ದೆಹಲಿಯ ಎಎಪಿ ಸರ್ಕಾರ ಹಾಗೂ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ನಡುವಿನ ಆಂತರಿಕ ಸಂಘರ್ಷ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗ ಕೇಜ್ರಿವಾಲ್‌ ಸಿಂಗಾಪುರದಲ್ಲಿ ಭಾಗಿಯಾಗಬೇಕಿದ್ದ ಶೃಂಗಸಭೆಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಆಪ್‌ ಆರೋಪಿಸಿದೆ. 

ದೆಹಲಿ ಸರ್ಕಾರ - ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ಕೇಂದ್ರ ಸರ್ಕಾರದ ನಡುವಣ ತಿಕ್ಕಾಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ಕೇಂದ್ರ ಸರ್ಕಾರ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಮಾಡುವ ಅಭಿವೃದ್ಧಿ ಕಾರ್ಯಗಳು ಹಾಗೂ ಹಲವು ವಿಚಾರಗಳಿಗೆ ತಡೆ ನೀಡುತ್ತದೆ ಎಂದು ಕೇಜ್ರಿವಾಲ್‌ ಸರ್ಕಾರ ಆರೋಪಿಸುತ್ತಿತ್ತು. ಆದರೀಗ, ಕೇಜ್ರಿವಾಲ್‌ ಸಿಂಗಾಪುರಕ್ಕೆ ಹೋಗದಂತೆ ಕೇಂದ್ರ ಸರ್ಕಾರ ಮಾಡಿದೆ ಎಂದು ಎಎಪಿ ಆರೋಪಿಸುತ್ತಿದೆ. 

ಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಶೃಂಗಸಭೆಯಲ್ಲಿ ಭಾಗಿಯಾಗಲು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವಕಾಶ ತಪ್ಪಿಸಿಕೊಂಡಿದ್ದಾರೆ. ಈ ಶೃಂಗಸಭೆಯಲ್ಲಿ ಕೇಜ್ರಿವಾಲ್‌ ಭಾಷಣವನ್ನೂ ಮಾಡಬೇಕಿತ್ತು. ಆದರೀಗ, ಅಲ್ಲಿಗೆ ಹೋಗುವ ಅವಕಾಶವನ್ನೇ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಿಂಗಾಪುರಕ್ಕೆ ಭೇಟಿ ನೀಡಲು ಪ್ರಯಾಣದ ಔಪಚಾರಿಕತೆಯನ್ನು ಸಲ್ಲಿಸುವ ಡೆಡ್‌ಲೈನ್‌ ಅನ್ನು ಕೇಜ್ರಿವಾಲ್‌ ಕಳೆದುಕೊಂಡಿದ್ದಾರೆ. ಸಿಂಗಾಪುರಕ್ಕೆ ಭೇಟಿ ನೀಡಲು ಸಿಎಂಗೆ ಅನುಮತಿಯನ್ನೇ ನೀಡಿರಲಿಲ್ಲ. ಹಾಗೂ, ಡೆಡ್‌ಲೈನ್‌ ಮುಗಿದ ಬಳಿಕ ಈ ಅನುಮತಿ ದೊರಕಿತು ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.

ಸರ್ಕಾರದ ಅಬಕಾರಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ದೆಹಲಿ LG ಶಿಫಾರಸು!

ಸಿಂಗಾಪುರಕ್ಕೆ ಭೇಟಿ ನೀಡುವ ಔಪಚಾರಿಕತೆಯನ್ನು ಜುಲೈ 20ರೊಳಗೆ ಸಲ್ಲಿಸಬೇಕಿತ್ತು. ಆದರೆ, ಈ ಸಂಬಂಧ ದೆಹಲಿ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಜುಲೈ 21 ರಂದು ಪ್ರತಿಕ್ರಿಯೆ ನೀಡಿದ್ದರು ಎಂದು ದೆಹಲಿ ಸರ್ಕಾರ ಗುರುವಾರ ಸಂಜೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ನಗರಗಳ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಯಾಣ ಮಾಡುವುದಕ್ಕೆ ಅನುಮತಿ ನೀಡಲು ಲೆಫ್ಟಿನೆಂಟ್‌ ಗವರ್ನರ್‌ಗೆ ಜೂನ್‌ 7 ರಂದೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಅರ್ಜಿಗೆ ಪ್ರತಿಕ್ರಿಯೆ ನೀಡಲು ಒಂದೂವರೆ ತಿಂಗಳ ಕಾಲ ಲೆಫ್ಟಿನೆಂಟ್‌ ಗವರ್ನರ್‌ ಸುಮ್ಮನೆ ಕೂತಿದ್ದರು. ಜುಲೈ 21 ರಂದು ಪ್ರತಿಕ್ರಿಯೆ ನೀಡಿದ್ದಾರೆ. ಆ ವೇಳೆಗೆ ತುಂಬಾ ವಿಳಂಬವಾಗಿತ್ತು, ಅಲ್ಲದೆ, ಜುಲೈ 20 ರೊಳಗೆ ಪ್ರಯಾಣದ ಕುರಿತು ಔಪಚಾರಿಕತೆಯನ್ನು ಸಲ್ಲಿಸುವ ಜುಲೈ 20ರ ಡೆಡ್‌ಲೈನ್‌ ಸಹ ಮೀರಿ ಹೋಗಿತ್ತು’’ ಎಂದು ಆಪ್‌ ಪಕ್ಷ ನೀಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. 
 ಈ ಹಿನ್ನೆಲೆ ದೆಹಲಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಕುರಿತು ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಾತನಾಡುವುದನ್ನು ತಡೆಯುವುದು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ತಡೆಯುವುದು ಕೇಂದ್ರ ಸರ್ಕಾರದ ಉದ್ದೇಶ ಎಂಬುದು ಸ್ಪಷ್ಟವಾಗಿದೆ ಎಂದು ಎಎಪಿ ಆರೋಪಿಸಿದೆ.

ಅಲ್ಲದೆ, ಕೇಂದ್ರ ಸರ್ಕಾರದ ಉದ್ದೇಶ ಈಡೇರಿರಬಹುದು. ಆದರೆ, ಜಾಗತಿಕ ಸಮುದಾಯ ನಮ್ಮ ದೇಶವನ್ನು ಕೀಳಾಗಿ ನೋಡಬಹುದಾದ ಪರಿಸ್ಥಿತಿಯೂ ಎದುರಾಗಬಹುದು ಎಂದು ದೆಹಲಿ ಸರ್ಕಾರ ಹೇಳಿದೆ. ಇನ್ನು, ಅಂತಹ ಶೃಂಗಸಭೆಯು ದೆಹಲಿ ನಗರವನ್ನು ವಿಶ್ವಮಟ್ಟದಲ್ಲಿ ತೋರಿಸಲು ಮತ್ತು ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಲು ಒಂದು ಅವಕಾಶವಾಗಿತ್ತು ಎಂದೂ ಕೇಜ್ರಿವಾಲ್‌ ಸರ್ಕಾರ ವಾದ ಮಾಡಿದೆ.

ಸಿಂಗಾಪುರ ಹೈಕಮೀಷನರ್‌ ಸೈಮನ್‌ ವಾಂಗ್‌ ಶೃಂಗಸಭೆಯಲ್ಲಿ ಭಾಗಿಯಾಗಲು ಜೂನ್‌ ತಿಂಗಳಲ್ಲಿ ಕೇಜ್ರಿವಾಲ್‌ರನ್ನು ಆಹ್ವಾನಿಸಿತ್ತು. ಅದಕ್ಕೆ ದೆಹಲಿ ಸಿಎಂ ಒಪ್ಪಿಗೆಯನ್ನೂ ನೀಡಿದ್ದರು. ಆಗಸ್ಟ್‌ 1 ರಂದು ವಿಶ್ವದ ನಗರಗಳ ಶೃಂಗಸಭೆಯಲ್ಲಿ ಕೇಜ್ರಿವಾಲ್‌ ಭಾಷಣ ಮಾಡಬೇಕಿತ್ತು.

ದೆಹಲಿ ಟ್ರಿಪ್ ಪ್ಲಾನ್ ಇದೆಯಾ? ವಿಶೇಷ ಉಡುಗೊರೆಯೊಂದಿಗೆ ಸ್ವಾಗತಿಸಲು ಸಜ್ಜಾದ ರಾಜಧಾನಿ!

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಪ್ರತಿಕ್ರಿಯೆ ಹೀಗಿದೆ..
ಅಲ್ಲದೆ, ಲೆಫ್ಟಿನೆಂಟ್‌ ಗವರ್ನರ್‌ ನೀಡಿರುವ ಪ್ರತಿಕ್ರಿಯೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ಕಾರ್ಯಕ್ರಮ ಮೇಯರ್‌ಗಳಿಗೆ ಸೇರಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಆ ಶೃಂಗಸಭೆಗೆ ಹೋಗುವಂತಿಲ್ಲ ಎಂದು ಲೆಫ್ಟಿನೆಂಟ್‌ ಗವರ್ನರ್‌ ದೆಹಲಿ ಸರ್ಕಾರದ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿದೆ ಎಂದು ತಿಳಿದುಬಂದಿದೆ. 

2019ರಲ್ಲೂ ಸಹ ಇಂತದ್ದೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಕೇಂದ್ರ ಸರ್ಕಾರ ಕೇಜ್ರಿವಾಲ್‌ಗೆ ಅನುಮತಿ ನೀಡಿರಲಿಲ್ಲ. ಮೇಯರ್‌ಗಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗಿಯಾಗುವುದು ಸರಿಯಲ್ಲ ಎಂದು ಆ ವೇಳೆಯೂ ಮೋದಿ ಸರ್ಕಾರ ಅನುಮತಿ ನಿರಾಕರಿಸಿತ್ತು. ನಂತರ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಆನ್ಲೈನ್‌ ಮುಖಾಂತರ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.