2024ರಲ್ಲಿ ಬಿಜೆಪಿಯ ಹಾಲಿ ಸಂಸದರ ಪೈಕಿ ಅನಂತ ಹೆಗಡೆ ಮತ್ತು ಶಿವಕುಮಾರ ಉದಾಸಿ ಸಕ್ರಿಯ ರಾಜಕಾರಣದಲ್ಲಿ ನಿರಾಸಕ್ತರಾಗಿದ್ದರೆ, ಜಿ.ಎಸ್‌.ಬಸವರಾಜು, ಬಚ್ಚೇಗೌಡ, ಜಿ.ಎಂ.ಸಿದ್ದೇಶ, ರಮೇಶ ಜಿಗಜಿಣಗಿ, ವಿ.ಶ್ರೀನಿವಾಸ ಪ್ರಸಾದ್‌ ಇವರೆಲ್ಲ ವಯಸ್ಸಿನ ಕಾರಣದಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಅನಂತ್‌ ಹೆಗಡೆ ಮಾತೆತ್ತಿದರೆ ‘ನೋ ಮೋರ್‌ ಪೊಲಿಟಿಕ್ಸ್‌ ಪ್ಲೀಸ್‌’ ಎನ್ನುತ್ತಿದ್ದಾರೆ.

ಪ್ರಶಾಂತ್‌ ನಾತು

ಮೈಕ್‌ ಎದುರು ಕಂಡರೆ ಸಾಕು ತಾನೇ ಹೋಗಿ ಮಾತನಾಡಿ ಯಾರಾದರೊಬ್ಬರನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದ ಬಸನಗೌಡ ಪಾಟೀಲ… ಯತ್ನಾಳ್‌ ರಹಸ್ಯವಾಗಿ ದಿಲ್ಲಿಗೆ ಹೋಗಿ ಬಂದ ನಂತರ ದಿಢೀರ್‌ ಸುಮ್ಮನಾಗಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಜಯಪುರಕ್ಕೆ ಬಂದಾಗಲೇ ಯತ್ನಾಳರನ್ನು ದಿಲ್ಲಿಗೆ ಕರೆಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಚುನಾವಣೆ ಮುಗಿಯುವವರೆಗೆ ಸುಮ್ಮನಿರಿ, ಯಡಿಯೂರಪ್ಪನವರ ಬಗ್ಗೆ ಇನ್ನು ಮೇಲೆ ಒಂದು ಅಕ್ಷರ ಮಾತನಾಡಿದರೂ ಸಹಿಸೋದಿಲ್ಲ. ಯಡಿಯೂರಪ್ಪ ಬಗ್ಗೆ ಮಾತಾಡದೆ ಇದ್ದರೆ ಮಂತ್ರಿ ಆಗುತ್ತಿದ್ದಿರಿ. ವಿನಾಕಾರಣ ವಾಚಾಳಿತನ ಮುಂದುವರೆಸಿದರೆ ಬಿಜೆಪಿಗೂ ಲಾಭ ಇಲ್ಲ, ನಿಮಗೂ ಲಾಭ ಇಲ್ಲ ಎಂದು ಎಚ್ಚರಿಕೆ ಕೊಟ್ಟನಂತರ ಸದ್ಯಕ್ಕಂತೂ ಯತ್ನಾಳ್‌ ಸುಮ್ಮನಿರುವ ತೀರ್ಮಾನಕ್ಕೆ ಬಂದಿದ್ದಾರೆ. ದಿಲ್ಲಿಯ ಯಾವುದೇ ನಾಯಕರು 2018ರ ನಂತರ ಯತ್ನಾಳರಿಗೆ ಭೇಟಿಗೆ ಸಮಯ ನೀಡುತ್ತಿರಲಿಲ್ಲ. ತಿಂಗಳ ಹಿಂದೆ ಬಿಜೆಪಿ ರಾಜ್ಯ ಪ್ರಭಾರಿ ಅರುಣ ಸಿಂಗ್‌ ಕರೆದು ಮಾತನಾಡಿದ್ದರಾದರೂ ಯಡಿಯೂರಪ್ಪನವರ ಬಗ್ಗೆ ಮಾತಾಡಬೇಡಿ ಅಂದಿದ್ದರೇ ಹೊರತು, ಉಳಿದ ವಿಷಯ ಮಾತಾಡಿರಲಿಲ್ಲ. ಆದರೆ ಅಮಿತ್‌ ಶಾ ಯತ್ನಾಳರನ್ನು ದಿಲ್ಲಿಗೆ ಕರೆದು, ಹೀಗೆ ಮಾತನಾಡಿದರೆ ವಿಪರೀತ ಕ್ರಮ ಅನಿವಾರ್ಯ ಆಗುತ್ತದೆ. ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದರೆ ಒಳ್ಳೆಯದು. ಪಂಚಮಸಾಲಿ ಮೀಸಲಾತಿಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬೊಮ್ಮಾಯಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿ ಕಳುಹಿಸಿದ್ದಾರೆ. ಯತ್ನಾಳರ ಸಾಮರ್ಥ್ಯ ಎಂದರೆ ನೇರಾನೇರ ಮಾತು. ಆದರೆ ಅವರ ದೌರ್ಬಲ್ಯವೆಂದರೆ ಆ ಮಾತುಗಳನ್ನು ತಮ್ಮವರ ವಿರುದ್ಧವೇ ಲಂಗುಲಗಾಮು ಇಲ್ಲದೇ ಆಡುವುದು.

