Asianet Suvarna News Asianet Suvarna News

MLC Election: ಪರಿಷತ್‌ಗೆ ಎಲ್ಲಾ 7 ಅಭ್ಯರ್ಥಿಗಳ ಅವಿರೋಧ ಆಯ್ಕೆ?

*  ಕೊನೆಯ ದಿನ 3 ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ
*  ಬಿಜೆಪಿಗೆ 4, ಕಾಂಗ್ರೆಸ್‌ಗೆ 2, ಜೆಡಿಎಸ್‌ 1 ಸ್ಥಾನ ಖಚಿತ
*  ಶುಕ್ರವಾರವೇ ಪರಿಷತ್‌ ಫಲಿತಾಂಶ ಪ್ರಕಟ ಸಂಭವ
 

All 7 Candidates Unanimous Elect to Karnataka Vidhan Parishat grg
Author
Bengaluru, First Published May 25, 2022, 5:45 AM IST | Last Updated May 25, 2022, 5:45 AM IST

ಬೆಂಗಳೂರು(ಮೇ.25):  ತೀವ್ರ ಕುತೂಹಲ ಮೂಡಿಸಿದ್ದ ವಿಧಾನಸಭೆಯಿಂದ ವಿಧಾನಪರಿಷತ್‌ ಆಯ್ಕೆಯಾಗುವ ಚುನಾವಣೆಗೆ, ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಮಂಗಳವಾರ ಮೂರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಚುನಾವಣೆ ನಡೆಯುವ ಏಳು ಸ್ಥಾನದಲ್ಲಿ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಬಿಜೆಪಿಗೆ ನಾಲ್ಕು, ಪ್ರತಿಪಕ್ಷ ಕಾಂಗ್ರೆಸ್‌ಗೆ ಎರಡು ಮತ್ತು ಜೆಡಿಎಸ್‌ಗೆ ಒಂದು ಸ್ಥಾನ ಲಭಿಸಲಿದೆ. ಅಂತೆಯೇ ಏಳು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಸುಲಭವಾಗಿ ಗೆಲುವು ಸಾಧಿಸಬಹುದಾಗಿದೆ. ಪ್ರತಿ ಅಭ್ಯರ್ಥಿಯು 2-3 ಪ್ರತಿ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಏಳು ಅಭ್ಯರ್ಥಿಗಳಿಂದ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಪತ್ರ ಸಲ್ಲಿಕೆ ವೇಳೆಯೇ ಕಾಂಗ್ರೆಸ್‌ನಲ್ಲಿ ಭಿನ್ನಮತ?

ಶುಕ್ರವಾರವೇ ಫಲಿತಾಂಶ?:

ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಸಂದರ್ಭ ಎದುರಾಗದೇ ಇರುವುದರಿಂದ ಶುಕ್ರವಾರ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ಘೋಷಣೆ ಮಾಡುವುದು ನಿಶ್ಚಿತವಾಗಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಸೋಮವಾರವೇ ತನ್ನ ಅಭ್ಯರ್ಥಿಗಳ ಪಟ್ಟಿಪ್ರಕಟಿಸಿತ್ತು. ಆದರೆ, ಆಡಳಿತಾರೂಢ ಬಿಜೆಪಿ ಮತ್ತು ಮತ್ತೊಂದು ಪ್ರತಿಪಕ್ಷ ಜೆಡಿಎಸ್‌ ಮಂಗಳವಾರ ಬೆಳಗ್ಗೆ ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸಿತು.

ಬಿಜೆಪಿ ಪಟ್ಟಿ:

ಬಿಜೆಪಿ ಅಭ್ಯರ್ಥಿಗಳಾಗಿ ಹಾಲಿ ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಎಸ್‌.ಕೇಶವ ಪ್ರಸಾದ್‌ ಮತ್ತು ಹೇಮಲತಾ ನಾಯಕ್‌ ಅವರು ನಾಮಪತ್ರ ಸಲ್ಲಿಸಿದರು. ಮೊದಲನೇ ಅಭ್ಯರ್ಥಿಯಾಗಿ ಲಕ್ಷ್ಮಣ್‌ ಸವದಿ, ಎರಡನೇ ಅಭ್ಯರ್ಥಿಯಾಗಿ ಎಸ್‌.ಕೇಶವಪ್ರಸಾದ್‌, ಮೂರನೇ ಅಭ್ಯರ್ಥಿಯಾಗಿ ಛಲವಾದಿ ನಾರಾಯಣಸ್ವಾಮಿ ಹಾಗು ನಾಲ್ಕನೇ ಅಭ್ಯರ್ಥಿಯಾಗಿ ಹೇಮಲತಾ ನಾಯಕ್‌ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವರಾದ ಆರ್‌.ಆಶೋಕ್‌, ಸಿ.ಸಿ.ಪಾಟೀಲ್‌, ಕೆ.ಗೋಪಾಲಯ್ಯ, ಶಿವರಾಂ ಹೆಬ್ಬಾರ್‌, ಶಾಸಕ ನಾರಾಯಣಸ್ವಾಮಿ, ಪಕ್ಷದ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಅಭ್ಯರ್ಥಿಗಳು:

ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಪಕ್ಷದ ವಕ್ತಾರ ಎಂ.ನಾಗರಾಜ್‌ ಮತ್ತು ಮೇಲ್ಮನೆ ಮಾಜಿ ಸದಸ್ಯ ಅಬ್ದುಲ್‌ ಜಬ್ಬಾರ್‌ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವರಾದ ಎಂ.ಬಿ.ಪಾಟೀಲ್‌, ಆರ್‌.ವಿ.ದೇಶಪಾಂಡೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಜೆಡಿಎಸ್‌ ಹುರಿಯಾಳು:

ಜೆಡಿಎಸ್‌ ಅಭ್ಯರ್ಥಿಯಾಗಿ ಪಕ್ಷ ವಕ್ತಾರ ಟಿ.ಎ.ಶರವಣ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಪ್ರತಿ ಅಭ್ಯರ್ಥಿಗೂ ಆಯಾ ಪಕ್ಷದ ತಲಾ 10 ಶಾಸಕರು ಸೂಚಕರಾಗಿ ಸಹಿ ಮಾಡಿದ್ದಾರೆ. ಬರುವ ಜೂ.14ರಂದು ಖಾಲಿಯಾಗುವ ಏಳು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಹೆಚ್ಚುವರಿ ನಾಮಪತ್ರಗಳು ಸಲ್ಲಿಕೆಯಾಗದೆ, ಏಳು ಸ್ಥಾನಕ್ಕೆ ಏಳು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಹೆಚ್ಚುವರಿ ಉಮೇದುವಾರಿಕೆ ಸಲ್ಲಿಕೆಯಾಗದಿರುವ ಹಿನ್ನೆಲೆಯಲ್ಲಿ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.

ನೆಚ್ಚಿನ ಕಾರಿನಲ್ಲಿ ಬಂದು ಪತ್ನಿ ಸಮೇತ ನಾಮಪತ್ರ ಸಲ್ಲಿಸಿದ Basavaraj Horatti

ಹೆಲಿಕಾಪ್ಟರ್‌ನಲ್ಲಿ ಬಂದ ಹೇಮಲತಾ

ಕೊನೆಯ ಹಂತದಲ್ಲಿ ವಿಧಾನಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ ಪರಿಣಾಮ ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್‌ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ ಪ್ರಸಂಗ ನಡೆಯಿತು.
ಬಿಜೆಪಿ ತನ್ನ ಅಭ್ಯರ್ಥಿಗಳ ಘೋಷಣೆಯನ್ನು ಮಂಗಳವಾರ ಬೆಳಗ್ಗೆ ಮಾಡಿತು. ಲಕ್ಷ್ಮಣ್‌ ಸವದಿ, ಕೇಶವಪ್ರಸಾದ್‌, ನಾರಾಯಣಸ್ವಾಮಿ ಬೆಂಗಳೂರಲ್ಲಿಯೇ ಇದ್ದ ಕಾರಣ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲು ಸಮಸ್ಯೆಯಾಗಿಲ್ಲ. ಆದರೆ, ಬೆಳಗ್ಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾದಾಗ ಹೇಮಲತಾ ನಾಯಕ್‌ ಅವರ ಕೊಪ್ಪಳದಲ್ಲಿದ್ದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಹೊರಟ ಹೇಮಲತಾ ಅವರು ತುಮಕೂರಿಗೆ ಆಗಮಿಸಿದ ವೇಳೆ ನಾಮಪತ್ರ ಸಲ್ಲಿಸಲು ಸಮಯ ಮುಗಿಯಲಿದೆ ಎಂಬುದನ್ನು ಅರಿತು, ಪಕ್ಷದ ಹಿರಿಯ ನಾಯಕರಿಗೆ ಮಾಹಿತಿ ನೀಡಿದರು. ತಕ್ಷಣ ಅವರಿಗೆ ಪಕ್ಷದ ಮುಖಂಡರು ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಿದರು. ಹೀಗೆ ತುಮಕೂರಿನಿಂದ ಹೆಲಿಕಾಪ್ಟರ್‌ ಮೂಲಕ ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಗೆ ಆಗಮಿಸಿದರು. ಅಲ್ಲಿಂದ ಎಸ್ಕಾರ್ಚ್‌ ಮೂಲಕ ವಿಧಾನಸೌಧಕ್ಕೆ ಆಗಮಿಸಿ ತಡಬಡಾಯಿಸಿ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 3 ಗಂಟೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಳ್ಳಲು ಕೊನೆಯ 20 ನಿಮಿಷ ಉಳಿದಿದ್ದರೂ ಬಂದಿರಲಿಲ್ಲ. ಬಳೀಕ ವಿಧಾನಸೌಧಕ್ಕೆ ಆಗಮಿಸಿ ಬಿಜೆಪಿ ಕಚೇರಿಗೆ ತೆರಳಿದರು. ಅಲ್ಲಿ ನಾಮಪತ್ರ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನು ಹೊಂದಿಸುವಲ್ಲಿ ಹೇಮಲತಾ ಅವರು ತಡಬಡಾಯಿಸಿದರು. ದಾಖಲೆಗಳನ್ನು ಸಿದ್ದಪಡಿಸಿ ಕೊನೆ ಕ್ಷಣಕ್ಕೆ ಚುನಾವಣಾಧಿಕಾರಿ ಕಚೇರಿಯೊಳಗೆ ತಲುಪಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಒಟ್ಟಾರೆ ಹೇಮಲತಾ ಅವರು ನಾಮಪತ್ರ ಸಲ್ಲಿಕೆಗೆ ಹರಸಾಹಸಪಡಬೇಕಾಯಿತು. ನಾಮಪತ್ರ ಸಲ್ಲಿಕೆಯ ಬಳಿಕ ನಿಟ್ಟುಸಿರು ಬಿಟ್ಟರು.
 

Latest Videos
Follow Us:
Download App:
  • android
  • ios