ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ನಡುಕ; ಶಿವರಾಜ ತಂಗಡಗಿ
- ನಾಳೆ ಕೊಪ್ಪಳಕ್ಕೆ ಸಿದ್ದರಾಮಯ್ಯ
- ಜೋಡೋ ಯಾತ್ರೆಯಿಂದ ಬಿಜೆಪಿಗೆ ನಡುಕ: ತಂಗಡಗಿ
- ಬಳ್ಳಾರಿ ಕಾರ್ಯಕ್ರಮಕ್ಕೆ ಕೊಪ್ಪಳದಿಂದ ಸಾವಿರಾರು ಜನ
ಕೊಪ್ಪಳ (ಅ.9) : ಭಾರತ ಜೋಡೋ ಯಾತ್ರೆಯ ನಿಮಿತ್ತ ಬಳ್ಳಾರಿಯಲ್ಲಿ ನಡೆಯಲಿರುವ ಬಹಿರಂಗ ಸಭೆಯ ಹಿನ್ನೆಲೆಯಲ್ಲಿ ಅ. 10ರಂದು ಕೊಪ್ಪಳದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ನಗರದ ಶಿವಶಾಂತ ಮಂಗಲ ಭವನದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ, ಕಾರ್ಯಕ್ರಮದ ರೂಪರೇಷೆ ಬಗೆಗೆ ಮಾಹಿತಿ ನೀಡಲಿದ್ದಾರೆ ಎಂದರು.
Bharat Jodo Yatra: ಕೊಪ್ಪಳದಿಂದ 50 ಸಾವಿರ ಜನರು ಭಾಗಿ -ಶಿವರಾಜ ತಂಗಡಗಿ
ಬಳ್ಳಾರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಸುಮಾರು 25 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಬೆಂಬಲಿತರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಪೂರ್ವ ತಯಾರಿಗಾಗಿ ಸಭೆ ನಡೆಯುತ್ತಿದೆ. ಭಾರತ ಜೋಡೋ ಯಾತ್ರೆಗೆ ನಿರೀಕ್ಷೆ ಮೀರಿ ಸ್ಪಂದನೆ ದೊರೆಯುತ್ತಿದೆ. ಇದರಿಂದ ಬಿಜೆಪಿಗೆ ನಡುಕ ಪ್ರಾರಂಭವಾಗಿದ್ದು, ಇನ್ನಿಲ್ಲದ ಆರೋಪ ಮಾಡುತ್ತಿದೆ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಪಪ್ಪು ಪಪ್ಪು ಎಂದು ಬಿಜೆಪಿಯವರು ಗೇಲಿ ಮಾಡುತ್ತಿದ್ದರು. ಆದರೆ, ಈಗ ಅವರೇ ಜನರ ಮನಸ್ಸಿನ ಅಪ್ಪು ಆಗುತ್ತಿದ್ದಾರೆ. ದೇಶದ ಐಕ್ಯತೆಗಾಗಿ ದೇಶದಲ್ಲಿಯೇ ಬಹುದೊಡ್ಡ ಪಾದಯಾತ್ರೆಯನ್ನು ಕೈಗೊಂಡಿರುವುದು ಹಾಗೂ ಅದಕ್ಕೆ ಬೆಂಬಲ ದೊರೆತಿರುವುದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಬಿಜೆಪಿ ಕೇವಲ ಜಾತಿ ಆಧಾರಿತ ಚುನಾವಣೆ ಮಾಡುತ್ತಿದೆಯೇ ಹೊರತು, ಅಭಿವೃದ್ಧಿ ಆಧಾರಿತ ಚುನಾವಣೆ ಮಾಡುತ್ತಿಲ್ಲ. ರಾಜ್ಯದಲ್ಲಿಯಂತೂ ಬಿಜೆಪಿ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ ಎಂದು ಕಿಡಿಕಾರಿದರು.
ಹೇಳಿಕೊಳ್ಳುವುದಕ್ಕೂ ಒಂದೂ ಕೆಲಸ ಮಾಡಿಲ್ಲ ಬಿಜೆಪಿ: ಶಿವರಾಜ ತಂಗಡಗಿ
ಸ್ಥಳೀಯರನ್ನು ಸಚಿವರನ್ನಾಗಿ ಮಾಡದೆ ಬೇರೆ ಜಿಲ್ಲೆಯವರನ್ನು ಸಚಿವರನ್ನಾಗಿ ಮಾಡಿರುವುದರಿಂದ ಅಭಿವೃದ್ಧಿಯೇ ಆಗುತ್ತಿಲ್ಲ. ಸ್ಥಳೀಯರ ಸಮಸ್ಯೆಯನ್ನು ಸಚಿವರು ಆಲಿಸುತ್ತಿಲ್ಲ. ಉಸ್ತುವಾರಿ ಸಚಿವರು ಕೇವಲ ಸೂಟ್‌ಕೇಸ್ ಒಯ್ಯುವುದಕ್ಕೆ ಆಗಿದ್ದಾರೆ. ಬಿಜೆಪಿ ಪಕ್ಷ ಕಾಂಗ್ರೆಸ್ ನಾಯಕರ ಮೇಲೆ ಈಗ ಇನ್ನಿಲ್ಲದ ಆರೋಪ ಮಾಡುತ್ತಿದೆ. ತಮ್ಮದೇ ಸರ್ಕಾರ ಇದ್ದರೂ ತನಿಖೆ ಮಾಡುತ್ತಿಲ್ಲ, ಬದಲಾಗಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಸುಮ್ಮಸುಮ್ಮನೇ ಆರೋಪ ಮಾಡುವುದು ಸರಿಯಲ್ಲ. ತಾಕತ್ತು ಇದ್ದರೇ ತನಿಖೆ ಮಾಡಲಿ ಎಂದು ಸವಾಲು ಹಾಕಿದರು. ಶಾಸಕ ರಾಘವೇಂದ್ರ ಹಿಟ್ನಾಳ, ತೋಟಪ್ಪ ಕಾಮನೂರು, ಕೃಷ್ಣಾ ಇಟ್ಟಂಗಿ ಹಾಗೂ ಕುರಗೋಡ ರವಿಯಾದವ್ ಇದ್ದರು.