ಆರ್‌ಎಸ್‌ಎಸ್‌ ಜೊತೆಗೂ ಅಷ್ಟಕಷ್ಟೆ

ಯತ್ನಾಳ್‌ ಪ್ರಖರ ಹಿಂದುತ್ವವಾದಿ. ಆದರೂ ಕೂಡ ಅವರಿಗೂ ಆರ್‌ಎಸ್‌ಎಸ್‌ ನಾಯಕರಿಗೂ ಆಗಿ ಬರುವುದಿಲ್ಲ. ಅಟಲ…ಜಿ ಸರ್ಕಾರದಲ್ಲಿ ಯತ್ನಾಳ್‌ ಕೇಂದ್ರ ಮಂತ್ರಿ ಆಗಿದ್ದಾಗ ಅವರಿಗೂ ಅಲ್ಲಿನ ಸ್ಥಳೀಯ ಆರ್‌ಎಸ್‌ಎಸ್‌ ಕಾರ್ಯವಾಹರಿಗೂ ಶುರು ಆದ ಜಗಳವನ್ನು ಅಡ್ವಾಣಿ ಮಧ್ಯಪ್ರವೇಶಿಸಿ ಸುಮ್ಮನಿರಿಸಿದ್ದರು. ಮೊದಲಿನ ಬಿಜೆಪಿಯಲ್ಲಿ ಬರೀ ಅನಂತಕುಮಾರ್‌ ಮಾತನ್ನು ಮಾತ್ರ ಯತ್ನಾಳ್‌ ಕೇಳುತ್ತಿದ್ದರು. ಈಗ ಯತ್ನಾಳ್‌ ಜೊತೆ ಮಾತನಾಡಿ ಅವರನ್ನು ಸುಮ್ಮನೆ ಇರಿಸಬಲ್ಲ ಯಾವುದೇ ರಾಜ್ಯ ನಾಯಕರು ಇಲ್ಲ. ಬಿ.ಎಲ….ಸಂತೋಷ್‌, ಪ್ರಹ್ಲಾದ್‌ ಜೋಶಿ, ಜಗದೀಶ್‌ ಶೆಟ್ಟರ್‌, ವೀರಣ್ಣ ಚರಂತಿಮಠರಿಗೆ ಯತ್ನಾಳ್‌ ಜೊತೆ ಸಖ್ಯ ಸಲುಗೆ ಇದೆಯಾದರೂ ಯಾವಾಗ ಎಲ್ಲಿ ವೈಯಕ್ತಿಕ ಟೀಕೆ ಮಾಡುತ್ತಾರೋ ಅನ್ನುವ ಕಾರಣದಿಂದ ಯಾರೂ ಯತ್ನಾಳ್‌ ಜೊತೆ ಮಾತನಾಡಲು ತಯಾರು ಇರಲಿಲ್ಲ. ಆದರೆ ಯತ್ನಾಳ್‌ ಮತ್ತು ನಿರಾಣಿ ನಡುವಿನ ಸಾರ್ವಜನಿಕವಾಗಿ ‘ಕೊಳೆ ಬಟ್ಟೆತೊಳೆಯುವ’ ಕಾರ್ಯಕ್ರಮದ ನಂತರ ಬಿಜೆಪಿಗೆ ಇದ್ದ ವಿಕಲ್ಪಗಳು ಎರಡು, ಮೊದಲನೆಯದು ದಿಲ್ಲಿ ನಾಯಕರಿಂದ ಎಚ್ಚರಿಕೆ. ಎರಡನೆಯದು, ಪಾರ್ಟಿಯಿಂದ ಉಚ್ಚಾಟನೆ. ಹೀಗಾಗಿಯೇ ಅಮಿತ್‌ ಶಾ ಯತ್ನಾಳರನ್ನು ಕರೆದು ಕೊನೆಯ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

