Asianet Suvarna News Asianet Suvarna News

ಬಿಹಾರ ಸೋಲಿನ ನಂತರ ಕಾಂಗ್ರೆಸ್ಸಲ್ಲಿ ಬಂಡಾಯ; ರಾಹುಲ್‌ ವಿರುದ್ಧ ಪತ್ರಿಕಾಗೋಷ್ಠಿ?

ಬಿಹಾರದಲ್ಲಿ ಸೋತ ನಂತರ ಕಾಂಗ್ರೆಸ್‌ನಲ್ಲಿ ಬಂಡಾಯದ ಕಾರ್ಮೋಡದ ಲಕ್ಷಣಗಳು ಕಾಣುತ್ತಿವೆ. ಕಪಿಲ್‌ ಸಿಬಲ್‌, ಪಿ.ಚಿದಂಬರಂ ಬಹಿರಂಗವಾಗಿ ರಾಹುಲ್‌ ವಿರುದ್ಧವೇ ಮಾತನಾಡತೊಡಗಿದ್ದಾರೆ. 

Bihar Election 2020 Difference of opinion among congress leaders hls
Author
Bengaluru, First Published Nov 20, 2020, 3:15 PM IST

ಬೆಂಗಳೂರು (ನ. 20): ಬಿಹಾರದಲ್ಲಿ ಸೋತ ನಂತರ ಕಾಂಗ್ರೆಸ್‌ನಲ್ಲಿ ಬಂಡಾಯದ ಕಾರ್ಮೋಡದ ಲಕ್ಷಣಗಳು ಕಾಣುತ್ತಿವೆ. ಕಪಿಲ್‌ ಸಿಬಲ್‌, ಪಿ.ಚಿದಂಬರಂ ಬಹಿರಂಗವಾಗಿ ರಾಹುಲ್‌ ವಿರುದ್ಧವೇ ಮಾತನಾಡತೊಡಗಿದ್ದಾರೆ.

ಒಂದೆರಡು ವಾರದಲ್ಲಿ ದೊಡ್ಡ ನಾಯಕರು ಹೊರಗೆ ಬಂದು ರಾಹುಲ್‌ ವಿರುದ್ಧ ಪತ್ರಿಕಾಗೋಷ್ಠಿ ನಡೆಸಬಹುದು ಎನ್ನುವ ಮಾತುಗಳಿವೆ. ಇನ್ನೊಂದು ಸಮಸ್ಯೆ ಎಂದರೆ ಗಾಂಧಿ ಕುಟುಂಬದ ಆಪತ್ಬಾಂಧವ ಅಹ್ಮದ್‌ ಪಟೇಲ್‌ ಕೋವಿಡ್‌ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ. ಬಂಡಾಯ ಮಾಡುವವರನ್ನು ಸಮಾಧಾನ ಮಾಡುವ ವ್ಯಕ್ತಿಗಳು ಈಗ ಗಾಂಧಿಗಳ ಬಳಿ ಇಲ್ಲ. ಕಾಂಗ್ರೆಸ್ಸೇತರ ಪಕ್ಷಗಳ ವಿಘಟನೆಯಿಂದ ಅನಾಯಾಸವಾಗಿ ಅಧಿಕಾರ ಪ್ರತಿ 5 ವರ್ಷಕ್ಕೊಮ್ಮೆ ಕಾಂಗ್ರೆಸ್‌ ಬಳಿಗೆ ತಟ್ಟೆಯಲ್ಲಿಟ್ಟು ಬರುತ್ತಿತ್ತು. ಆದರೆ ಮೋದಿ ಕಾಲದಲ್ಲಿ ಬರುತ್ತಿಲ್ಲ ಎನ್ನುವುದೇ ಕಾಂಗ್ರೆಸ್‌ನ ಸಂಕಷ್ಟಕ್ಕೆ ಮೂಲ ಕಾರಣ.

ಸಂಪುಟ ವಿಸ್ತರಣೆ ಸರ್ಕಸ್: ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ?

ಅಧಿವೇಶನ ಬೇಕೋ, ಬೇಡವೋ?

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸಬೇಕೋ, ಬೇಡವೋ ಎಂಬ ಚಿಂತೆ ಮೋದಿ ಸರ್ಕಾರಕ್ಕಿದೆ. ಕಳೆದ ಬಾರಿ ಅ​ವೇಶನದಲ್ಲಿ 40ಕ್ಕೂ ಹೆಚ್ಚು ಸಂಸದರು ಸೋಂಕಿಗೆ ಒಳಗಾಗಿದ್ದರು. ಜೊತೆಗೆ ದಿಲ್ಲಿಯಲ್ಲಿ ದಿನಕ್ಕೆ 8 ಸಾವಿರ ಕೇಸ್‌ ಬರುತ್ತಿರುವುದೂ ಹೊಸ ಚಿಂತೆಗೆ ಕಾರಣ. ಈ ಬಾರಿ ಅ​ಧಿವೇಶನ ನಡೆಯುವುದು ಬೇಡ, ಲಸಿಕೆ ಬಂದ ಮೇಲೆ ನಡೆಸಲಿ ಎಂದು ಬಹುತೇಕ ಸಂಸದರು ಖಾಸಗಿಯಾಗಿ ಹೇಳುತ್ತಿದ್ದಾರೆ.

ಮೋದಿ ಸಂಪುಟಕ್ಕೆ ಯಾರು?

ಬಿಹಾರ ಚುನಾವಣೆ ಮುಗಿದ ನಂತರ ಈಗ ಬಿಜೆಪಿ ಸಂಸದರು ಮೋದಿಯವರ ಸಂಪುಟ ವಿಸ್ತರಣೆಗೆ ಕಾಯುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ತರಲು ಕಾರಣೀಭೂತರಾದ ಶ್ರೀಮಂತ ಜ್ಯೋತಿರಾದಿತ್ಯ ಸಿಂ​ಧಿಯಾ, ಬಿಹಾರ ಗೆಲ್ಲಿಸಿಕೊಟ್ಟಭೂಪೇಂದ್ರ ಯಾದವ್‌, ಸುಶೀಲ್‌ ಮೋದಿ ಹೆಸರುಗಳು ಕ್ಯಾಬಿನೆಟ್‌ಗಾಗಿ ಓಡಾಡುತ್ತಿವೆ.

ಚಿರಾಗ್‌ ಪಾಸ್ವಾನ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿತೀಶ್‌ ಕುಮಾರ್‌ ವಿರೋಧವಿದೆ. ಸುರೇಶ್‌ ಅಂಗಡಿ ಜಾಗಕ್ಕೆ ಪಿ.ಸಿ.ಗದ್ದಿಗೌಡರ ಮತ್ತು ಶಿವಕುಮಾರ ಉದಾಸಿ ಹೆಸರುಗಳು ಪರಿಶೀಲನೆಯಲ್ಲಿವೆ. ಸದ್ಯಕ್ಕೆ ಯಾವುದೇ ದೊಡ್ಡ ಮಂತ್ರಿಗಳ ಖಾತೆ ಬದಲಾವಣೆ ಆಗಲಿಕ್ಕಿಲ್ಲ ಅನ್ನುತ್ತಿವೆ ಬಿಜೆಪಿ ಮೂಲಗಳು. ಒಂದು ಸಣ್ಣ ವಿಸ್ತರಣೆ ಅಷ್ಟೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios