BBMP ಆಯುಕ್ತ, ಪ್ರಧಾನ ಎಂಜಿನಿಯರ್ ಹಿಂಸೆ ಕೊಡುತ್ತಿದ್ದಾರೆ: ಸಿದ್ದುಗೆ ಗುತ್ತಿಗೆದಾರರ ದೂರು
ರಾಜ್ಯ ಸರ್ಕಾರ ಹಾಗೂ ಗುತ್ತಿಗೆದಾರರ ಸಂಘದ ನಡುವಿನ ಬಾಕಿ ಬಿಲ್ ಪಾವತಿ ತಿಕ್ಕಾಟ ಮುಂದುವರೆದಿದ್ದು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ನೇತೃತ್ವದ ನಿಯೋಗವು ಶೇ.50 ರಷ್ಟು ಕಾಮಗಾರಿ ಬಾಕಿ ಹಣ ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ.

ಬೆಂಗಳೂರು (ಅ.15): ರಾಜ್ಯ ಸರ್ಕಾರ ಹಾಗೂ ಗುತ್ತಿಗೆದಾರರ ಸಂಘದ ನಡುವಿನ ಬಾಕಿ ಬಿಲ್ ಪಾವತಿ ತಿಕ್ಕಾಟ ಮುಂದುವರೆದಿದ್ದು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದ ನಿಯೋಗವು ಶೇ.50 ರಷ್ಟು ಕಾಮಗಾರಿ ಬಾಕಿ ಹಣ ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಜತೆಗೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಆಯುಕ್ತರು ಹಾಗೂ ಪ್ರಧಾನ ಎಂಜಿನಿಯರ್ ಅವರು ಗುತ್ತಿಗೆದಾರರಿಗೆ ಭಾರಿ ಹಿಂಸೆ ಕೊಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ಗುತ್ತಿಗೆದಾರರ ನೆರವಿಗೆ ಧಾವಿಸಬೇಕು ಎಂದೂ ಗುತ್ತಿಗೆದಾರರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕೆಂಪಣ್ಣ ನಿಯೋಗವು ಹಲವು ಬೇಡಿಕೆಗಳನ್ನು ಸಲ್ಲಿಸಿತು. ಇದಕ್ಕೆ ದೀಪಾವಳಿ ಹಬ್ಬದ ಒಳಗಾಗಿ ಸ್ವಲ್ಪ ಪ್ರಮಾಣದ ಬಾಕಿ ಬಿಲ್ ಪಾವತಿ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಆದರೆ, ಯಾವಾಗ ಪಾವತಿ ಮಾಡುತ್ತಾರೆ ಎಂಬುದರ ಬಗ್ಗೆ ಖಚಿತತೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಸಣ್ಣ ನೀರಾವರಿ ಇಲಾಖೆಯಲ್ಲಿ 17 ಕೋಟಿ ಭ್ರಷ್ಟಾಚಾರ: ಜನಾರ್ದನ ರೆಡ್ಡಿ ಹೇಳಿದ್ದೇನು?
ಅಧಿಕಾರಿಗಳಿಂದ ಹಿಂಸೆ: ಮುಖ್ಯಮಂತ್ರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, ಕೆಲ ಅಧಿಕಾರಿಗಳು ಸಮಸ್ಯೆ ಕೊಡುತ್ತಿದ್ದಾರೆ. ಬಿಬಿಎಂಪಿ ಕಮಿಷನರ್ ಹಾಗೂ ಇಂಜಿನಿಯರ್ ಚೀಫ್ ಹಿಂಸೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿದ್ದೇವೆ. ಈ ವೇಳೆ ಆದಷ್ಟು ಬೇಗ ಬಿಬಿಎಂಪಿ ಕಮಿಷನರ್ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು. ಪ್ರಸ್ತುತ 20 ಸಾವಿರ ಕೋಟಿ ರು. ಬಿಲ್‌ಗಳ ಬಾಕಿ ಹಣ ಪಾವತಿಯಾಗಬೇಕಿದೆ. ಇದರಲ್ಲಿ ಕನಿಷ್ಠ ಶೇ.50ರಷ್ಟು ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದೆವು.