ನಿಜಕ್ಕೂ ಯತ್ನಾಳ್‌ ಹೇಗೆ ಗೊತ್ತಾ?

2018ರ ಆಸುಪಾಸು ಯತ್ನಾಳ್‌ ಒಮ್ಮೆ ಸಂಸತ್ತಿನ ಗೇಟ್‌ ಎದುರು ಸಿಕ್ಕರು. ನಾನು-ಅವರು ಹರಟೆ ಹೊಡೆಯುತ್ತಾ ಪಾರ್ಲಿಮೆಂಚ್‌ ಗೇಟ್‌ ನಂಬರ್‌ 4ರ ತನಕ ಬಂದೆವು. ಯತ್ನಾಳ್‌ ಆಗ ಹೇಳುತ್ತಿದ್ದದ್ದು ಒಂದೇ ಮಾತು, ನಂಗೆ ಅನಂತಕುಮಾರ್‌ಜೀ ಹೇಳಿದ್ದಾರೆ, ಯಾರ ವಿರುದ್ಧವೂ ಹೇಳಿಕೆ ಕೊಡಬೇಡ ಎಂದು. ನಾನು ನೋಡ್ರಿ.. ಇನ್‌ಮ್ಯಾಲೆ ಒಬ್ಬರ ಬಗ್ಗೆನೂ ಮಾತಾಡಂಗಿಲ್ಲ ಅಂದರು. ಅದಾದ ಕೆಲವೇ ದಿನಕ್ಕೆ ಯಡಿಯೂರಪ್ಪನವರ ಬಗ್ಗೆ ಮಾತಾಡಲು ಶುರುಮಾಡಿಯೇಬಿಟ್ಟರು. ಈಗ ಸಾರ್ವಜನಿಕವಾಗಿ ಸಂಘರ್ಷಕ್ಕಿಳಿದಿರುವ ನಿರಾಣಿ ಮತ್ತು ಯತ್ನಾಳ್‌ ಹಿಂದೆ ಚೆನ್ನಾಗಿದ್ದ ದಿನಗಳವು. ಮುರುಗೇಶ್‌ ನಿರಾಣಿ ಹೇಳಿಕೊಳ್ಳುವ ಪ್ರಕಾರ ಜಮಖಂಡಿಗೆ ಯಾವುದೋ ಬ್ಯಾಂಕ್‌ ಉದ್ಘಾಟನೆಗೆ ಯತ್ನಾಳರನ್ನು ಕರೆದಿದ್ದ ರಂತೆ. ವೇದಿಕೆ ಹತ್ತಿದ ಯತ್ನಾಳ್‌ ನಿರಾಣಿ ಬಗ್ಗೆನೇ ಟೀಕಿಸಿ ಮಾತಾಡಿದರಂತೆ. ನೇರಾನೇರ ಫಿಲ್ಟರ್‌ ಇಲ್ಲದೇ ಮಾತನಾಡುವುದು ಒಳ್ಳೆಯ ಗುಣ ಹೌದು, ಆದರೆ ಅದು ಅತಿಯಾಗಿ ವ್ಯಸನವಾದರೆ ಸಾರ್ವಜನಿಕ ಬದುಕಿಗೆ ಒಳ್ಳೆಯದಲ್ಲ.

