರಿಸಿದ್ದಾರೆ.
ಜನ ಮೈತ್ರಿ ಬೆಂಬಲಿಸುವ ನಂಬಿಕೆ
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಜನ ಬೆಂಬಲಿಸುವ ಆಸೆ ದೋಸ್ತಿ ಪಕ್ಷಗಳಲ್ಲಿ ಬಿಹಾರ ಚುನಾವಣೆಯ ಫಲಿತಾಂಶದಿಂದಾಗಿ ಚಿಗುರೊಡೆದಿದೆ. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ರಾಜ್ಯದ ಜನ ಮನ್ನಣೆ ನೀಡುವ ನಂಬಿಕೆ ಮೂಡಿದಿದೆ. ಹೀಗಾಗಿ ಉಭಯ ಪಕ್ಷಗಳು ಈಗಿನಿಂದಲೇ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಿಕೊಂಡು ಹಂತ ಹಂತವಾಗಿ ಪಕ್ಷ ಸಂಘಟನೆಗೆ ಒತ್ತು ನೀಡುವತ್ತ ಆಸಕ್ತಿ ತೋರಲು ಮುಂದಾಗಿವೆ.
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಯಾವುದೇ ಬಿರುಕು ಮೂಡದಂತೆ ಎಚ್ಚರಿಕೆ ಹೆಜ್ಜೆ ಇರಿಸಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಜೆಡಿಎಸ್ ಪಕ್ಷವು ಸ್ಥಾಪನೆಯಾಗಿ 25 ವರ್ಷ ಪೂರೈಸಿರುವುದರಿಂದ ದೊಡ್ಡ ಸಮಾವೇಶ ಮಾಡಿ ಶಕ್ತಿ ಪ್ರದರ್ಶನಕ್ಕೆ ನಾಯಕರು ಸಿದ್ಧತೆ ಆರಂಭಿಸಿದ್ದಾರೆ. ಅದರಲ್ಲೂ ಈ ಬಿಹಾರದ ಈ ಫಲಿತಾಂಶ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಕನಸು ತುಂಬಿದೆ ಎಂದು ಹೇಳಲಾಗುತ್ತಿದೆ.