ಇದಕ್ಕೆ ಮುಖ್ಯಮಂತ್ರಿಗಳು, ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ. ಆದರೂ, ಆದಷ್ಟು ಶೀಘ್ರದಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೇ, ಒಂದು ತಿಂಗಳಿನಲ್ಲಿ ಎಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಬಾಕಿ ಬಿಲ್ ಈ ವರ್ಷದಲ್ಲಿ ಪಾವತಿ ಮಾಡುತ್ತೇವೆ. ಹಂತ-ಹಂತವಾಗಿ ಬಾಕಿ ಬಿಲ್ ಪಾವತಿ ಮಾಡುತ್ತಿದ್ದೇವೆ. ಈಗಾಗಲೇ ಸ್ಬಲ್ಪ ಹಣವನ್ನು ಪಾವತಿ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಬಾಕಿ ಬಿಲ್ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಿಡುಗಡೆಗೆ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ರಾಜಕೀಯ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ಐಟಿ ದಾಳಿ ವೇಳೆ ಸಿಕ್ಕ ಹಣ ಗುತ್ತಿಗೆದಾರರ ಕಮಿಷನ್ ಹಣ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಕುಮಾರಸ್ವಾಮಿ ಅವರು ರಾಜಕೀಯವಾಗಿ ಬಹಳ ಮಾತನಾಡುತ್ತಾರೆ. ಅವರ ರಾಜಕೀಯವನ್ನು ನಾವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಐಟಿ ದಾಳಿ ಆದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರಿಗೆ ಬೇರೆ ವಹಿವಾಟು ಇದೆ. ಕ್ವಾರಿ ಉದ್ಯಮ ಇದೆ. ಕಾನೂನು ಅದರದ್ದೇ ಆದ ಕ್ರಮ ಕೈಗೊಳ್ಳುತ್ತದೆ. ಇದಕ್ಕೂ ಗುತ್ತಿಗೆದಾರರ ಸಂಘಕ್ಕೂ ಸಂಬಂಧವಿಲ್ಲ ಎಂದರು. ಈ ವೇಳೆ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಮತ್ತಿತರರು ಹಾಜರಿದ್ದರು.
ತಪ್ಪು ಸಾಬೀತಾದರೆ ಸಂಘದಿಂದ ಅಂಬಿಕಾಪತಿ ವಜಾ: ಗುತ್ತಿಗೆದಾರರು ನೀಡಿದ ಕಮಿಷನ್ ಹಣದ ಮೇಲೆ ಐಟಿ ರೇಡ್ ಮಾಡಿದೆ ಎಂದು ಬಿಜೆಪಿ, ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಂಪಣ್ಣ, ಅದಕ್ಕೂ ಹಾಗೂ ನಮಗೂ ಸಂಬಂಧ ಇಲ್ಲ. ಆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ನಾವು ಕೇವಲ ಬಾಕಿ ಬಿಲ್ ಬಗ್ಗೆ ಚರ್ಚೆ ಮಾಡಿದ್ದೇವೆ. ಅಂಬಿಕಾಪತಿ ಅವರ ತಪ್ಪು ಸಾಬೀತಾದರೆ ಸಂಘದಿಂದ ವಜಾಗೊಳಿಸುತ್ತೇವೆ ಎಂದು ಕೆಂಪಣ್ಣ ತಿಳಿಸಿದರು.
ಎಎಪಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಉದಯವಾಗಲಿದೆ: ಮುಖ್ಯಮಂತ್ರಿ ಚಂದ್ರು
ಗುತ್ತಿಗೆದಾರರ ಸಂಘದ ಬೇಡಿಕೆಯೇನು?: ರಾಜ್ಯಾದ್ಯಂತ ಎಲ್ಲ ಇಲಾಖೆಗಳಿಂದ ಸುಮಾರು 20,000 ಕೋಟಿ ರು. ಮೊತ್ತದ ಗುತ್ತಿಗೆದಾರರ ಬಿಲ್ ಪಾವತಿ ಬಾಕಿ ಇದೆ. ಇದರಲ್ಲಿ ಶೇ.50ರಷ್ಟಾದರೂ ಪಾವತಿ ಮಾಡಬೇಕು. ಗುತ್ತಿಗೆದಾರರ ಸಮಸ್ಯೆ ಬಿಗಡಾಯಿಸಿದೆ. ಭಾರೀ ಸಂಕಷ್ಟದಲ್ಲಿದ್ದಾರೆ. ಸಾಲ ತೀರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆದಷ್ಟು ಬೇಗ ಬಾಕಿ ಬಿಲ್ ಪಾವತಿ ಮಾಡಿ. ಕೆಲ ಕಾಮಗಾರಿಗಳಲ್ಲಿನ ಅಕ್ರಮ ತನಿಖೆ ಹೆಸರಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರ ಬಿಲ್‌ಗೆ ತಡೆ ನೀಡಬಾರದು ಎಂಬುದು ಗುತ್ತಿಗೆದಾರರ ಸಂಘದ ಬೇಡಿಕೆ.