ಬೆಳಗಾವಿ ಕುಳಗಳಿಗೆ ಶಾ ಕ್ಲಾಸ್‌

18 ವಿಧಾನಸಭಾ ಕ್ಷೇತ್ರಗಳಿರುವ ಬೆಳಗಾವಿ ಜಿಲ್ಲೆಯಲ್ಲಿನ ಬಿಜೆಪಿ ಅಂದರೆ ಮನೆಯೊಂದು ಹತ್ತು ಬಾಗಿಲುಗಳು. ಸಕ್ಕರೆ ಕಾರ್ಖಾನೆ, ಬ್ಯಾಂಕ್‌ಗಳು, ಜಾತಿಗಳು, ಜೊತೆಗೆ ರಾಜಕೀಯ ಅಧಿಕಾರ ಇರುವ ಪ್ರತಿಯೊಬ್ಬರೂ ಇಲ್ಲಿ ಪ್ರಬಲರೇ. ಇಲ್ಲಿ ಜೊಲ್ಲೆ ಅವರದೊಂದು ಬಣ, ಕೋರೆ ಕವಟಗಿಮಠ ಅವರದು ಇನ್ನೊಂದು ಬಣ. ಲಕ್ಷ ್ಮಣ ಸವದಿ, ಮಹಾಂತೇಶ ದೊಡ್ಡನಗೌಡರ, ಅರವಿಂದ ಪಾಟೀಲ…ರದೊಂದು ಬಣ. ಅಭಯ ಪಾಟೀಲ…, ಸಂಜಯ ಪಾಟೀಲ…, ಅನಿಲ… ಬೆನಕೆ ಅವರದು ಮತ್ತೊಂದು ಬಣ. ಕತ್ತಿ ಕುಟುಂಬ ಒಂದು ಬಣವಾದರೆ ಜಾರಕಿಹೊಳಿ ಅವರ ಪ್ರಪಂಚವೇ ಪ್ರತ್ಯೇಕ. ರಮೇಶ್‌ ಜಾರಕಿಹೊಳಿ ಅಥಣಿಗೆ ಮಹೇಶ ಕುಮಟಳ್ಳಿಗೆ ಟಿಕೆಟ್‌ ಕೊಡಬೇಕು ಎಂದು ಪಟ್ಟು ಹಿಡಿದಿದ್ದರೆ, ಲಕ್ಷ ್ಮಣ ಸವದಿ ಏನಾದರೂ ಆಗಲಿ ನಿಲ್ಲಲೇಬೇಕು ಅನ್ನೋ ಮೂಡ್‌ನಲ್ಲಿದ್ದಾರೆ. ದಿವಂಗತ ಉಮೇಶ ಕತ್ತಿ ಪುತ್ರ ನಿಖಿಲ… ಕತ್ತಿ ಬಿಜೆಪಿ ಟಿಕೆಟ್‌ ಮೇಲೆ ಹುಕ್ಕೇರಿಯಲ್ಲಿ ನಿಲ್ಲೋ ತಯಾರಿಯಲ್ಲಿದ್ದರೆ, ರಮೇಶ್‌ ಕತ್ತಿ ಕಾಂಗ್ರೆಸ್‌ನಿಂದ ನಿಪ್ಪಾಣಿ ಸದಲಗಾದಲ್ಲಿ ನಿಂತರೆ ಹೇಗೆ ಎಂಬ ಯೋಚನೆಯಲ್ಲಿದ್ದಾರೆ. 2018ರಲ್ಲಿ ಕತ್ತಿ, ಜಾರಕಿಹೊಳಿ, ನಿರಾಣಿ ಎಲ್ಲರೂ ಸೇರಿ ಲಕ್ಷ ್ಮಣ ಸವದಿ ವಿರುದ್ಧ ಅಥಣಿಯಲ್ಲಿ ಒಟ್ಟಾಗಿದ್ದರು. ಈ ಬಾರಿ ಎಲ್ಲ ಬಿಜೆಪಿ ಲಿಂಗಾಯತರು ಜಾರಕಿಹೊಳಿ ವಿರುದ್ಧ ಒಟ್ಟಾಗುವ ಮನಸ್ಥಿತಿಯಲ್ಲಿದ್ದಾರೆ. ಲಕ್ಷ್ಮೇ ಹೆಬ್ಬಾಳಕರ್‌ ವಿರುದ್ಧ ಸ್ಪರ್ಧೆಗೆ ರಮೇಶ ಜಾರಕಿಹೊಳಿ ಸಹಾಯ ಮಾಡುತ್ತಾರೆ ಎಂದು ಸಂಜಯ ಪಾಟೀಲ… ಅಂದುಕೊಂಡಿದ್ದರು. ಆದರೆ ರಮೇಶ್‌ ಜಾರಕಿಹೊಳಿ ಪಾರ್ಟಿ ಬಾವುಟ ಹಚ್ಚದೆ ಬೆಳಗಾವಿ ಗ್ರಾಮೀಣಕ್ಕೆ ಹೋಗಿ ಬಂದಿದ್ದಾರೆ. ಈ ಮಾಂಡಲಿಕರ ಜಗಳ ಬಗೆಹರಿಸಲೆಂದೇ ಅಮಿತ್‌ ಶಾ ಬೆಳಗಾವಿಯಲ್ಲಿ ಶಾಸಕರ ಜೊತೆ ಮೀಟಿಂಗ್‌ ಮಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲೀಗ ಬಹುತೇಕ ಎಲ್ಲಾ ಜಿಲ್ಲೆಗಳ ಸಮಸ್ಯೆ ಬಗೆಹರಿಸಲು ಶಾ ಸಾಹೇಬರೇ ಬರಬೇಕಾಗುತ್ತದೋ ಏನೋ. ಮೇಲ್ನೋಟಕ್ಕೆ ಹಾಗೆಯೇ ಅನ್ನಿಸುತ್ತಿದೆ.

