ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳಿಂದ ಸೇರಿ ಕುರುಬ ಸಮುದಾಯದ 40 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕು ಎಂದು ರಾಜ್ಯ ಕುರುಬರ ಸಂಘದಿಂದ ಒತ್ತಾಯ ಮಾಡಲಾಗಿದೆ.

ಬೆಂಗಳೂರು (ಮಾ.08): ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಟಿಕೆಟ್‌ ಹಂಚಿಕೆ ಹಾಗೂ ಅಭ್ಯರ್ಥಿಗಳ ಘೋಷಣೆಗೆ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಾದ ಜೆಡಿಎಸ್‌ ತೀವ್ರ ಕಸರತ್ತು ನಡೆಸುತ್ತಿದೆ. ಆದರೆ, ಈ ವೇಳೆ ಕೆಲವು ಸಮುದಾಯಗಳು ತಮ್ಮ ಜಾತಿಯವರಿಗೆ ಹೆಚ್ಚಿನ ಟಿಕೆಟ್‌ಗಳನ್ನು ನೀಡುವಂತೆ ಒತ್ತಡ ಹೇರುತ್ತಿವೆ. ಈಗ ಕುರುಬ ಸಮುದಾಯದವರಿಗೆ 40 ಟಿಕೆಟ್‌ಗಳನ್ನು ಕೊಡಬೇಕು ಎಂದು ಆಗ್ರಹ ವ್ಯಕ್ತವಾಗಿದೆ. 

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮೂರೂ ಪಕ್ಷಗಳು ಸೇರಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಟಿಕೆಟ್‌ಗಳನ್ನು ಘೋಷಣೆ ಮಾಡಬೇಕು ಎಂದು ಇತ್ತೀಚೆಗೆ ಲಿಂಗಾಯತ ಸಮುದಾಯದಿಂದ ಆಗ್ರಹ ಮಾಡಲಾಗಿತ್ತು. ಈಗ ಇದೇ ಮಾದರಿಯಲ್ಲಿ ಕುರುಬ ಸಮುದಾಯದಿಂದ ಕೂಡ ತಮ್ಮ ಸಮುದಾಯದ 40ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕು. ಇದರಿಂದ ರಾಜ್ಯದಲ್ಲಿ ಪ್ರಭಲ ಸಮುದಾಯ ಆಗಿರುವ ಕುರುಬರಿಗೆ ನ್ಯಾಸ ಸಿಗಲಿದೆ. ಈ ಮೂಲಕ ಸಾಮಾಜಿಕ ಸಮಾನತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಲಾಗಿದೆ. 

Dharwad: ಕುರುಬ ಸಮುದಾಯಕ್ಕೊಂದು ಟಿಕೆಟ್‌ ಕೊಡಿ: ಈವರೆಗೆ ಬಿಜೆಪಿ ಕುರುಬರಿಗೆ ಟಿಕೆಟ್‌ ಕೊಟ್ಟಿಲ್ಲವೇಕೆ?

ಈಗಾಗಲೇ ಲಿಂಗಾಯತರಿಗೆ ಈ ಬಾರಿ ಹೆಚ್ಚು ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿರುವುದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಕುರುಬರ ಸಂಘದಿಂದಲೂ ಹೆಚ್ಚಿನ ಟಿಕೆಟ್ ಗೆ ಬೇಡಿಕೆ ಇಡಲಾಗಿದೆ. ರಾಜ್ಯದಲ್ಲಿ ಮೂರು ಪಕ್ಷಗಳಿಂದ 40 ಟಿಕೆಟ್‌ಗಳನ್ನು ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕು ಎಂದು ರಾಜ್ಯ ಕುರುಬರ ಸಂಘದಿಂದ ರಾಜಕೀಯ ಪಕ್ಷಗಳಿಗೆ ಒತ್ತಾಯ ಮಾಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಕುರುಬರಿಗೆ ರಾಜಕೀಯವಾಗಿ ಅನ್ಯಾಯ ಆಗಿರುವುದರಿಂದ ಈ ಬಾರಿ ನಲವತ್ತು ಟಿಕೆಟ್‌ಗಳನ್ನು ನೀಡಬೇಕು. ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೂರ್ತಿ ಒತ್ತಾಯಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಅಂತಿಮ ಸಿದ್ಧತೆ:
ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ಭಾರಿ ಪ್ರಚಾರ ಕಾರ್ಯಗಳನ್ನು ಮಾಡುತ್ತಿವೆ. ಇದರ ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್‌ ಈಗಾಗಲೇ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದು, ಕೆಲವು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಇನ್ನು ಇಂದು ಸಂಜೆಯೊಳಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಇನ್ನು ಎಲ್ಲ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾದ ನಂತರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಯಿದೆ. 

ನನ್ನ ಸ್ಪರ್ಧೆಯಿಂದ ಕುರುಬ ಸಮುದಾಯ ಇಬ್ಬಾಗ ಮಾತು ಸುಳ್ಳು: ಸಿದ್ದರಾಮಯ್ಯ

ಕಳೆದ ಮೂರು ಚುನಾವಣೆಗಳ ಕುರುಬರ ಸ್ಪರ್ಧೆ ವಿವರ: 
2008ರಲ್ಲಿ ಸಿದ್ದರಾಮಯ್ಯರವರು ಸೇರಿ ಒಟ್ಟು 6 ಮಂದಿ ಕುರುಬರು ಶಾಸಕರಾಗಿದ್ದರು.
2013ರ ವಿಧಾನಸಭಾ ಚುನಾವಣೆಯಲ್ಲಿ 14 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು.
ಇನ್ನು ಕಳೆದ 2018ರ ಚುನಾವಣೆಯಲ್ಲಿ 12 ಮಂದಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. 
2018ರಲ್ಲಿ ಕಾಂಗ್ರೆಸ್‌ನ 8, ಜೆಡಿಎಸ್‌ 2, ಬಿಜೆಪಿ ಒಬ್ಬರು ಹಾಗೂ ಪಕ್ಷೇತರರಾಗಿ ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದರು. 
2018ರ ಚುನಾವಣಿಯಲ್ಲಿ ಕಾಂಗ್ರೆಸ್ ಪಕ್ಷದಿಂದ 20 ಮಂದಿಗೆ ಟಿಕೆಟ್ ನೀಡಲಾಗಿತ್ತು.
ಜೆಡಿಎಸ್ ಪಕ್ಷದಿಂದ 11 ಮಂದಿ ಹಾಗೂ ಬಿಜೆಪಿಯಿಂದ 5 ಮಂದಿಗೆ ಟಿಕೆಟ್ ನೀಡಿಲಾಗಿತ್ತು.