Kannada Sahitya Parishat election: ಜೋಶಿ ವಿರುದ್ಧ ಕೆಲಸ ಮಾಡಿದ ಮುಖಂಡ ಬಿಜೆಪಿಯಿಂದ ಅಮಾನತು
* ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆ
*ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಮುಖಂಡ ಬಿಜೆಪಿಯಿಂದ ಅಮಾನತು
* ಮಹೇಶ್ ಜೋಶಿ ವಿರುದ್ಧ ಕೆಲಸ ಮಾಡಿದ ಆರೋಪ
ಬೆಂಗಳೂರು, (ನ.23): ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ (Kannada Sahitya Parishat election) ಮಹೇಶ್ ಜೋಶಿ (Mahesh Joshi) ವಿರುದ್ಧ ಕೆಲಸ ಮಾಡಿದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಎಂ.ಮಹೇಂದ್ರ ಗೌಡ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಎಂ.ಮಹೇಂದ್ರ ಗೌಡ(Mahendra Gowda) ಅವರನ್ನು ಬೆಂಗಳೂರು ದಕ್ಷಿಣ (Bengaluru South) ಜಿಲ್ಲಾ ಬಿಜೆಪಿ (BJP) ಘಟಕದ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಆದೇಶ ಹೊರಡಿಸಿದ್ದಾರೆ.
Karnataka Politics: ಮಗನಿಗೆ ಕಾಂಗ್ರೆಸ್ ಟಿಕೆಟ್, ಅಪ್ಪನಿಗೆ ಪಕ್ಷದ ಜವಾಬ್ದಾರಿಯಿಂದ ಬಿಜೆಪಿ ಕೊಕ್
ನಿರಂತರವಾಗಿ ಒಂದಿಲ್ಲೊಂದು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಎಲ್ಲವನ್ನೂ ಕಡೆಗಣಿಸಿದ್ದೀರಿ. ಪ್ರಸ್ತುತ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಅಧಿಕೃತವಾಗಿ ಬೆಂಬಲ ನೀಡಿರುವ ಮಹೇಶ್ ಜೋಶಿ ಅವರ ವಿರುದ್ಧ ಕೆಲಸ ಮಾಡಿದ್ದೀರಿ. ಬೇರೊಬ್ಬ ಅಭ್ಯರ್ಥಿಯ ಪರವಾಗಿ ಬೆಂಬಲ ಘೋಷಿಸಿ ಹಲವು ವಾಟ್ಸ್ಯಾಪ್ ಗ್ರೂಪ್ಗಳಿಗೆ ಸಂದೇಶಗಳನ್ನು ಹಾಕಿದ್ದೀರಿ ಎಂದು ರಮೇಶ್ ಆದೇಶದ ಪತ್ರದಲ್ಲಿ ತಿಳಿಸಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದುಹಾಕಲಾಗಿದೆ. ಇನ್ನು ಮುಂದೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅಧಿಕೃತವಾಗಿ ಭಾಗವಹಿಸುವ ಅವಕಾಶ ಇರುವುದಿಲ್ಲ ಎಂದು ಮಹೇಂದ್ರಗೌಡ ಅವರಿಗೆ ನೀಡಿರುವ ಪತ್ರದಲ್ಲಿ ಎಚ್ಚರಿಸಲಾಗಿದೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆ ಭಾನುವಾರ ನಡೆಯಿತು. ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಮತ ಎಣಿಕೆಯ ವಿವರ ಲಭ್ಯವಾಗಿದ್ದು, ಈ ಪ್ರಕಾರ ಡಾ. ಮಹೇಶ್ ಜೋಶಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಡಾ.ಮಹೇಶ್ ಜೋಶಿ, ಶೇಖರಗೌಡ ಮಾಲೀಪಾಟೀಲ ಸಹಿತ ಒಟ್ಟು 21 ಮಂದಿ ಆಕಾಂಕ್ಷಿಗಳು ಇದ್ದರು. ಇದರಲ್ಲಿ ಇತರೆ ಸ್ಪರ್ಧಿಗಳಾಗಿರುವ ವ.ಚ. ಚನ್ನೇಗೌಡ ಅವರು 16,755, ಸಿ.ಕೆ. ರಾಮೇಗೌಡ 14,110, ಮಾಯಣ್ಣ 8791 ಮತ ಪಡೆದಿದ್ದಾರೆ. ಉಳಿದವರೆಲ್ಲರೂ ಇದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಟ್ಟಾರೆ. 3.05 ಲಕ್ಷ ಮತದಾರರು ಇದ್ದಾರೆ. ಇದರಲ್ಲಿ 1.59 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೇ 52ರಷ್ಟು ಮತದಾನ ನಡೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಅಲ್ಲದೆ, ರಾಜ್ಯದಾದ್ಯಂತ 420 ಮತಗಟ್ಟೆ ಕೇಂದ್ರಗಳು ಇದ್ದವು. ಭಾನುವಾರ (ನ.21)ದಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಕೊಡಗಿನಲ್ಲಿ ಗರಿಷ್ಠ ಶೇ.71.18ರಷ್ಟು ಮತದಾನ ನಡೆದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.28.88 ರಷ್ಟು ಮಾತ್ರ ಹಕ್ಕು ಚಲಾವಣೆಯಾಗಿದ್ದು, ಅತಿ ಕಡಿಮೆ ಮತದಾನ ನಡೆದ ಜಿಲ್ಲೆ ಎನಿಸಿಕೊಂಡಿದೆ.