ಕುಂದಗೋಳ ಟಿಕೆಟ್‌ ಯಾರಿಗೆ?

ಅಮಿತ್‌ ಶಾ ಕುಂದಗೋಳದಲ್ಲಿ ರೋಡ್‌ ಶೋ ಏನೋ ನಡೆಸಿದ್ದಾರೆ. ಆದರೆ ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎಂದು ಇನ್ನೂ ಇತ್ಯರ್ಥವಾಗಿಲ್ಲ. 2018ರ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ತಮ್ಮ ಸಂಬಂಧಿ ಎಸ್‌.ಐ.ಚಿಕ್ಕನಗೌಡರ್‌ರಿಗೆ ಟಿಕೆಟ್‌ ಘೋಷಿಸುವಾಗ 2023ಕ್ಕೆ ಬಿಜೆಪಿ ಟಿಕೆಟ್‌ ಎಂ.ಆರ್‌.ಪಾಟೀಲ…ರಿಗೆ ಎಂದು ಹೇಳಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಮಾಪ್ತ ಎಂ.ಆರ್‌.ಪಾಟೀಲ… ಈ ಬಾರಿ ಕ್ಷೇತ್ರದ ತುಂಬೆಲ್ಲ ನನಗೆ ಟಿಕೆಟ್‌ ಎಂದು ಓಡಾಡುತ್ತಿದ್ದಾರೆ. ಆದರೆ ಚಿಕ್ಕನಗೌಡರ ಇನ್ನೂ ಪ್ರಯತ್ನ ಬಿಟ್ಟುಕೊಟ್ಟಿಲ್ಲ. ಜೊತೆಗೆ ಯುವ ಮೋರ್ಚಾ ಕೋಟಾದಿಂದ ಡಾ.ಮಲ್ಲಿಕಾರ್ಜುನ್‌ ಬಾಳಿಕಾಯಿ ಕೂಡ ದಿಲ್ಲಿವರೆಗೆ ಹೋಗಿ ಟಿಕೆಟ್‌ ಕೇಳುತ್ತಿದ್ದಾರೆ. ಬಿಜೆಪಿ ಟಿಕೆಟ್‌ ಕೇಳುತ್ತಿರುವ ಮೂವರು ಕೂಡ ಪಂಚಮಸಾಲಿಗಳು. ಇನ್ನು ಕಾಂಗ್ರೆಸ್‌ ನಡೆಸಿರುವ ಸರ್ವೇಗಳ ಪ್ರಕಾರ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಗೆಲ್ಲುವ ಸಾಧ್ಯತೆ ಕಡಿಮೆ ಇದ್ದು, ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎಂದು ಇನ್ನೂ ನಿರ್ಧಾರ ಆಗಿಲ್ಲ. ದಿವಂಗತ ಶಿವಳ್ಳಿ ಸಹೋದರರು ಟಿಕೆಟ್‌ ಕೇಳಿದ್ದು, ಅವರಲ್ಲಿ ಯಾರಿಗಾದರೂ ಟಿಕೆಟ್‌ ಕೊಡಬೇಕಾ ಅಥವಾ ಲಿಂಗಾಯತ ಒಬ್ಬರಿಗೆ ಟಿಕೆಟ್‌ ಕೊಟ್ಟರೆ ಒಳ್ಳೆಯದಾ ಎಂದು ಇನ್ನೂ ತೀರ್ಮಾನ ಆಗಿಲ್ಲ.

