Asianet Suvarna News Asianet Suvarna News

ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯಲ್ಲಿ ಹೋರಾಟ ನಡೆಸಲು ನಿರ್ಧಾರ: ವೇಣುಗೋಪಾಲ್‌

ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌

AICC General Secretary KC Venugopal Slams to BJP grg
Author
Bengaluru, First Published Aug 4, 2022, 1:00 AM IST

ಹುಬ್ಬಳ್ಳಿ(ಆ.03):  ಪರಸ್ಪರ ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ, ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಗೋಕುಲ ರಸ್ತೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಇದೇ ಮೊದಲ ಬಾರಿಗೆ ನಡೆದ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ರೀತಿ ಎಚ್ಚರಿಕೆ ನೀಡುವ ಮೂಲಕ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ನಾಯಕತ್ವ ಕಿತ್ತಾಟಕ್ಕೆ ಇತಿಶ್ರೀ ಹಾಡಲು ಸೂಚಿಸಿದರು. ಅಲ್ಲದೇ, ಭಿನ್ನಮತದ ರಾಗ ಎಳೆಯುವವರಿಗೆ ಚಾಟಿ ಬೀಸಿದರು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಸಭೆಯಲ್ಲಿನ ಚರ್ಚೆಯ ವಿಷಯ ಹಂಚಿಕೊಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಮಧ್ಯ ಕರ್ನಾಟಕ ಕಾಂಗ್ರೆಸ್‌ಗೆ ‘ಅಮೃತ’ ಈ ಮಹೋತ್ಸವ

ಪಕ್ಷದ ಸಂಘಟನೆಗೆ ಹಾಗೂ 2023ರಲ್ಲಿ ಅಧಿಕಾರಕ್ಕೆ ಬರುವಂತೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಒಗ್ಗಟ್ಟಿನಿಂದ ಕೂಡಿರಬೇಕು. ನಮ್ಮದು ಶಿಸ್ತಿನ ಪಕ್ಷ. ಇಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಏನೇ ಇದ್ದರೂ ಪಕ್ಷದ ಪೂಜೆ ಮಾಡಿ ಎಂದು ಸೂಚನೆ ನೀಡಿದರು. ಸುಮಾರು 1ಗಂಟೆಗೂ ಅಧಿಕ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ, ಚುನಾವಣಾ ತಂತ್ರಗಾರಿಕೆ, ಬಿಜೆಪಿ ವೈಫಲ್ಯಗಳ ಬಗ್ಗೆಯೇ ಚರ್ಚೆ ನಡೆಯಿತು.

ಪಕ್ಷದ ಸಂಘಟನೆ ಹಾಗೂ 2023ರ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಸಭೆ ಅತ್ಯಂತ ಯಶಸ್ವಿಯಾಗಿದೆ. ಎಲ್ಲ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ನಡೆಯಲು ಸಹಮತ ಸೂಚಿಸಿದ್ದಾರೆ. ರಾಜ್ಯದ ಭ್ರಷ್ಟಸರ್ಕಾರದಿಂದ ಜನತೆ ರೋಸಿ ಹೋಗಿದ್ದಾರೆ. ಕಾಂಗ್ರೆಸ್‌ ಪರ ಒಲವು ಎಲ್ಲೆಡೆ ಇದೆ. ಈ ಹಿನ್ನೆಲೆಯಲ್ಲಿ ಈ ಭ್ರಷ್ಟ, ಲೂಟಿಕೋರ ಸರ್ಕಾರ ಇದೆ. ಬಿಜೆಪಿ ವಿರುದ್ಧ ಗಟ್ಟಿಧ್ವನಿಯಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದರು.

ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಲಂಚಗುಳಿತನ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವಾಡುತ್ತಿದೆ. ಅದಕ್ಕಾಗಿ ಸಂಘಟಿತ ಹೋರಾಟ ನಡೆಸಲಿದ್ದೇವೆ. ಬಿಜೆಪಿಯಲ್ಲಿ ಪಕ್ಷ ಸಂಘಟನೆಯಲ್ಲಿ ಎಷ್ಟುಒಳ್ಳೆಯ ಮ್ಯಾನೇಜಮೆಂಟ್‌ ಇದೆಯೋ ಅಷ್ಟೇ ಲೂಟಿ ಹೊಡೆಯುವಲ್ಲಿಯೂ ಪ್ಲ್ಯಾನ್‌ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಸಭೆಯಲ್ಲಿ ನಾಯಕತ್ವ ವಿಷಯವಾಗಿ ಚರ್ಚೆಯಾಗಿಲ್ಲ. ಸದ್ಯ ಪಕ್ಷ ರಾಜ್ಯದಲ್ಲಿ ಸರಿದಾರಿಯಲ್ಲಿ ನಡೆಯುತ್ತಿದೆ. ಅದೇ ದಾರಿಯಲ್ಲಿ ಮುಂದುವರಿಯುತ್ತದೆ. ನಾಯಕತ್ವ ಕುರಿತಂತೆ ಕೆಲ ನಾಯಕರ ಹೇಳಿಕೆಗಳಿಗೆ ಮಾನ್ಯತೆ ಕೊಡಲ್ಲ. ಇದೆಲ್ಲವೂ ನಾಯಕತ್ವದ ಪ್ರಶ್ನೆಗಳೆಲ್ಲ ಮಾಧ್ಯಮಗಳ ಸೃಷ್ಟಿ. ನಮ್ಮಲ್ಲಿ ಯಾವುದೆ ಗೊಂದಲಗಳಿಲ್ಲ ಎಂದು ಪುನರುಚ್ಛಿಸಿದರು.

ಮುಂದಿನ ಚುನಾವಣೆಗೆ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ವಿಚಾರ, ಟಿಕೆಟ್‌ ನೀಡುವ ಬಗ್ಗೆ ಪಕ್ಕಾ ಪ್ಲ್ಯಾನ್‌ ಮಾಡಿಕೊಂಡಿದೆ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಲೀಂ ಅಹ್ಮದ ಸೇರಿದಂತೆ ಹಲವರಿದ್ದರು.
 

Follow Us:
Download App:
  • android
  • ios