ಪಟನಾ(ನ.11): ಬಿಹಾರದಲ್ಲಿ ವಿಜಯಲಕ್ಷ್ಮಿ ಕಣ್ಣಾಮುಚ್ಚಾಲೆ ಆಡಿದ್ದರಿಂದ ನಿತೀಶ್‌ ಕುಮಾರ್‌ ಹಾಗೂ ತೇಜಸ್ವಿ ಯಾದವ್‌ ಅವರ ನಿವಾಸದಲ್ಲಿ ಬೆಂಬಲಿಗರ ಮನಸ್ಥಿತಿಯಲ್ಲೂ ಏರಿಳಿತ ಕಂಡುಬಂದಿತ್ತು.

ನಿತೀಶ್‌ ಕುಮಾರ್‌ ಅವರ 1 ಅನ್ನೆ ಮಾರ್ಗ್‌ ನಿವಾಸ ಹಾಗೂ ಸಕ್ರ್ಯುಲರ್‌ ರೋಡ್‌ ನಿವಾಸದ ಮಧ್ಯೆ ಕೇವಲ 200 ಮೀಟರ್‌ ಅಂತರವಿದೆ. ಚುನಾವಣಾಪೂರ್ವ ಸಮೀಕ್ಷೆಗಳು ಆರ್‌ಜೆಡಿ ನೇತೃತ್ವದ ಮಹಾಗಠಬಂಧನ್‌ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದರಿಂದ ಮುಂಜಾನೆಯಿಂದಲೇ ಬೆಂಬಲಿಗರು ಹಾಗೂ ಮಾಧ್ಯಮಗಳು ತೇಜಸ್ವಿ ಯಾದವ್‌ ನಿವಾಸದ ಮುಂದೆ ಜಮಾವಣೆ ಆಗಿದ್ದವು. ಆದರೆ, ಎನ್‌ಡಿಎ ಮೈತ್ರಿಕೂಟ ಮೇಲುಗೈ ಸಾಧಿಸುತ್ತಿದ್ದಂತೆ ಬೆಂಬಲಿಗರು, ಮಾಧ್ಯಮಗಳು ನಿತೀಶ್‌ ಅವರ ನಿವಾಸದ ಮುಂದೆ ಜಮಾವಣೆ ಆಗಲು ಆರಂಭಿಸಿದರು. ಆದರೆ, ನಿತೀಶ್‌ ಕುಮಾರ್‌ ಮಾತ್ರ ತಮ್ಮ ನಿವಾಸದಿಂದ ಹೊರಗೆ ಬಂದಿರಲಿಲ್ಲ. ಎನ್‌ಡಿಎ ಬಹುಮತದತ್ತ ಸಾಗುವ ಸುಳಿವು ಸಿಗುತ್ತಿದ್ದಂತೆ ಪಕ್ಷದ ಮುಖಂಡರು ಒಬ್ಬೊಬ್ಬರಾಗಿ ನಿತೀಶ್‌ ನಿವಾಸಕ್ಕೆ ಆಗಮಿಸಲು ಆರಂಭಿಸಿದರು.

ಅದೇ ರೀತಿ ಎಲ್ಲಾ ಪಕ್ಷಗಳ ಕಚೇರಿಗಳು ಇರುವ ವೀರ್‌ಚಾಂದ್‌ ಪಟೇಲ್‌ ರೋಡ್‌ನಲ್ಲಿಯೂ ಇದೇ ರೀತಿಯ ಬೆಳವಣಿಗೆಗಳು ಕಂಡುಬಂದವು. ಮಂಕಾಗಿದ್ದ ಬಿಜೆಪಿ ಹಾಗೂ ಜೆಡಿಯು ಕಚೇರಿಯಲ್ಲಿ ನಿಧಾನವಾಗಿ ಚಟುವಟಿಕೆಗಳು ಗರಿಗೆದರಿದವು.