ನಿರಾಸಕ್ತ ಅನಂತಕುಮಾರ್‌ ಹೆಗಡೆ

ಪ್ರಖರ ಹಿಂದುತ್ವದ ವಿಷಯ ಮಂಡಿಸುವ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಸಕ್ರಿಯ ದೈನಂದಿನ ರಾಜಕಾರಣದಿಂದ ಮಾತ್ರ ಆಸಕ್ತಿ ಕಳೆದುಕೊಂಡಿದ್ದಾರೆ. ಅವರ ಆಪ್ತರು ಹೇಳುವ ಪ್ರಕಾರ ಚುನಾವಣೆ ರಾಜಕೀಯ ಬೇಕಾ ಅಥವಾ ಸಾಕಾ ಎಂಬ ಜಿಜ್ಞಾಸೆಯಲ್ಲಿದ್ದಾರೆ ಉತ್ತರ ಕನ್ನಡದ ಸಂಸದ. ಎಷ್ಟೋ ಬಾರಿ ಟೀವಿಗೆ ಸಂದರ್ಶನ ಕೊಡುತ್ತೀರಾ ಎಂದು ಪತ್ರಕರ್ತರು ಕೇಳಿದರೆ ಅನಂತ ಹೆಗಡೆ ‘ನೋ ಮೋರ್‌ ಪೊಲಿಟಿಕ್ಸ್‌ ಪ್ಲೀಸ್‌..’ ಎಂದು ಮರು ಉತ್ತರ ಕೊಡುತ್ತಾರೆ. ಹಾಗೆ ನೋಡಿದರೆ 2024ರಲ್ಲಿ ಹಾಲಿ ಸಂಸದರ ಪೈಕಿ ಅನಂತ ಹೆಗಡೆ ಮತ್ತು ಶಿವಕುಮಾರ ಉದಾಸಿ ಸಕ್ರಿಯ ರಾಜಕಾರಣದಲ್ಲಿ ನಿರಾಸಕ್ತರಾಗಿದ್ದರೆ, ಜಿ.ಎಸ್‌.ಬಸವರಾಜು, ಬಚ್ಚೇಗೌಡ, ಜಿ.ಎಂ.ಸಿದ್ದೇಶ, ರಮೇಶ ಜಿಗಜಿಣಗಿ, ವಿ.ಶ್ರೀನಿವಾಸ ಪ್ರಸಾದ್‌ ಇವರೆಲ್ಲ ವಯಸ್ಸಿನ ಕಾರಣದಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ.