ನವದೆಹಲಿ (ನ. 27): ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಯಾರೇ ಮುಖ್ಯಮಂತ್ರಿ ಆಗಲಿ ಅವರೆಲ್ಲ ಅಹ್ಮದ್‌ ಪಟೇಲರನ್ನು ಚೆನ್ನಾಗಿ ನೋಡಿಕೊಳ್ಳಲೇ ಬೇಕಿತ್ತು. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಒಳಗೆ ಬಂದು ಮುಖ್ಯಮಂತ್ರಿ ಆಗಲು ಮೂಲ ಕಾರಣ ಅಹ್ಮದ್‌ ಪಟೇಲ್‌. ಖರ್ಗೆ ಒಮ್ಮೆಯೂ ಮುಖ್ಯಮಂತ್ರಿ ಆಗದೇ ಇರಲೂ ಅಹ್ಮದ್‌ ಭಾಯಿ ಜೊತೆಗಿದ್ದ ಅಷ್ಟಕಷ್ಟೇ ಸಂಬಂಧ ಕಾರಣ. ಅಹ್ಮದ್‌ ಪಟೇಲ್‌ ಜೊತೆಗೆ ಒಳ್ಳೆ ಸಮೀಕರಣ ಹೊಂದಿದ್ದ ಸಿದ್ದು 5 ವರ್ಷ ತನಗೆ ಹೇಗೆ ಬೇಕೋ ಹಾಗೆ ದಿಲ್ಲಿಯಿಂದ ನಿರ್ಣಯ ಮಾಡಿಸಿಕೊಂಡರು. 

ಸ್ವಲ್ಪ ದಿಲ್ಲಿ ವ್ಯಗ್ರವಾಗಿದ್ದು ಗೊತ್ತಾದರೆ ಸಾಕು, ಸಿದ್ದು ರಾತ್ರಿ 10 ಗಂಟೆಗೆ ಅಹ್ಮದ್‌ ಭಾಯಿ ಜೊತೆ ಕುಳಿತು ಮಾತಾಡಿ ಹೈಕಮಾಂಡನ್ನು ಶಾಂತಮಾಡಿಸಿ ಬರುತ್ತಿದ್ದರು. ಧರಂ ಸಿಂಗ್‌ ಕೂಡ ಅಹ್ಮದ್‌ ಪಟೇಲರಿಂದಲೇ ಅಧಿಕಾರ ಪಡೆದವರು. ಸಿದ್ದು, ಅಹ್ಮದ್‌ ಭಾಯಿಯನ್ನು ಖುಷಿ ಪಡಿಸಲೆಂದೇ ಸಲೀಂ ಅಹ್ಮದ್‌ ಅವರನ್ನು ದಿಲ್ಲಿ ಪ್ರತಿನಿಧಿ ಮಾಡಿ ಕೂರಿಸಿದ್ದರು. ಸಿದ್ದು ಕಲಿತಿದ್ದ ದಿಲ್ಲಿಯನ್ನು ಶಾಂತ ಮಾಡುವ ಕಲೆಯಲ್ಲಿ ಅಭಿಜಾತ ಕಾಂಗ್ರೆಸ್‌ನವರಾದ ಖರ್ಗೆ ಮತ್ತು ಪರಮೇಶ್ವರ್‌ ಹಿಂದೆ ಬಿದ್ದರು. 

ಇವತ್ತು ಏನೆಲ್ಲ ಸಮಸ್ಯೆ ಇದ್ದರೂ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಇರಲು ಕಾರಣ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್‌ ಭಾಯಿಗೆ ತೋರಿಸಿದ ನಿಷ್ಠೆ. ಅಂದಹಾಗೆ, ಸೋನಿಯಾರಿಗೆ ಯಾರು ಹೆಚ್ಚು ಆಪ್ತರು ಎನ್ನುವ ವಿಚಾರದಲ್ಲಿ ಆಸ್ಕರ್‌ ಫರ್ನಾಂಡಿಸ್‌ ಮತ್ತು ಅಹ್ಮದ್‌ ಪಟೇಲ್‌ ನಡುವೆ ಒಂದು ಪೈಪೋಟಿ ಯಾವತ್ತಿಗೂ ಇತ್ತು. 1984ರಲ್ಲಿ ಇಬ್ಬರೂ ಒಮ್ಮೆಯೇ ರಾಜೀವ್‌ ಗಾಂಧಿ ರಾಜಕೀಯ ಕಾರ್ಯದರ್ಶಿ ಆಗಿದ್ದರು ಅಲ್ಲವೇ?

ಕಾಂಗ್ರೆಸ್‌ನಲ್ಲಿ ಎಷ್ಟು ನಾಯಕರೋ ಅಷ್ಟು ಬಣಗಳು. ಆದರೆ ಸತತ ಸೋಲಿನ ನಂತರ ಕಾಂಗ್ರೆಸ್‌ ಇವತ್ತು ವಿಘಟನೆಯ ಸ್ಥಿತಿಯಲ್ಲಿದೆ. ಸೋನಿಯಾ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಅವರಿಗೆ ಆರೋಗ್ಯ ಇಲ್ಲ. ರಾಹುಲ… ಬಗ್ಗೆ ಯಾರಿಗೂ ಉತ್ಸಾಹ ಇಲ್ಲ. ಸೋನಿಯಾರ ಅಹ್ಮದ್‌ ಪಟೇಲ್‌ಗೆ ಇದ್ದಷ್ಟುರಾಜಕೀಯ ಜಾಣತನ, ಮುತ್ಸದ್ದಿತನ ರಾಹುಲ್ ಗಾಂಧಿಯ ಕೆ.ಸಿ.ವೇಣುಗೋಪಾಲ್ ಅವರಿಗೆ ಇಲ್ಲ. ಸೋನಿಯಾ ಜೊತೆಗಿದ್ದ ಅಂಬಿಕಾ ಸೋನಿ, ಶೀಲಾ ದೀಕ್ಷಿತ್‌, ಅಶೋಕ್‌ ಗೆಹ್ಲೋಟ್‌, ಆಸ್ಕರ್‌ ಫರ್ನಾಂಡಿಸ್‌, ಕಮಲನಾಥ್‌ ಇವರೆಲ್ಲ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರು. 

ಅಹ್ಮದ್ ಭಾಯಿ ಇಲ್ಲದ ಕಾಂಗ್ರೆಸ್, ಗಾಂಧಿ ಕುಟುಂಬದ ಕಥೆಯೇನು?

ಆದರೆ ರಾಹುಲ್ ಜೊತೆಗಿದ್ದ ಜ್ಯೋತಿರಾದಿತ್ಯ, ಸಚಿನ್‌ ಪೈಲಟ್‌ ಇವರೆಲ್ಲರಿಗೆ ಅಧಿಕಾರ ಬೇಕು ಮಹತ್ವಾಕಾಂಕ್ಷಿಗಳು. ಇವತ್ತಿನ ಕಾಂಗ್ರೆಸ್‌ಗೆ ಸೋನಿಯಾರಂಥ ಎಲ್ಲರನ್ನು ಸಂಭಾಳಿಸಬಲ್ಲ ನಾಯಕತ್ವ ಹೇಗೆ ಬೇಕೋ, ಹಾಗೆಯೇ ತೆರೆಯ ಹಿಂದೆ ಇದ್ದು ರಾಜಕೀಯ ಪ್ರಬಂಧನ ಮಾಡುವ ಅಹ್ಮದ್‌ ಪಟೇಲ…ರಂಥ ಜನಪ್ರಿಯತೆ, ಅಧಿಕಾರ ಬಯಸದ ನಿಷ್ಠಾವಂತರೂ ಬೇಕು. ಆದರೆ ಇವತ್ತಿನ ಕಾಂಗ್ರೆಸ್‌ಗೆ ನೇತೃತ್ವವೂ ಇಲ್ಲ, ಕುಶಲ ನಿಷ್ಠರೂ ಇಲ್ಲ. ಗಟ್ಟಿಸಿದ್ಧಾಂತ ಸಹ ಇಲ್ಲ. ಅತ್ಯಂತ ಸಂಕಷ್ಟದ ಕಾಲದಲ್ಲಿ ಅಹ್ಮದ್‌ ಪಟೇಲ್ ಎದ್ದು ಹೋಗಿದ್ದಾರೆ. ಇದರಿಂದ ಕಾಂಗ್ರೆಸ್‌ ಒಡೆದರೂ ಆಶ್ಚರ್ಯವಿಲ್ಲ.

ಅಮಿತ್‌ ಶಾ v/s ಪಟೇಲ್

ಮೂರು ಬಾರಿ ಗುಜರಾತಿನ ಭರೂಚ್‌ನಿಂದ ಲೋಕಸಭೆಗೆ ಗೆದ್ದಿದ್ದ ಅಹ್ಮದ್‌ ಪಟೇಲ್ 89ರಲ್ಲಿ ಗುಜರಾತ್‌ನಲ್ಲಿ ಹಿಂದುತ್ವದ ಅಲೆ ಶುರು ಆದ ನಂತರ ರಾಜ್ಯಸಭೆ ಮೂಲಕ ದಿಲ್ಲಿ ಸೇರಿಕೊಂಡಿದ್ದರು. ಆದರೆ ಸ್ವರಾಜ್ಯದ ಮೋಹ ನೋಡಿ, ಮೋದಿಯನ್ನು ಕಟ್ಟಿಹಾಕಲು ಏನೇನೋ ಮಾಡಿದರು. ಅಮಿತ್‌ ಶಾ ಹೇಳುವ ಪ್ರಕಾರ, ಸೊಹ್ರಾಬುದ್ದೀನ್‌ ಕೇಸಲ್ಲಿ ಜೈಲಿಗೆ ಹೋಗುವಂತೆ ಮಾಡಿದ್ದು ಅಹ್ಮದ್‌ ಪಟೇಲ್ ಇಬ್ಬರು ರಾಜ್ಯಸಭೆಯಲ್ಲಿದ್ದರೂ ಎದುರು ಬದುರು ಬಂದರೂ ಮಾತನಾಡುತ್ತಿರಲಿಲ್ಲ. ಇದೇ ಸೇಡಿನಿಂದ ಅಮಿತ್‌ ಶಾ 2017ರಲ್ಲಿ ಅಹ್ಮದ್‌ ಪಟೇಲ್‌ ರಾಜ್ಯಸಭೆಗೆ ಹೋಗದಂತೆ ತಡೆಯಲು ಆಕಾಶ ಪಾತಾಳ ಒಂದು ಮಾಡಿದರು. ಆದರೆ ಒಂದು ವೋಟಿನಲ್ಲಿ ಅಹ್ಮದ್‌ ಪಟೇಲ್‌ ಗೆದ್ದು ತೋರಿಸಿದರು. ಇವರಿಬ್ಬರ ಮಧ್ಯೆ ಹೋಗಿ ಡಿ.ಕೆ.ಶಿವಕುಮಾರ್‌ ಮೈಮೇಲೆ ಕೇಸ್‌ಗಳ ಮೇಲೆ ಕೇಸ್‌ ಎಳೆದುಕೊಂಡರು.

ನನ್ನ ಹೆಸರ ಮೇಲೆ ಅಂಗಡಿ!

ಕಾಂಗ್ರೆಸ್‌ನ ಸಿದ್ದು ಸಂಪುಟ ವಿಸ್ತರಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್‌ನ ಒಬ್ಬ ನಾಯಕಿ ಅಹ್ಮದ್‌ ಪಟೇಲ್ ಕಾರ್ಯದರ್ಶಿ ಎಂದು ಸುಳ್ಳು ಹೇಳಿದ ವ್ಯಕ್ತಿ ಒಬ್ಬನಿಗೆ 5 ಲಕ್ಷ ಕೊಟ್ಟು ಬಂದಿದ್ದರು. ಅದರಲ್ಲಿ ಒಬ್ಬ ಕನ್ನಡ ಪತ್ರಕರ್ತನ ಹೆಸರು ಹೇಳಿ ಸುಳ್ಳು ಫೋನ್‌ ಮಾಡಲಾಗಿತ್ತು. ದುಡ್ಡು ಕಳೆದುಕೊಂಡ ಮಂತ್ರಿ ಹೋಗಿ ಸಂಜಯ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಅದೇ ದಿನ ಪಾರ್ಲಿಮೆಂಟ್‌ ಗೇಟ್‌ ನಂಬರ್‌ 4ರ ಎದುರು ಅಹ್ಮದ್‌ ಪಟೇಲ್  ನಡೆಯುತ್ತಾ ಬರುತ್ತಿದ್ದರು. ನನ್ನನ್ನು ನೋಡಿದ ಕೂಡಲೇ ಕ್ಯಾ ಕರ್ನಾಟಕ ಥೀಕ್‌ ಹೈ ಎಂದರು. ನಾನು ಈ ಕೇಸ್‌ ಬಗ್ಗೆ ಹೇಳಿದಾಗ ಅಹ್ಮದ್‌ ಪಟೇಲ್‌ ಕೊಟ್ಟಉತ್ತರ, ‘ನನ್ನ ಹೆಸರು ಹೇಳಿ ಕಾಂಗ್ರೆಸ್‌ನಲ್ಲಿ ಅಂಗಡಿಗಳು ನಡೆಯುತ್ತವೆ. ಇದಕ್ಕೆ ನಾನು ಜವಾಬ್ದಾರನಲ್ಲ’ ಎಂದು ಕಾರು ಹತ್ತಿ ಹೋದರು. ಕಾಂಗ್ರೆಸ್‌ ವಲಯದಲ್ಲಿ ಯಾರಿಗಾದರೂ ಅಹ್ಮದ್‌ ಭಾಯಿ ಹೆಸರು ಹೇಳಿ ಸಾಕು ಕಣ್ಣುಗಳು ಸಹಜವಾಗಿ ಅರಳುತ್ತಿದ್ದವು, ಹುಬ್ಬುಗಳು ಮೇಲೇಳುತ್ತಿದ್ದವು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್‌ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