ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಯತ್ನಾಳ್, ಬೊಮ್ಮಾಯಿ ಮಧ್ಯೆ ಘರ್ಷಣೆ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ವಿಷಯ ಬೆಳಗಾವಿಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಯತ್ನಾಳ್ ಹಾಗೂ ಬೊಮ್ಮಾಯಿ ನಡುವಿನ ಮಾತಿನ ಏಟು, ಎದಿರೇಟಿಗೆ ಕಾರಣವಾಯಿತು.
ಬೆಳಗಾವಿ (ಜೂ.26): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ವಿಷಯ ಬೆಳಗಾವಿಯಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಯತ್ನಾಳ್ ಹಾಗೂ ಬೊಮ್ಮಾಯಿ ನಡುವಿನ ಮಾತಿನ ಏಟು, ಎದಿರೇಟಿಗೆ ಕಾರಣವಾಯಿತು. ಸಮಾವೇಶದಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಭೇಟಿ ಉಲ್ಲೇಖಿಸಿ, ಬೊಮ್ಮಾಯಿಯವರೇ, ಕಾಂಗ್ರೆಸ್ ನಾಯಕರನ್ನು ಮನೆಗೆ ಕರೆಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಇದಕ್ಕೆ ವೇದಿಕೆಯಲ್ಲಿಯೇ ತಿರುಗೇಟು ನೀಡಿದ ಮಾಜಿ ಸಿಎಂ ಬೊಮ್ಮಾಯಿ, ‘ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾರ ಜೊತೆಗೂ ರಾಜಿ ಮಾಡಿಕೊಂಡು ರಾಜಕಾರಣ ಮಾಡಿಲ್ಲ. ಮನೆಗೆ ಬಂದವರನ್ನು ಸ್ವಾಗತ ಮಾಡುವುದು ನಮ್ಮ ಪರಂಪರೆ’ ಎಂದರು. ನಗರದ ಗಾಂಧಿ ಭವನದಲ್ಲಿ ಭಾನುವಾರ ಬೆಳಗಾವಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ‘ಡಿಕೆಶಿಯವರು ಯಡಿಯೂರಪ್ಪ, ಬೊಮ್ಮಾಯಿಯವರ ಮನೆಗೆ ಹೋಗಿ ಸೌಜನ್ಯದ ಭೇಟಿ ಎನ್ನುತ್ತಾರೆ. ಆದರೆ, ವಾಸ್ತವವಾಗಿ ಇದು ಸೌಹಾರ್ದದ ಭೇಟಿ ಅಲ್ಲ.
ಕೈಗಾರಿಕೋದ್ಯಮಿಗಳ ಪ್ರತಿಭಟನೆ, ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ: ಮಾಜಿ ಸಿಎಂ ಬೊಮ್ಮಾಯಿ
ಡಿಕೆಶಿಯವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಈ ಭೇಟಿಯನ್ನು ಬಳಸಿಕೊಳ್ಳಲಿದ್ದಾರೆ. ಒಂದು ವೇಳೆ ನನ್ನನ್ನು ಸಿಎಂ ಮಾಡದಿದ್ದರೆ ನನ್ನ ಜೊತೆ ಬೊಮ್ಮಾಯಿ (ಬಿಜೆಪಿಯವರು) ಇದ್ದಾರೆ. ನಾನು ನನ್ನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಸೋನಿಯಾ ಗಾಂಧಿ ಅವರಿಗೆ ಡಿಕೆಶಿ ಬೆದರಿಕೆ ಒಡ್ಡಲಿದ್ದಾರೆ. ಹೀಗಾಗಿ, ನಾವು ಇಂಥ ವಿದ್ಯಮಾನಗಳಿಗೆ ಅವಕಾಶ ನೀಡಬಾರದು. ಇದು ಕಾರ್ಯಕರ್ತರಲ್ಲಿ ಅನಗತ್ಯ ಗೊಂದಲ ಮೂಡಿಸುತ್ತದೆ ಎಂದು ಬೊಮ್ಮಾಯಿ ಅವರಿಗೆ ಕಿವಿಮಾತು ಹೇಳಿದ್ದೇನೆ. ಬೊಮ್ಮಾಯಿಯವರೇ, ಅವರನ್ನು ನೀವು ಮನೆವರೆಗೂ ಬಿಟ್ಟುಕೊಳ್ಳಬೇಡಿ’ ಎಂದರು.
ಧಮ್ ಇದ್ರೆ 15 ಕೆ.ಜಿ. ಅಕ್ಕಿ ಕೊಡಿ: ಸಿದ್ದುಗೆ ಸವಾಲ್ ಹಾಕಿದ ಮಾಜಿ ಸಿಎಂ ಬೊಮ್ಮಾಯಿ
ಬಳಿಕ ಮಾತನಾಡಿದ ಬೊಮ್ಮಾಯಿ, ‘ಕಳೆದ 30 ವರ್ಷಗಳಿಂದ ನಾನು ರಾಜಕಾರಣದಲ್ಲಿ ಇದ್ದೇನೆ. ನಾನು ಯಾರ ಜೊತೆಗೂ ರಾಜಿ ಮಾಡಿಕೊಂಡು ರಾಜಕಾರಣ ಮಾಡಿಲ್ಲ. ಮನೆಗೆ ಬಂದವರನ್ನು ಸ್ವಾಗತ ಮಾಡುವುದು ನಮ್ಮ ಸಂಪ್ರದಾಯ. ನಾನು ಯಾರನ್ನೂ ಮನೆಯ ರೂಮಿನೊಳಗೆ ಕರೆದುಕೊಂಡು ಹೋಗಿ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರ ಜೊತೆಗಿನ ಎಲ್ಲಾ ಮಾತುಕತೆಗಳು ಬಹಿರಂಗವಾಗಿಯೇ ನಡೆಯುತ್ತವೆ. ಬಿಜೆಪಿಯೇ ನನ್ನ ತಂದೆ-ತಾಯಿ, ಬಿಜೆಪಿ ಕಾರ್ಯಕರ್ತರು ನನ್ನ ಸಹೋದರ-ಸಹೋದರಿಯರು. ಚುನಾವಣೆಯ ಸೋಲನ್ನು ಮರೆತು ಎಲ್ಲಾ ನಾಯಕರು ಒಂದಾಗೋಣ. ಮೋದಿಯವರನ್ನು ಇನ್ನೊಂದು ಅವಧಿಗೆ ಪ್ರಧಾನಿ ಮಾಡೋಣ’ ಎಂದರು.