ಸಚಿವ ಈಶ್ವರ ಖಂಡ್ರೆಯವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿಕೆ ನೀಡುತ್ತಿರುವುದು ಸತ್ಯಾಂಶವಾದರೂ ಕೂಡಾ ಇಲ್ಲಿನ ಜನತೆ ಗೊಂದಲಕ್ಕೀಡಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿರೇಕೆರೂರು (ಅ.11): ಪ್ರತಿದಿನ ಸಚಿವರಾದ ಎಂ.ಬಿ. ಪಾಟೀಲರು ಲಿಂಗಾಯತ ಪ್ರತ್ಯೇಕ ಧರ್ಮ ಹಾಗೂ ಸಚಿವ ಈಶ್ವರ ಖಂಡ್ರೆಯವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿಕೆ ನೀಡುತ್ತಿರುವುದು ಸತ್ಯಾಂಶವಾದರೂ ಕೂಡಾ ಇಲ್ಲಿನ ಜನತೆ ಗೊಂದಲಕ್ಕೀಡಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿರುವ ಅವರು, ಇಬ್ಬರ ಧ್ಯೇಯಗಳು ಒಂದೇ ಆದರೂ ಇಲ್ಲಿ ಮಠಾಧಿಪತಿಗಳ ಕೈವಾಡ ಹೆಚ್ಚಿದೆ.
ಕೆಲ ಮಠಾಧಿಪತಿಗಳು ತಮ್ಮ ಸ್ವಾರ್ಥಕ್ಕಾಗಿ ವೀರಶೈವರು, ಲಿಂಗಾಯತರು ಎಂದು ಬೇರ್ಪಡಿಸುತ್ತಿದ್ದಾರೆ. ಆದರೆ ಒಂದಂತು ಸತ್ಯ, ತುಮಕೂರು ಮತ್ತು ಮೈಸೂರಿಗೆ ಹೋದರೆ ಅಲ್ಲಿ ಪ್ರತಿಯೊಬ್ಬರು ನಾನು ವೀರಶೈವ ಎಂದು ಹೇಳುತ್ತಾರೆ. ಆದರೆ ಅವರು ಕೂಡಾ ಬಸವಣ್ಣನವರನ್ನು ವಿರೋಧಿಸಿಲ್ಲ. ಎಲ್ಲರೂ ಬಸವ ತತ್ವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೀರಶೈವರು ಮತ್ತು ಲಿಂಗಾಯತರು ಬೇರೆಯಲ್ಲ ಎನ್ನುವ ತತ್ವವನ್ನು ಪಾಲಿಸುವುದು ಎಲ್ಲರಿಗೂ ಒಳ್ಳೆಯದು. ತಮ್ಮ ಸ್ವಾರ್ಥ ಮತ್ತು ಪ್ರತಿಷ್ಠೆಗೆ ಹೋದರೆ ಇಡೀ ಲಿಂಗಾಯತ ವೀರಶೈವ ಸಮಾಜವನ್ನು ಬಲಿಕೊಟ್ಟಂತಾಗುತ್ತದೆ.
ಈಗ ನಡೆಯುತ್ತಿರುವುದು ಅದೇ ಆಗಿದೆ. ಇದರಲ್ಲಿ ರಾಜಕೀಯ ಬೇಡ. ಎಲ್ಲರೂ ಒಂದಾಗಿ ಹೋಗುವುದು ಸೂಕ್ತ. ನಿಮ್ಮಿಬ್ಬರ ಅಭಿಪ್ರಾಯ ಒಂದೇ ಆದರೂ, ಎಲ್ಲೋ ಒಂದು ಕಡೆ ಇದರಲ್ಲಿ ಸ್ವಾರ್ಥ ತುಂಬಿದೆ ಎಂಬುದು ಎದ್ದು ಕಾಣುತ್ತದೆ. ನಿಮಗೆ ನಿಜವಾಗಿ ವೀರಶೈವ ಲಿಂಗಾಯತರ ಬಗ್ಗೆ ಕಾಳಜಿ ಇದ್ದರೆ ಹೋಗಿ ಎಲ್ಲ ಮಠಾಧೀಶರನ್ನು ಸೇರಿಸಿ, ಈ ಸಮಸ್ಯೆಯನ್ನು ಬಗೆಹರಿಸಿ ಇತ್ಯರ್ಥಗೊಳಿಸಿ ಅಂದಾಗ ಮಾತ್ರ ಈ ಸಮಾಜಕ್ಕೆ ನ್ಯಾಯ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಜಿಎಸ್‌ಟಿ ಪರಿಹಾರದ ವಿಚಾರದಲ್ಲಿ ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಮನಸ್ಸಿನಲ್ಲಿ ಮಂಡಿಗೆ ತಿಂದರೆ ಲೆಕ್ಕ ಕೊಡುವವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ಸಾವಿರ ಕೋಟಿ ಅಂತ ಹೇಳುತ್ತಾರೆ. ಯಾವ ಲೆಕ್ಕ ಇದೆ. ಹಲವಾರು ಬಾರಿ ಹೇಳಿದ್ದೇವೆ. 15ನೇ ಹಣಕಾಸಿನಲ್ಲಿ 2014ರಿಂದ ₹ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತ ರಾಜ್ಯಕ್ಕೆ ಬರುತ್ತಿದೆ. ಪ್ರತಿ ವರ್ಷಾಂತ್ಯದಲ್ಲಿ ₹ 3000 ಕೋಟಿ ಬರುತ್ತಿದೆ.
ಕೇಂದ್ರದಿಂದ ಬಂದಿದ್ದನ್ನು ಸಿದ್ದರಾಮಯ್ಯ ಹೇಳುವುದಿಲ್ಲ ಎಂದು ಆರೋಪಿಸಿದರು. ಬೆಳಗಾವಿಯಲ್ಲಿ ಕಲ್ಲು ತೂರಾಟ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಅರಾಜಕತೆ, ಹಿಂಸೆ ಮಾಡಬೇಕು ಅನ್ನುವುದು ಒಂದು ವರ್ಗದ ಹುನ್ನಾರ. ಅದಕ್ಕೆ ಕೆಲವು ಶಕ್ತಿಗಳು ಬೆಂಬಲ ನೀಡುತ್ತಿದ್ದಾರೆ. ಉತ್ತರಪ್ರದೇಶದ ರಾಜ್ಯದಲ್ಲಿ ಮೊದಲು ಇತ್ತು. ದಾವಣಗೆರೆ ಘಟನೆ ನಡೆದ ನಂತರ ಕರ್ನಾಟಕದಲ್ಲಿ ನಿಯಂತ್ರಣ ಮಾಡಬೇಕು ಅನ್ನುವ ಆಗ್ರಹ ಮಾಡಿದ್ದೇವು, ನಿಯಂತ್ರಣ ಮಾಡುತ್ತೇವೆ ಅಂದಿದ್ದರು. ಹೆಚ್ಚಿನ ಜಾಗೃತಿ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಮಂಡ್ಯ, ಮದ್ದೂರು ಘಟನೆ ನೋಡಿದಾಗ ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥಿತ ಕುಸಿದಿದೆ.