Asianet Suvarna News Asianet Suvarna News

ಬೆಳಗಾವಿ ಜಿಲ್ಲೆಯಲ್ಲಿ ಹಿಂದಿದ್ದರೂ ಅಭ್ಯರ್ಥಿ ಘೋಷಣೆಯಲ್ಲಿ ಜೆಡಿಎಸ್‌ ಮೊದಲು..!

ಜಾತ್ಯತೀತ ಜನತಾ ದಳ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಳಗಾವಿ ಜಿಲ್ಲೆಯ ಒಟ್ಟು 18 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಕ್ಕೆ ಮಾತ್ರ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

Belagavi district JDS Candidates List Announcement grg
Author
First Published Dec 21, 2022, 7:01 PM IST

ಶ್ರೀಶೈಲ ಮಠದ

ಬೆಳಗಾವಿ(ಡಿ.21):  ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚುನಾವಣೆಗೆ ಸ್ಪರ್ಧಿಸಲಿರುವ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಪ್ರಭಾವಿ ನಾಯಕರ ಮೂಲಕ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ತಂತ್ರ, ಟಿಕೆಟ್‌ ಪಡೆಯಲು ತೀವ್ರ ಪೈಪೋಟಿಯೂ ಜೋರಾಗಿದೆ. ಈ ಮಧ್ಯೆ ಜಾತ್ಯತೀತ ಜನತಾ ದಳ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಳಗಾವಿ ಜಿಲ್ಲೆಯ ಒಟ್ಟು 18 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಕ್ಕೆ ಮಾತ್ರ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

18 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿವೆ. ಹುಕ್ಕೇರಿ ಕ್ಷೇತ್ರದ ಶಾಸಕರಾಗಿದ್ದ ದಿ. ಉಮೇಶ ಕತ್ತಿ ಮತ್ತು ಸವದತ್ತಿ ಕ್ಷೇತ್ರದ ಶಾಸಕರಾಗಿದ್ದ ದಿ. ಆನಂದ ಮಾಮನಿ ಅವರ ಅಕಾಲಿಕ ನಿಧನದಿಂದ ಈ ಎರಡೂ ಕ್ಷೇತ್ರ ಈಗ ತೆರವುಗೊಂಡಿವೆ. ಐದು ಕ್ಷೇತ್ರಗಳು ಕಾಂಗ್ರೆಸ್‌ ವಶದಲ್ಲಿವೆ. ಇಲ್ಲಿ ಏನಿದ್ದರೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌- ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಡುತ್ತ ಬಂದಿದೆ. ಆದರೆ, ಜಿಡಿಎಸ್‌ಗೆ ಜಿಲ್ಲೆಯಲ್ಲಿ ನೆಲೆ ಇಲ್ಲವಾಗಿದೆ. ಜೆಡಿಎಸ್‌ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

Karnataka Assembly Elections 2023: ಹಾಲಿ ಶಾಸಕರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ನಿರ್ಧಾರ

ತನ್ನ ಭದ್ರ ನೆಲೆ ಇಲ್ಲದಿದ್ದರೂ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಅದರಂತೆ ಬೈಲಹೊಂಗಲ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮತ್ತು ಖಾನಾಪುರ ವಿಧಾನಸಭೆ ಕ್ಷೇತ್ರದಿಂದ ನಾಸೀರ್‌ ಭಾಗವಾನ್‌ ಅವರನ್ನು ಕಣಕ್ಕಿಳಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. 18 ಕ್ಷೇತ್ರಗಳ ಪೈಕಿ ಜೆಡಿಎಸ್‌ ಮೊದಲ ಹಂತದ ಪಟ್ಟಿಯಲ್ಲಿ ಎರಡು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಇನ್ನು 16 ಕ್ಷೇತ್ರಗಳ ವಿಚಾರದಲ್ಲಿ ಜೆಡಿಎಸ್‌ ಕಾಯ್ದುನೋಡುವ ತಂತ್ರ ಅನುಸರಿಸುತ್ತಿದೆ.

ಚುನಾವಣಾ ಕೊನೆ ಗಳಿಕೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಟಿಕೆಟ್‌ ವಂಚತರಾದವರನ್ನು ತನ್ನತ್ತ ಸೆಳೆದುಕೊಳ್ಳಲು ಜೆಡಿಎಸ್‌ ಕಾಯ್ದುನೋಡುವ ತಂತ್ರಕ್ಕೆ ಮೊರೆಹೋಗಿದೆ. ಬೇರೆ ಪಕ್ಷಗಳ ಬಂಡುಕೋರ ಅಭ್ಯರ್ಥಿಗಳಿಗೆ ಗಾಳ ಹಾಕಲು ತಂತ್ರ ಹೆಣೆದಿದೆ. ಹಾಗೆ ನೋಡಿದರೆ ಜೆಡಿಎಸ್‌ಗೆ ಜಿಲ್ಲೆಯಲ್ಲಿ ಭದ್ರ ನೆಲೆಯೇ ಇಲ್ಲ.

ಈ ಮೊದಲು ಪ್ರಭಾವಿ ನಾಯಕರಾದ ಸತೀಶ ಜಾರಕಿಹೊಳಿ, ಬಾಲಚಂದ್ರಜಾರಕಿಹೊಳಿ,ಉಮೇಶ ಕತ್ತಿ ಅವರು ಜೆಡಿಎಸ್‌ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದರಿಂದಾಗಿ ಸಹಜವಾಗಿಯೇ ಜೆಡಿಎಸ್‌ಗೆ ಬಲ ಸಿಕ್ಕಿತ್ತು. ಆದರೆ,ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉಮೇಶ ಕತ್ತಿ,ಬಾಲಚಂದ್ರ ಜಾರಕಿಹೊಳಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿದರೆ, ಸತೀಶ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಜೆಡಿಎಸ್‌ನಲ್ಲಿದ್ದ ಗೋಕಾಕದ ಅಶೋಕ ಪೂಜಾರಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಹೀಗೆ ಸಾಲು ಸಾಲಾಗಿ ಪ್ರಭಾವಿ ನಾಯಕರೇ ಪಕ್ಷವನ್ನು ತೊರೆದಿದ್ದರಿಂದ ಜೆಡಿಎಸ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ನಂತರದ ದಿನಗಳಲ್ಲಿ ಜೆಡಿಎಸ್‌ ಜಿಲ್ಲಾ ರಾಜಕೀಯದಲ್ಲಿ ನೇಪಥ್ಯಕ್ಕೆ ಸರಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಮತದಾರ ಪ್ರಭುಗಳು ತೆನೆಹೊತ್ತ ಮಹಿಳೆ ಕೈ ಹಿಡಿಯುತ್ತಾರೋ? ಇಲ್ಲವೋ ಎಂಬುದನ್ನು ಕಾಯ್ದುನೋಡಬೇಕು.

Follow Us:
Download App:
  • android
  • ios