ರಾಜಸ್ಥಾನ ಸಿಎಂ-ಸಚಿನ್ ಪೈಲಟ್ ವೈಷಮ್ಯ ಮತ್ತೆ ಬಯಲು, ಗೆಹ್ಲೋಟ್ ಆಪ್ತ ಸಚಿವನ ಮೇಲೆ ಶೂ ಎಸೆತ!
ರಾಜಸ್ಥಾನ ರಾಜ್ಯದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ನಡುವಿನ ವೈಷಮ್ಯ ಇನ್ನಷ್ಟು ತೀವ್ರವಾಗಿದೆ. ಸೋಮವಾರ ರಾಜಸ್ಥಾನ ಸಿಎಂನ ಆಪ್ತರಾಗಿರುವ ಸಚಿವನ ಮೇಲೆ ಪೈಲಟ್ ಬೆಂಬಲಿಗರು ಶೂ ಎಸೆದಿದ್ದಾರೆ. ಇದರ ಬೆನ್ನಲ್ಲಿಯೇ ಸಚಿವ ಕೂಡ ಸಚಿನ್ ಪೈಲಟ್ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಜೈಪುರ (ಸೆ.13): ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಬಣದ ನಡುವಿನ ಜಟಾಪಟಿ ಸೋಮವಾರ ಮತ್ತೆ ಬೆಳಕಿಗೆ ಬಂದಿದೆ. ಅಜ್ಮೀರ್‌ನ ಪುಷ್ಕರ್‌ನಲ್ಲಿ ಗುರ್ಜರ್ ನಾಯಕ ಕರ್ನಲ್ ಕಿರೋರಿ ಸಿಂಗ್ ಬೈನ್ಸ್ಲಾ ಅವರ ಅಸ್ಥಿ ವಿಸರ್ಜನೆಯ ಸಂದರ್ಭದಲ್ಲಿ ಉಭಯ ಬಣಗಳ ನಡುವೆ ದೊಡ್ಡ ಮಟ್ಟದ ತಿಕ್ಕಾಟ ನಡೆದಿದೆ. ಗೆಹ್ಲೋಟ್ ಬೆಂಬಲಿಗ ಕ್ರೀಡಾ ಸಚಿವ ಅಶೋಕ್ ಚಂದನಾ ಭಾಷಣ ಮಾಡಲು ವೇದಿಕೆಗೆ ಬಂದ ತಕ್ಷಣ ಪೈಲಟ್ ಬೆಂಬಲಿಗರು ಶೂ ಮತ್ತು ಬಾಟಲಿಗಳನ್ನು ಎಸೆದು ಪ್ರತಿಭಟನೆ ಆರಂಭಿಸಿದರು. ಸಚಿನ್ ಪೈಲಟ್ ಜಿಂದಾಬಾದ್ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ. ಈ ಘಟನೆಯ ನಂತರ ಕೆರಳಿದ ಸಚಿವ ಅಶೋಕ್ ಚಂದ್ನಾ ಅವರು ಟ್ವಿಟ್ಟರ್‌ನಲ್ಲಿಯೇ ಸಚಿನ್ ಪೈಲಟ್‌ಗೆ ಎಚ್ಚರಿಕೆ ನೀಡಿದ್ದಾರೆ. ನನ್ನ ಮೇಲೆ ಶೂ ಎಸೆಯುವ ಮೂಲಕ ಸಚಿನ್ ಪೈಲಟ್ ನೀನು ಬೇಗ ಮುಖ್ಯಮಂತ್ರಿಯಾಗಬಹುದು. ಆದರೆ, ಇದು ಹೋರಾಟ ಎಂದು ಅನಿಸಿಕೊಳ್ಳುವುದಿಲ್ಲ. ಹಾಗೇನಾದರೂ ನಾನು ಹೊಡೆದಾಡಬೇಕು ಎಂದು ಇಳಿದಿರೆ, ನಮ್ಮಿಬ್ಬರಲ್ಲಿ ಒಬ್ಬರೇ ಉಳಿಯುತ್ತಾರೆ. ಅದನ್ನು ನಾನು ಇಷ್ಟಪಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಆ ಆ ಮೂಲಕ ಕಾಂಗ್ರೆಸ್‌ನ ದೊಡ್ಡ ನಾಯಕನಿಗೆ ನೇರವಾಗಿಯೇ ಬೆದರಿಕೆ ಹಾಕಿದ್ದಾರೆ.
ಸಚಿನ್ ಪೈಲಟ್ ಜಿಂದಾಬಾದ್ ಎನ್ನುವ ಸ್ಲೋಗನ್ ಆರಂಭದಿಂದಲೂ ಸದ್ದು ಮಾಡತೊಡಗಿತ್ತು. ಕೈಗಾರಿಕಾ ಸಚಿವೆ ಶಕುಂತಲಾ ರಾವತ್ ಭಾಷಣ ಮಾಡಲು ಬಂದಾಗ ಪ್ರತಿಭಟನೆ ಆರಂಭವಾಯಿತು. ಕರೌಲಿಯಲ್ಲಿ ಕರ್ನಲ್ ಬೈನ್ಸ್ಲಾ ಅವರ ಹೆಸರಿನಲ್ಲಿ ಕಾಲೇಜು ತೆರೆಯುವುದಾಗಿ ಅವರು ಘೋಷಣೆ ಮಾಡಿದರು. ಆದರೆ, ಹೆಚ್ಚು ಹೊತ್ತು ಭಾಷಣ ಮಾಡಲು ಪೈಲಟ್ ಬೆಂಬಲಿಗರು ಅವಕಾಶ ನೀಡಲಿಲ್ಲ. ಸಚಿನ್ ಪೈಲಟ್ ಜಿಂದಾಬಾದ್ ಎನ್ನುವ ಘೋಷಣೆಗಳ ನಡುವೆಯೇ ರಾವತ್ ಭಾಷಣ ಮಾಡಿದರು. ಇದಾದ ನಂತರ ರಾಜ್ಯ ಕ್ರೀಡಾ ಸಚಿವ ಅಶೋಕ್ ಚಂದನಾ ಭಾಷಣ ಮಾಡಲು ಆಗಮಿಸಿದರು. ಈ ವೇಳೆ ಬೆಂಬಲಿಗರು ಶೂ ಮತ್ತಿತರ ವಸ್ತುಗಳನ್ನು ಎಸೆದು ಗಲಾಟೆ ಸೃಷ್ಟಿಸಿದರು. ಮತ್ತೆ ಪೈಲಟ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನದ ನಡುವೆಯೇ ಚಂದನಾ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ಅದಾದ ಬಳಿಕ ಟ್ವೀಟ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಗಲಾಟೆ ಮತ್ತು ಶೂ ಎಸೆದ ಪ್ರಕರಣದಲ್ಲಿ, ಗುರ್ಜರ್ ಆರಕ್ಷಣ್ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ವಿಜಯ್ ಬೈನ್ಸ್ಲಾ, ಇದು ಅಚಾನಕ್ ಆಗಿರುವ ಘಟನೆ. ನಮ್ಮ ಸಮುದಾಯದ ಭಾವನೆಗಳಲ್ಲ. ಮೂಲೆಯಲ್ಲಿ ಇದ್ದ ಕೆಲವರಿಂದ ಈ ಘಟನೆಯಾಗಿದೆ. ಶೂ ಎಸೆದವರ ಎರಡು-ನಾಲ್ಕು ಪಾದರಕ್ಷೆಗಳು ನಮ್ಮ ಬಳಿ ಇವೆ. ಸಚಿನ್ ಪೈಲಟ್ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಕೆಲಸದ ನಿಮಿತ್ತ ಬರಲಾಗಲಿಲ್ಲ. ಆದರೆ, ಇದನ್ನು ಜನ ಅರ್ಥ ಮಾಡಿಕೊಂಡಿಲ್ಲ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಎರಡೂ ಬಣಗಳ ಜನರಿದ್ದರು. ಇಲ್ಲಿ ಯಾವುದೇ ವಿವಾದವಿರಲಿಲ್ಲ. ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಮಾರಂಭಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಸತೀಶ್ ಪೂನಿಯಾ ಕೂಡ ವೇದಿಕೆ ತಲುಪಿದಾಗ ಸಚಿನ್ ಪೈಲಟ್ ಜಿಂದಾಬಾದ್ ಎಂಬ ಘೋಷಣೆಗಳು ಮೊಳಗಿದವು. ಈ ವೇಳೆ ಕರ್ನಲ್ ಬೈನ್ಸ್ಲಾ ಜಿಂದಾಬಾದ್ ಎಂಬ ಘೋಷಣೆಗಳೂ ಮೊಳಗಿದವು.
ಗುರ್ಜರ್ ಮೀಸಲಾತಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೈಂಸ್ಲಾ ಅವರು ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಪುಷ್ಕರ್‌ನ 52 ಘಾಟ್‌ಗಳಲ್ಲಿ ಲೀನವಾದರು. ಗುರ್ಜರ್ ಭವನದಲ್ಲಿ ಸ್ಥಾಪಿಸಲಾದ ಕರ್ನಲ್ ಬೈನ್ಸ್ಲಾ ಅವರ ಪ್ರತಿಮೆಯನ್ನು ಸೋಮವಾರ ಮೊದಲು ಅನಾವರಣಗೊಳಿಸಲಾಯಿತು. ಇದಾದ ನಂತರ ಬೆಳಗ್ಗೆ 10 ಗಂಟೆಯಿಂದ ಪುಷ್ಕರ ಮೇಳ ಮೈದಾನದಲ್ಲಿ ಎಂಬಿಸಿ ಸಮಾಜದ (ಗುರ್ಜರ್, ರೆಬಾರಿ, ರೈಕಾ, ದೇವಸಿ, ಗಡಾರಿಯಾ, ಬಂಜಾರಾ, ಗಾದ್ರಿ, ಗಯಾರಿ, ಗಡೋಲಿಯಾ ಲುಹಾರ್) ಸಭೆ ನಡೆಯಿತು. ಗುರ್ಜರ್ ಆರಕ್ಷಣ್ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವಿಜಯ್ ಬೈನ್ಸ್ಲಾ ಮತ್ತಿತರರು ಸಭೆಯ ಸ್ಥಳದಲ್ಲಿ ವ್ಯವಸ್ಥೆಗಳನ್ನು ನೋಡಿಕೊಂಡಿದ್ದರು. ಸಮಾವೇಶದ ಸ್ಥಳದಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಕರ್ನಲ್ ಬೈನ್ಸ್ಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಿಜೆಪಿಯ ಜೊತೆಗೆ ಕಾಂಗ್ರೆಸ್ ನಾಯಕರು ಮತ್ತು ಸಚಿವರು ಆಗಮಿಸಿದ್ದರು.