ಬೆಂಗಳೂರು (ಜ.21):  ಸಿ.ಡಿ. ವಿಚಾರವನ್ನು ನಾನು ಮೊದಲು ಪ್ರಸ್ತಾಪಿಸಿಲ್ಲ. ಯಾರು ಅದನ್ನು ಹೊರತಂದರೋ ಅವರೇ ಕ್ಲೋಸ್‌ ಮಾಡುತ್ತಾರೆ. ನಾನು ಸಿ.ಡಿ. ಓಪನ್‌ ಮಾಡಿದವನೂ ಅಲ್ಲ, ಕ್ಲೋಸ್‌ ಮಾಡುವವನೂ ಅಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನನಗೆ ಯಾರಾರ‍ಯರು ಯಾವ್ಯಾವ ಸಭೆ ನಡೆಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಎಲ್ಲಿ ಯಾವಾಗ ಏನು ಮಾತಾಡಬೇಕೋ ಅದನ್ನು ಮಾತಾಡುತ್ತೇನೆ. ಯಾರೂ ಯಾರಿಗೆ ಸಮಾಧಾನ ಮಾಡಿದ್ದಾರೋ ತಿಳಿದಿಲ್ಲ. ಆದರೆ ಎಲ್ಲರನ್ನೂ ಸಮಾಧಾನ ಮಾಡುವ ಶಕ್ತಿಯೊಂದಿದೆ (ಬಿಜೆಪಿ). ಆ ಶಕ್ತಿ ಕೆಲಸ ಮಾಡುತ್ತದೆ. ವಿಚಾರ, ವಿವಾದ ಏನೂ ಕೂಡ ತಣ್ಣಗಾಗಿಲ್ಲ. ನಾನು ತಣ್ಣಗಾಗಲ್ಲ. ಬೆಚ್ಚಗೂ ಆಗಲ್ಲ, ಅಂಜುವುದೂ ಇಲ್ಲ. ನನ್ನ ಧಾಟಿ ಹಾಗೆಯೇ ಇರುತ್ತದೆ ಎಂದು ಯತ್ನಾಳ್‌ ಹೇಳಿದರು.

ಮುಂದುವರಿದ ಯತ್ನಾಳ್-ಯಡಿಯೂರಪ್ಪ ಮುಸುಕಿನ ಗುದ್ದಾಟ..! ..

ಕುಟುಂಬ ರಾಜಕಾರಣದ ವಿರುದ್ಧ ಪತ್ರ:  ಬಿಜೆಪಿಯಲ್ಲಿ ಮುಂದೆ ಒಂದು ಕುಟುಂಬದಲ್ಲಿ ಒಬ್ಬರಿಗೇ ಅಧಿಕಾರ ಕೊಡಬೇಕು ಎಂದು ಒತ್ತಾಯಿಸಿ ರಾಜ್ಯ, ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ಪಕ್ಷದಲ್ಲಿ ವಂಶಪಾರಂಪರ್ಯ ರಾಜಕಾರಣ ಅಂತ್ಯವಾಗಬೇಕು. ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡಬೇಕು ಅನ್ನೋದು ಪ್ರಧಾನಿಗಳ ಕನಸು. ಆದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಮನೆಯವರೇ ಎಲ್ಲ ಹುದ್ದೆಯಲ್ಲಿದ್ದಾರೆ ಎಂದು ಮತ್ತೆ ಮುಖ್ಯಮಂತ್ರಿಗಳ ವಿರುದ್ಧ ಯತ್ನಾಳ್‌ ಕಿಡಿಕಾರಿದರು.