ಬೆಂಗಳೂರು(ನ.10): ಆಡಳಿತ ಪಕ್ಷಕ್ಕೆ ಪ್ರತಿಷ್ಠೆ, ಪ್ರತಿಪಕ್ಷಗಳಿಗೆ ತನ್ನ ಶಕ್ತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಜಿದ್ದಾಜಿದ್ದಿನ ಕಣವಾಗಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆ ಹಾಗೂ ತಲಾ ಎರಡು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಮತ ಎಣಿಕೆ ಮಂಗಳವಾರ (ನ.10) ನಡೆಯಲಿದೆ. ಮುಖಂಡರು ಹಾಗೂ ಅಭ್ಯರ್ಥಿಗಳಲ್ಲಿ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಮತ ಎಣಿಕೆಗೆ ಈಗಾಗಲೇ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿದೆ.

ಉಪ ಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಎಲ್ಲ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಚುನಾವಣಾ ಗೆಲುವು ಒಂದು ಕಡೆಗೆ ಪಕ್ಷ ಹಾಗೂ ಸರ್ಕಾರದ ಆತ್ಮ ವಿಶ್ವಾಸ ಹೆಚ್ಚಿಸಿದರೆ, ಮತ್ತೊಂದು ಕಡೆ ನಾಯಕರ ರಾಜಕೀಯ ಹಾದಿಯನ್ನು ಇನ್ನಷ್ಟುಸುಗಮಗೊಳಿಸಲಿದೆ. ಪ್ರತಿ ಚುನಾವಣೆ ಗೆಲುವು ಆಡಳಿತಾರೂಢ ಪಕ್ಷದ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಬಿಜೆಪಿ ಸಹ ಇದಕ್ಕೆ ಹೊರತಾಗಿಲ್ಲ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿ.ಕೆ. ಶಿವಕುಮಾರ್‌ ನಾಯಕತ್ವದಲ್ಲಿ ಎದುರಿಸುತ್ತಿರುವ ಮೊದಲ ಚುನಾವಣೆ. ಹೀಗಾಗಿ ಎರಡು ಉಪಕ್ಷೇತ್ರಗಳ ಚುನಾವಣೆಯ ಗೆಲುವು ಅವರಿಗೆ ಹೆಚ್ಚಿನ ಆತ್ಮ ವಿಶ್ವಾಸ ತಂದು ಕೊಡಲಿದೆ. ಹೈಕಮಾಂಡ್‌ ಹಾಗೂ ಪಕ್ಷದ ನಾಯಕರಿಗೂ ಸಹ ತಮ್ಮ ಸಾಮರ್ಥ್ಯ ತೋರಿಸಲು ಇದೊಂದು ಅವಕಾಶವಾಗಿದೆ. ಇದೇ ವೇಳೆ, ಶಿರಾ ಕ್ಷೇತ್ರ ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಪ್ರತಿಷ್ಠಿತ ಪ್ರಶ್ನೆಯಾಗಿದೆ.

ಬಿಜೆಪಿ-ಕಾಂಗ್ರೆಸ್‌ಗೆ ಪ್ರತಿಷ್ಠೆ:

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಮುನಿರತ್ನ ಅವರಿಗೆ ಈ ಚುನಾವಣೆ ರಾಜಕೀಯ ಜೀವನದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಕಾಂಗ್ರೆಸ್‌ ತೊರೆದ ದಿನದಿಂದಲೇ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಕಾರ್ಯ, ಕೊರೋನಾ ಸಂಕಷ್ಟದಲ್ಲಿ ಜನರಿಗೆ ನೀಡಿದ ನೆರವು, ಗೆದ್ದರೆ ಮಂತ್ರಿ ಪದವಿ ಗ್ಯಾರಂಟಿ ಎಂಬ ಕಾರಣದಿಂದ ಗೆಲುವು ಖಚಿತ ಎಂಬ ವಿಶ್ವಾಸದಲ್ಲಿ ಅವರು ಇದ್ದಾರೆ.

ಇದಕ್ಕೆ ಪ್ರತಿಯಾಗಿ ಈ ಕ್ಷೇತ್ರವನ್ನು ಪುನಃ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್‌ ಸಾಕಷ್ಟುಬೆವರು ಸುರಿಸಿದೆ. ಘಟಾನುಘಟಿ ನಾಯಕರು ಬಂದು ಹೋಗಿದ್ದಾರೆ. ಮುನಿರತ್ನ ವಿರೋಧಿಸುವ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್‌ ನಾಯಕರದ್ದಾಗಿದೆ. ಈ ಮಧ್ಯೆ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಬೇಸತ್ತಿರುವ ಮತದಾರರು ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸಲಿದ್ದಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ.

ಇನ್ನು ಶಿರಾ ಕ್ಷೇತ್ರದಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಬಲವಾದ ನಂಬಿಕೆಯನ್ನು ಜೆಡಿಎಸ್‌ ಹೊಂದಿದೆ. ಅನುಕಂಪದ ಮತಗಳು ನೆರವಾಗಲಿವೆ ಎಂಬ ನಂಬಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೊಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಈ ಬಾರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹರಸಾಹಸ ಮಾಡಿದೆ. ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೇರಿದಂತೆ ಅನೇಕ ನಾಯಕರು ಸಾಕಷ್ಟುಬೆವರು ಹರಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ವಿಜಯೇಂದ್ರ ಅವರು ಪಕ್ಷದೊಳಗೆ ಇನ್ನಷ್ಟುಗಟ್ಟಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಗೆಲ್ಲಿಸಲು ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಸಾಕಷ್ಟುಸುತ್ತಾಡಿದ್ದಾರೆ.

4 ವಿಧಾನ ಪರಿಷತ್‌ ಕ್ಷೇತ್ರ:

ತಲಾ ಎರಡು ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ಬಿಜೆಪಿ ವಿಧಾನ ಪರಿಷತ್‌ನಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆರ್‌. ಚೌಡರೆಡ್ಡಿ ತೂಪಲ್ಲಿ, ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೊ. ಎಸ್‌.ವಿ. ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರು ಮರು ಆಯ್ಕೆ ಬಯಸಿದ್ದಾರೆ. ಜೆಡಿಎಸ್‌ನಲ್ಲಿದ್ದು ಈಗ ಬಿಜೆಪಿಯಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪುಟ್ಟಣ್ಣ ಮರು ಆಯ್ಕೆಗೆ ಸಾಕಷ್ಟು ಕಸರತ್ತು ನಡೆಸಿದ್ದಾರ