Asianet Suvarna News Asianet Suvarna News

Assembly election 2023: ರಾಜ್ಯದಲ್ಲಿ ಜಾತಿ ಸಮೀಕರಣಕ್ಕೆ ಅಮಿತ್‌ ಶಾ ಮಾಸ್ಟರ್‌ ಪ್ಲಾನ್‌!

  • ರಾಜ್ಯದಲ್ಲಿ ಜಾತಿ ಸಮೀಕರಣಕ್ಕೆ ಅಮಿತ್‌ ಶಾ ಮಾಸ್ಟರ್‌ ಪ್ಲಾನ್‌!
  • ವಿಧಾನಸಭೆ ಚುನಾವಣೆಗೆ ರಣತಂತ್ರ ಆರಂಭ
  • ಟಿಕೆಟ್‌ ಆಯ್ಕೆ, ಚುನಾವಣೆ ತಂತ್ರಗಾರಿಕೆಗೆ ಎಷ್ಟುಸಲ ಕರೆದರೂ ರಾಜ್ಯಕ್ಕೆ ಬರುವೆ
  • ಜಾತಿಗೆ ಆದ್ಯತೆ ನೀಡದಿದ್ದರೆ ಬಹುಮತ ಕಷ್ಟ: ರಾಜ್ಯ ನಾಯಕರಿಗೆ ಸ್ಪಷ್ಟಸಂದೇಶ
Amit Shah's master plan for caste equality in the state bengaluru rav
Author
First Published Jan 2, 2023, 6:23 AM IST

ವಿಜಯ್‌ ಮಲಗಿಹಾಳ

 ಬೆಂಗಳೂರು (ಜ.2) : ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಜಾತಿ ಸಮೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇಲ್ಲದಿದ್ದರೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಈ ಬಾರಿಯೂ ಕಷ್ಟವಾಗಬಹುದು ಎಂಬ ಅಭಿಪ್ರಾಯ, ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗಿನ ಪಕ್ಷದ ರಾಜ್ಯ ನಾಯಕರ ಸಭೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.

ಹೀಗಾಗಿ, ಈ ಬಾರಿ ಸಮಯವೂ ಇರುವುದರಿಂದ ಈಗಿನಿಂದಲೇ ಟಿಕೆಟ್‌ ಹಂಚಿಕೆ ಅಥವಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ವಿಶೇಷ ಗಮನ ಕೇಂದ್ರೀಕರಿಸಬೇಕು. ಈ ಜಾತಿ ಸಮೀಕರಣಕ್ಕೆ ಪೂರಕವಾಗಿ ನಿರ್ದಿಷ್ಟವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿ ಇಲ್ಲದಿದ್ದರೆ ಇತರ ಪಕ್ಷಗಳಿಂದ ಕರೆತರುವ ಬಗ್ಗೆಯೂ ಪ್ರಯತ್ನ ನಡೆಸಿ ಎಂಬ ಸೂಚನೆಯನ್ನು ಅಮಿತ್‌ ಶಾ ಅವರು ನೀಡಿದ್ದಾರೆ ಎನ್ನಲಾಗಿದೆ.

ಪಕ್ಷ ಸಂಘಟನೆ: ಗುರುವಾರ ರಾಜ್ಯಕ್ಕೆ ಅಮಿತ್ ಶಾ ಆಗಮನ

ರಾಜ್ಯ ನಾಯಕರಿಗೆ ಏನು ಸೂಚನೆ?

  • ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ವೇಳೆ ವಿಶೇಷ ಗಮನ ನೀಡಬೇಕು
  • ಜಾತಿ ಸಮೀಕರಣಕ್ಕೆ ಪೂರಕವಾಗಿಯೇ ಅಭ್ಯರ್ಥಿಗಳ ಆರಿಸಬೇಕು
  • ನಮ್ಮಲ್ಲಿ ಸಮರ್ಥರು ಇಲ್ಲದಿದ್ದಲ್ಲಿ, ಇತರೆ ಪಕ್ಷದ ನಾಯಕರ ಕರೆತನ್ನಿ
  • ಯಾವುದೇ ಸಮುದಾಯಕ್ಕೆ ಕಡೆಗಣಿಸಿದ ಭಾವನೆ ಬರದಂತೆ ಮಾಡಿ
  • ಇಂಥವರಿಗೇ ಟಿಕೆಟ್‌ ಏಕೆ ಎಂಬುದರ ಬಗ್ಗೆ ನನಗೆ ಸಮರ್ಥನೆ ನೀಡಿ

