ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಯುಗಾದಿ ಆಚರಿಸಿ, ಬೆಂಬಲಿಗರಿಗೆ ಸಂಕಲ್ಪ ಪತ್ರ ಬರೆದಿದ್ದಾರೆ. ರೈತರು, ಶ್ರಮಿಕರ ಏಳಿಗೆಗಾಗಿ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಹೊಂದಾಣಿಕೆ ರಾಜಕಾರಣದ ವಿರುದ್ಧ, ರಾಮ ರಾಜ್ಯ ಸ್ಥಾಪನೆಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು/ ವಿಜಯಪುರ (ಮಾ.30): ಬಿಜೆಯಿಂದ 6 ವರ್ಷಗಳ ಕಾಲ ಉಚ್ಛಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೀಗ ಸ್ವಕ್ಷೇತ್ರ ವಿಜಯಪುರಕ್ಕೆ ಬಂದಿದ್ದು, ಯುಗಾದಿ ಹಬ್ಬದ ಪೂಜೆಯನ್ನು ನೆರವೇರಿಸಿದ್ದಾರೆ. ನಂತರ, ತಮ್ಮನ್ನು ಬೆಂಬಲಿಸಿದ ಎಲ್ಲ ಕಾರ್ಯಕರ್ತರಿಗೆ ಸಂಕಲ್ಪ ಪತ್ರವೊಂದನ್ನು ಬರೆದಿದ್ದಾರೆ.
ಸಂಕಲ್ಪ ಪತ್ರವನ್ನು ಬರೆದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ 'ಬಂಧುಗಳೇ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಶ್ರೀ ವಿಶ್ವಾವಸು ಸಂವತ್ಸರವು ನಿಮಗೆಲ್ಲರಿಗೂ ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿ. ರೈತರಿಗೆ, ಶ್ರಮಿಕರಿಗೆ ಈ ಸಂವತ್ಸರವು ಫಲಪ್ರದಾಯಕವಾಗಲಿ ಎಂದು ಆಶಿಸುತ್ತೇನೆ. ಜನ ಸೇವೆ ಮಾಡದೆ, ಪ್ರಜೆಗಳ ಕಷ್ಟ ಕಾರ್ಪಣ್ಯಕ್ಕೆ ಧ್ವನಿಯಾಗದೆ, ತಮ್ಮ ರಾಜಕೀಯ ಅಭ್ಯುದಯಕ್ಕೆ ಹೊಂದಾಣಿಕೆ ರಾಜಕಾರಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ.
ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೆ ಹೊರತು ಶಕುನಿ ಹಾಗೂ ಧೃತರಾಷ್ಟ್ರರಲ್ಲ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣದ ವಿರುದ್ಧ ನಮ್ಮೆಲ್ಲರ ಹೋರಾಟ ಆರಂಭವಾಗಲಿದೆ. ಅಲ್ಲದೆ ರಾಮ ರಾಜ್ಯ ಸ್ಥಾಪನೆ, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ, ಗೋ ರಕ್ಷಣೆ, ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಬಾಣಂತಿಯರ ಸಾವು, ಲವ್ ಜಿಹಾದ್, ವಕ್ಫ್ ವಿರುದ್ಧ ನನ್ನ ಹೋರಾಟವನ್ನು ತೀಕ್ಷ್ಣಗೊಳಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ.
ಇದನ್ನೂ ಓದಿ: ಯುಗಾದಿಗೆ ಹಿಂದುತ್ವದ ಹೊಸ ಪಕ್ಷ: ಬಿಜೆಪಿಯಿಂದ ಕಹಿ ನೀಡಿದರೂ, ಕಾರ್ಯಕರ್ತರಿಗೆ ಸಿಹಿ ನೀಡಿದ ಯತ್ನಾಳ್!
ಜಾಲತಾಣದ ಮೂಲಕ ತಮ್ಮ ಶುಭ ಹಾರೈಕೆಗಳನ್ನು, ಬೆಂಬಲ, ಪ್ರೋತ್ಸಾಹವನ್ನು ತೋರಿಸುತ್ತಿರುವ ಎಲ್ಲಾ ಸಹೃದಯೀ ಸ್ನೇಹಿತರಿಗೂ, ಅಭಿಮಾನಿಗಳಿಗೂ, ಹಿತೈಷಿಗಳಿಗೂ ಹಾಗೂ ಕರೆ ಮಾಡಿ ಬೆಂಬಲ, ಮನೋಸ್ಥೈರ್ಯ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಭಾರತ ಮಾತೆಗೆ ಜಯವಾಗಲಿ.. ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವ ಬಗ್ಗೆಯೂ ಚಿಂತನೆ ಮಾಡಿದ್ದೇನೆ. ಇದಕ್ಕೆ ಹಿಂದುತ್ವದ ಹಿನ್ನೆಲೆಯುಳ್ಳ ಪಕ್ಷ ಕಟ್ಟುವಂತೆ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದು, ಶೀಘ್ರವೇ ಜನಾಭಿಪ್ರಾಯ ಸಂಗ್ರಹಣೆ ಮಾಡುತ್ತೇನೆ. ಜನಾಭಿಪ್ರಾಯದ ನಂತರ ಹೊಸ ಪಕ್ಷ ಕಟ್ಟುವ ಬಗ್ಗೆ ತೀರ್ಮಾನ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಇದರಂತೆ ಬಿಜೆಪಿಯಿಂದ ಉಚ್ಛಾಟನೆಯಾದ ಬೆನ್ನಲ್ಲಿಯೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿ ನಿಂತಿದ್ದು, ಹೊಸ ಪಕ್ಷ ಸ್ಥಾಪನೆ ಮೂಲಕ ರಾಜ್ಯ ಬಿಜೆಪಿಯೂ ಸವಾಲೆಸೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ: ರಾಜಿಗೆ ಒಪ್ಪದೆ ಬಿಜೆಪಿಗೆ ಮಾಜಿಯಾದ ಯತ್ನಾಳ್: ತೂತು ಒಲೆ ಕೆಡಿಸಿತು, ಮಾತು ಶಾಸಕನ ರಾಜಕೀಯ ಕೆಡಿಸಿತು
