ಅವಧಿ ಮುಗಿದ ಬಳಿಕ ರತ್ನಾ ನಾಮಪತ್ರ ಸ್ವೀಕೃತ: ಕಾಂಗ್ರೆಸ್ ಕಿಡಿ
ಅಕ್ರಮವಾಗಿ ನೀಡಿರುವ ಛಾಪಾಕಾಗದದ ಅಫಿಡವಿಟ್ ಅನ್ನು ಆಯೋಗ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿದೆ. ಆದರೆ, ಅಚ್ಚರಿ ಎಂಬಂತೆ ಏ.20ರಂದು ಖರೀದಿ ಮಾಡಿರುವ ಛಾಪಾ ಕಾಗದದ ದಾಖಲೆಯನ್ನು ಆಯೋಗವು ಏ.19ರಂದೇ ಅಪ್ಲೋಡ್ ಮಾಡಿರುವುದಾಗಿ ತಿಳಿಸಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು.
ಬೆಂಗಳೂರು(ಏ.25): ರಾಜ್ಯ ಚುನಾವಣಾ ಆಯೋಗ ಬಿಜೆಪಿ ಪರ ಕೆಲಸ ಮಾಡುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರು ಅಂತಿಮ ಗಡುವು ಮುಗಿದ ಬಳಿಕ ಸಲ್ಲಿಸಿದ ನಾಮಪತ್ರವನ್ನು ಅಂಗೀಕರಿಸಿದ್ದಾರೆ. ರಾಜಕೀಯ ಒತ್ತಡಗಳಿಗೆ ಮಣಿಯುತ್ತಿರುವ ಆಯೋಗದ ಕ್ರಮದ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 20ರಂದು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ಗಡುವು ವಿಧಿಸಲಾಗಿತ್ತು. ಆದರೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಡುವು ಮುಕ್ತಾಯದ ನಂತರ ಆಯೋಗಕ್ಕೆ ಅಫಿಡೆವಿಟ್ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಅಫಿಡವಿಟ್ ಛಾಪಾಕಾಗದವನ್ನು ಏ.20ರಂದು ಸಂಜೆ 7.38ಕ್ಕೆ ವಿಕಾಸ್ ಕೋ-ಆಪರೇಟಿವ್ ಸೊಸೈಟಿ ಸಹಕಾರ ಸಂಘದಿಂದ ಖರೀದಿ ಮಾಡಿದ್ದಾರೆ. ಇ-ಸ್ಟಾಂಪಿಂಗ್ ಕಾಯ್ದೆ ಪ್ರಕಾರ ಸಂಜೆ 5 ಗಂಟೆ ಬಳಿಕ ಇ-ಸ್ಟಾಂಪ್ ಕಾಗದ ನೀಡುವಂತಿಲ್ಲ ಎಂಬ ಕಾನೂನಿದೆ. ಆದರೂ ರಾತ್ರಿ ಛಾಪಾಕಾಗದ ನೀಡಲಾಗಿದೆ ಎಂದು ಆರೋಪ ಮಾಡಿದರು.
ನನ್ನ ವಿರುದ್ಧ ಲಿಂಗಾಯತರ ಎತ್ತಿ ಕಟ್ಟುವ ಯತ್ನ: ಸಿದ್ದರಾಮಯ್ಯ
ಅಕ್ರಮವಾಗಿ ನೀಡಿರುವ ಛಾಪಾಕಾಗದದ ಅಫಿಡವಿಟ್ ಅನ್ನು ಆಯೋಗ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿದೆ. ಆದರೆ, ಅಚ್ಚರಿ ಎಂಬಂತೆ ಏ.20ರಂದು ಖರೀದಿ ಮಾಡಿರುವ ಛಾಪಾ ಕಾಗದದ ದಾಖಲೆಯನ್ನು ಆಯೋಗವು ಏ.19ರಂದೇ ಅಪ್ಲೋಡ್ ಮಾಡಿರುವುದಾಗಿ ತಿಳಿಸಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯಾದ್ಯಂತ ತಾಂತ್ರಿಕ ಸಮಸ್ಯೆಯಿರುವ ಹಲವು ಬಿಜೆಪಿ ನಾಮಪತ್ರ ತಿರಸ್ಕೃತ ಆಗಬೇಕಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸ್ತಕ್ಷೇಪ ಮಾಡಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆಯೇ? ಯಾಕೆ ಈ ಲೋಪಗಳನ್ನು ಮಾಡಲಾಗಿದೆ ಎಂಬ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಆಯೋಗ ಈಗಲೂ ಸವದತ್ತಿ ಯಲ್ಲಮ್ಮ ಬಿಜೆಪಿ ಅಭ್ಯರ್ಥಿ ನಾಮಪತ್ರವನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಲಿದೆ. ಆ ಮೂಲಕ ನಿಮ್ಮ ಅಕ್ರಮ ಬಯಲಿಗೆಳೆಯುತ್ತೇವೆ. ಈ ಅಕ್ರಮದ ವಿರುದ್ಧ ಹೋರಾಟ ನಿಶ್ಚಿತ ಎಂದು ಹೇಳಿದರು.