Asianet Suvarna News Asianet Suvarna News

ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ: ಲಕ್ಷ್ಮಣ ಸವದಿ

ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳಷ್ಟಿದೆ. ರಾಜ್ಯದ ಜನತೆ ಬಿಜೆಪಿಯಲ್ಲಿನ ಬೆಳವಣಿಗೆ ನೋಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಕ್ಕಪಾಠ ಕಲಿಸಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ 

Athani Congress MLA Laxman Savadi Slams Karnataka BJP grg
Author
First Published Nov 21, 2023, 10:15 PM IST

ವಿಜಯಪುರ(ನ.21):  ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಬಿಜೆಪಿಯಲ್ಲಿ ಭವಿಷ್ಯ ಇಲ್ಲ. ಅದನ್ನು ನಾನು ಅರ್ಥ ಮಾಡಿಕೊಂಡೇ ನಾನು ಬಿಜೆಪಿ ಮನೆಯಿಂದ ಹೊರಗಡೆ ಬಂದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳಷ್ಟಿದೆ. ರಾಜ್ಯದ ಜನತೆ ಬಿಜೆಪಿಯಲ್ಲಿನ ಬೆಳವಣಿಗೆ ನೋಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಕ್ಕಪಾಠ ಕಲಿಸಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಾಥಾಶ್ರಮ ಹೆಸರಲ್ಲಿ ತಾಲಿಬಾನ್ ಮಾದರಿ ಶಿಕ್ಷಣ ನೀಡ್ತಿರೋ ಆರೋಪ ; ಆ ಬಗ್ಗೆ ನನಗೆ ಗೊತ್ತಿಲ್ಲ ಎಂದ ಗೃಹಸಚಿವ! 

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟವಾಗುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಭವಿಷ್ಯವಿಲ್ಲದ ಬಿಜೆಪಿ ಬರುವ 20 ವರ್ಷಗಳ ಕಾಲ ವಿಪಕ್ಷದಲ್ಲೇ ಇರಲಿದೆ. ಬಿಜೆಪಿಯಲ್ಲಿ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿದೆ. ನಾನು ಹೇಳಿದ್ದಲ್ಲ, ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿರುವುದು ಎಂದ ಅವರು, ರಾಮಕೃಷ್ಣ ಹೆಗಡೆ ಅವರ ಅಪ್ಪಟ ಬೆಂಬಲಿಗರಾಗಿದ್ದ ನಾವು, ಅವರು ಇರುವವರೆಗೆ ಅವರ ಜತೆಯಲ್ಲಿದ್ದೆವು. ಹೆಗಡೆಯವರಿಗೆ ಅನಾರೋಗ್ಯಕ್ಕೆ ತುತ್ತಾದ ಬಳಿಕ ಲಾಲಕೃಷ್ಣ ಅಡ್ವಾಣಿ ಅವರು ನಮ್ಮನ್ನು ಸಂಪರ್ಕಿಸಿ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು. ಆಗ ಬಿಜೆಪಿಯಲ್ಲಿ ಅನಂತಕುಮಾರ್ ಅವರಂಥ ಉತ್ತಮ ನಾಯಕರಿದ್ದರು. ಈಗ ಆ ಬಿಜೆಪಿ ಪಕ್ಷದಲ್ಲಿ ಅಂಥ ನಾಯಕರಿಲ್ಲ. ಕುಟುಂಬ ರಾಜಕೀಯ ಮತ್ತು ಆಂತರಿಕ ಸಂಘರ್ಷದಿಂದ ಬಿಜೆಪಿ ತತ್ತರಿಸಿದೆ ಎಂದರು.

135 ಶಾಸಕರ ಬಲದೊಂದಿಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಯಾವ ಪಕ್ಷವನ್ನು ಯಾರು ತೊರೆಯಲಿದ್ದಾರೆ ಎಂದು ಕಾದು ನೋಡಿ ಎಂದ ಅವರು, ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಾದ ಗ್ಯಾರಂಟಿ ಯೋಜನೆಗಳಿಂದ ಜನರು ಸಂತೃಪ್ತರಾಗಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Follow Us:
Download App:
  • android
  • ios