ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.  

ಬೆಂಗಳೂರು (ಆ.16): ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಅಮೃತ ಭಾರತಿಗೆ ಕರುನಾಡ ಜಾತ್ರೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್‌ನ ಎಲ್ಲಾ ಭ್ರಮೆಗಳನ್ನು ಕಳಚಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಾಗುವುದು ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬಂದಿದ್ದೇವೆ ಎಂದು ಬೀಗುತ್ತಿದ್ದಾರೆ. ಬಿಜೆಪಿ ಕೆಲವೇ ದಿನದಲ್ಲಿ ಸಾಮೂಹಿಕ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದೆ. 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡುತ್ತೇವೆ. ಪ್ರವಾಸದ ವೇಳೆ ಕಾಂಗ್ರೆಸ್‌ನ ನಿಜಬಣ್ಣ ಬಯಲು ಮಾಡುತ್ತೇವೆ ಎಂದು ತಿಳಿಸಿದರು.

ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ: ಮಾಜಿ ಸಿಎಂ ಯಡಿಯೂರಪ್ಪ

ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಪಡೆದ ನಾವೇ ಪುಣ್ಯವಂತರು. ಹಗಲಿರುಳೆನ್ನದೆ ಅವರು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಕೆಲಸ ಮಾಡಿದರೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇದು ರಾಷ್ಟ್ರಪಿತ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಸೇರಿದಂತೆ ಹಲವರನ್ನು ಸ್ಮರಿಸಿಕೊಳ್ಳುವ ದಿನ. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಎಷ್ಟುಕಿರುಕುಳ ಕೊಟ್ಟಿದೆ ಎನ್ನುವುದನ್ನು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿಸುತ್ತೇವೆ. ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನಿಟ್ಟುಕೊಂಡು ಓಡಾಟ ಮಾಡಿದರೆ ಕಾಂಗ್ರೆಸ್‌ಗೆ ತಿರುಗೇಟು ಆಗಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಒಂದು ಕಾಲದಲ್ಲಿ ಕಾಶ್ಮೀರ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತಿರಂಗಾ ಹರಿಸಲು ಅವಕಾಶ ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದೆಲ್ಲೆಡೆ ತಿರಂಗಾ ಹಾರಿಸುವಂತೆ ಮಾಡಿದ್ದಾರೆ. ಇಡೀ ಜಗತ್ತೇ ಇಂದು ಭಾರತವನ್ನು ನೋಡುವಂತೆ ಮಾಡಿದ್ದಾರೆ. ರಾಷ್ಟ್ರಧ್ವಜವನ್ನು ಕೇವಲ ದೇಶದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಹಾರಿಸಲಾಗಿದೆ. ಪ್ರಧಾನಿಯ ಕಾರ್ಯವೈಖರಿಯನ್ನು ವಿಶ್ವವೇ ಬೆರಗಾಗಿ ನೋಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾವರ್ಕರ್‌ ಚಿತ್ರದ ಬಗ್ಗೆ ಗಲಾಟೆ ಮಾಡಿದವನಿಗೆ ಶಿಕ್ಷೆ ಆಗಲಿ: ವೀರ ಸಾವರ್ಕರ್‌ ಅವರ ಭಾವಚಿತ್ರವನ್ನು ತೆಗೆಯುವಂಥ ಪ್ರಯತ್ನದ ಮೂಲಕ ಮಾಡಿರುವ ಕೃತ್ಯ ಅಕ್ಷಮ್ಯ ಅಪರಾಧ, ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿಯಿದೆ. ಅಂತಹವರಿಗೆ ಶಿಕ್ಷೆಯಾದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯಪಟ್ಟರು. ಶಿವಮೊಗ್ಗದ ಮಾಲ್‌ನಲ್ಲಿ ವೀರ ಸಾವರ್ಕರ್‌ ಭಾವಚಿತ್ರ ತೆರವು ಮಾಡಿದ್ದ ಪ್ರಕರಣ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವ​ರು, ಇಡೀ ವಿಶ್ವವೇ ಸಾವರ್ಕರ್‌ ಅವ​ರನ್ನು ಕೊಂಡಾಡುತ್ತಿದೆ. ಅಂತಹದರಲ್ಲಿ ಶಿವಮೊಗ್ಗದಲ್ಲಿ ನಡೆದಿರುವ ಕಿಡಿಗೇಡಿಗಳ ಈ ವರ್ತನೆ ಖಂಡನೀಯ. 

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ: ಬಿ.ಎಸ್‌.ಯಡಿಯೂರಪ್ಪ

ಸಾವರ್ಕರ್‌ ಬಗ್ಗೆ ಹಗುರವಾದ ಮಾತನಾಡಿರುವುದು ಬಹಳ ನೋವುಂಟು ಮಾಡುವ ಸಂಗತಿ. ಆ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಆತನಿಗೆ ಶಿಕ್ಷೆ ಕೂಡ ಆಗುತ್ತದೆ. ಈ ನಿಟ್ಟಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸಕ್ಕೆ ಹೋಗಬಾರದು. ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇನ್ನೂ ಬೆಂಗಳೂರಿನಲ್ಲಿ ನಡೆದ ಟಿಪ್ಪು ಸುಲ್ತಾನ್‌ ಬ್ಯಾನರ್‌ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಸದ್ಯ ಸಾವರ್ಕರ್‌ ಭಾವಚಿತ್ರ ತೆರವುಗೊಳಿಸಿದ ವಿಚಾರದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಅದರ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಉಳಿದಂತಹ ವಿಚಾರದಲ್ಲಿ ನನಗೆ ವಾಸ್ತವಿಕ ಸಂಗತಿ ನನಗೆ ಗೊತ್ತಿಲ್ಲ ಎಂದರು.