ಕಳೆದ ಎರಡು ಬಾರಿ ಸರ್ಕಾರ ರಚಿಸಿದ್ದರೂ ಪಕ್ಷ ತನ್ನ ಸ್ವಂತ ಬಲದ ಮೇಲೆ ಅಲ್ಲ. ಸ್ಪಷ್ಟಬಹುಮತಕ್ಕೆ 113 ಸ್ಥಾನ ಬೇಕು. ಆದರೆ, ಬಿಜೆಪಿ 2008ರ ಚುನಾವಣೆಯಲ್ಲಿ 110 ಸ್ಥಾನ ಮತ್ತು 2018ರ ಚುನಾವಣೆಯಲ್ಲಿ 104 ಸ್ಥಾನ ಗಳಿಸಿತ್ತು. ಹೀಗಾಗಿ, ಬಿಜೆಪಿ(Karnataka bjp)ಎರಡು ಚುನಾವಣೆಗಳಲ್ಲೂ ಇತರರ ನೆರವಿಲ್ಲದೆ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಪಕ್ಷದ ಹೈಕಮಾಂಡ್‌ ಬಯಸಿದಂತೆ ಸುಗಮ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಮೂರನೇ ಬಾರಿಯಾದರೂ ತನ್ನ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಇದಕ್ಕಾಗಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆಯಿಂದಲೇ ಹೆಜ್ಜೆ ಇಡಬೇಕು ಎಂಬ ಮಾತನ್ನು ಅಮಿತ್‌ ಶಾ(Amith shah) ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಪಕ್ಷದ ವಿವಿಧ ಹಂತದ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿದ ಅಮಿತ್‌ ಶಾ ಅವರು ಮುಂದಿನ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಏರಬೇಕು. ಅದಕ್ಕೆ ಸಂಬಂಧಿಸಿದಂತೆ ಎಲ್ಲ ರಣತಂತ್ರಗಳನ್ನೂ ಹೆಣೆಯಲು ನಾವು ಸಿದ್ಧರಾಗಿದ್ದೇವೆ. ಇನ್ನು ಮುಂದೆ ಚುನಾವಣೆವರೆಗೆ ಎಷ್ಟುಬಾರಿ ಕರೆದರೂ ಬಂದು ಹೋಗುತ್ತೇನೆ. ದಿನಗಟ್ಟಲೇ ಕುಳಿತು ಇಲ್ಲಿಯೇ ಸಭೆ ಮಾಡುತ್ತೇನೆ ಎಂದು ಅಮಿತ್‌ ಶಾ ರಾಜ್ಯ ನಾಯಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ನೇತೃತ್ವದ ಸರ್ಕಾರ ಈಗಾಗಲೇ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಜತೆಗೆ ಕಳೆದ ವಾರ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರಿಗೆ ಪ್ರತ್ಯೇಕ ಮೀಸಲಾತಿ ನೀಡುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಹೀಗಿರುವಾಗ ಇದರ ಲಾಭವನ್ನು ಪಕ್ಷ ಪಡೆದುಕೊಳ್ಳಬೇಕು. ಕೇವಲ ಇವುಗಳನ್ನಷ್ಟೇ ಇಟ್ಟುಕೊಂಡು ಚುನಾವಣೆ ಹೋದರೆ ಪೂರ್ಣ ಬಹುಮತ ಗಳಿಸುವುದು ಸುಲಭವಲ್ಲ. ಬದಲಾಗಿ, ಗೆಲ್ಲುವುದಕ್ಕೆ ಪೂರಕವಾಗಿ ಟಿಕೆಟ್‌ ಹಂಚಿಕೆಯಲ್ಲೂ ಜಾತಿ ಸಮೀಕರಣ ಮಾಡಬೇಕು. ಯಾವುದೇ ಸಮುದಾಯಕ್ಕೂ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮಗೆ ಸರಿಯಾದ ಪಾಲು ಸಿಕ್ಕಿಲ್ಲ ಎಂಬ ಭಾವನೆ ಬರದಂತೆ ನೋಡಿಕೊಳ್ಳಬೇಕು. ಇದನ್ನು ರಾಜ್ಯ ನಾಯಕರು ಸೂಕ್ಷ್ಮವಾಗಿ ಗಮನಿಸಬೇಕು. ಅಂಕಿ ಅಂಶಗಳ ಪ್ರಕಾರ ನನಗೆ ಸರಿಯಾದ ಮಾಹಿತಿ ಕೊಡಿ. ಇಂಥ ಅಭ್ಯರ್ಥಿಗೇ ಟಿಕೆಟ್‌ ಯಾಕೆ ನೀಡಬೇಕು ಎಂಬ ಬಗ್ಗೆ ಸಮರ್ಥನೆ ನೀಡಿ ಎಂದು ಅಮಿತ್‌ ಶಾ ಅವರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Assembly Election 2023: ಅಮಿತ್ ಶಾ ಕರ್ನಾಟಕ ಭೇಟಿ: ರಾಜ್ಯದಲ್ಲಿ ಚಾಣಕ್ಯನ 'ರಣತಂತ್ರ' ಏನು?

ಜತೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಟಿಕೆಟ್‌ ಹಂಚಿಕೆಯಲ್ಲಿ ಯಾವ ಸಮುದಾಯಕ್ಕೆ ಆದ್ಯತೆ ನೀಡುತ್ತವೆ ಎಂಬುದನ್ನು ಪರಿಶೀಲಿಸಿ. ಅವರ ಅಭ್ಯರ್ಥಿಗಳಿಗೆ ಪ್ರತಿಯಾಗಿ ನಾವು ಯಾವ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಗೆಲುವು ಸುಲಭವಾಗಲಿದೆ ಎಂಬ ಅಂಶದ ಬಗ್ಗೆ ಒತ್ತು ನೀಡಬೇಕು ಎಂಬ ಮಾತನ್ನೂ ಅಮಿತ್‌ ಶಾ ಸೂಚಿಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios